ಮನೋರಂಜನೆ

ಸಿಂಪಲ್‌ ಸುನಿ; ಹೊಸ ಸ್ಟೋರಿ!

Pinterest LinkedIn Tumblr

crec05simple2_0ಟೀವಿ ಧಾರಾವಾಹಿಗಳಲ್ಲಿ ಹಲವು ವರ್ಷಗಳಿಂದ ಬಿಜಿಯಾಗಿರುವ ನಿರ್ಮಾಪಕ ಅಶು ಬೆದ್ರ, ಮೊದಲ ಬಾರಿಗೆ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ತೋರಿಸಿದ್ದ ಸುನಿ ಅವರಿಗೆ, ಇನ್ನೊಂದು ಸ್ಟೋರಿ ಹೇಳುವ ಉಸ್ತುವಾರಿಯನ್ನು ಅವರು ವಹಿಸಿದ್ದಾರೆ. ಚಿತ್ರೀಕರಣವನ್ನೆಲ್ಲ ಮುಗಿಸಿಕೊಂಡು ಬಂದ ಚಿತ್ರತಂಡದಲ್ಲಿ ಸಿನಿಮಾದ ಬಗ್ಗೆ ಆಶಾವಾದ ಎದ್ದು ಕಾಣುವಂತಿತ್ತು.

‘ಶೀರ್ಷಿಕೆಯೇ ಹೇಳುವಂತೆ ಇದು ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ. ವಾಸ್ತವದಲ್ಲಿ ಮೊದಲಿನ ಸಿನಿಮಾಕ್ಕೆ ಇದು ಬುನಾದಿ ಇದ್ದಂತೆ. ಅದರಲ್ಲಿ ನಾಯಕ – ನಾಯಕಿಯರ ಫ್ಲ್ಯಾಶ್ ಬ್ಯಾಕ್ ಇದ್ದರೆ ಇದರಲ್ಲಿ ಹೆಚ್ಚೆಚ್ಚು ಕಲ್ಪನೆ ಇದೆ’ ಎಂದು ಕಥೆ ಸಾಗುವ ದಾರಿಯನ್ನು ನಿರ್ದೇಶಕ ಸುನಿ ತೆರೆದಿಟ್ಟರು.

ಯಾವುದೋ ಒಂದು ಜಾಗಕ್ಕೆ ಹೋಗುವ ಮುನ್ನ ಅಲ್ಲಿ ಏನೆಲ್ಲ ಇರಬಹುದೆಂದು ಕಲ್ಪನೆ ಮಾಡುವುದು ಸಹಜ. ಆದರೆ ವಾಸ್ತವವಾಗಿ ಅಲ್ಲಿ ಬೇರೆಯದೇ ಆಗಿಬಿಟ್ಟಿರುತ್ತದೆ. ಈ ಕಲ್ಪನೆ ಹಾಗೂ ವಾಸ್ತವವನ್ನು ಒಂದು ಕಡೆ ತಂದು ಜೋಡಿಸುವ ಪ್ರಯತ್ನವನ್ನು ಸುನಿ ಮಾಡಿದ್ದಾರಂತೆ. ‘ತಲುಪುವ ಗುರಿಗಿಂತ ಅದನ್ನು ಮುಟ್ಟಲು ಸಾಗುವ ದಾರಿಯೇ ಎಷ್ಟೋ ಸಲ ಸುಂದರವಾಗಿರುತ್ತದೆ. ಅಂಥದೊಂದು ರಮ್ಯ ಪಯಣದ ಅನುಭವವನ್ನು ಈ ಲವ್‌ ಸ್ಟೋರಿಯಲ್ಲಿ ಪ್ರೇಕ್ಷಕ ಅನುಭವಿಸಲಿದ್ದಾನೆ’ ಎಂದು ಆತ್ಮವಿಶ್ವಾಸದ ನುಡಿ ಸುನಿ ಅವರದು.

ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿರುವ ಅಶು ಬೆದ್ರ, ಯಾವುದೇ ಕಿರಿಕಿರಿ ಇಲ್ಲದೇ ಚಿತ್ರೀಕರಣ ಮುಗಿದಿರುವುದಕ್ಕೆ ಖುಷಿಯಾಗಿದ್ದರು. ಅವರದೇ ಸಂಸ್ಥೆಯಿಂದ ನಿರ್ಮಾಣವಾಗಿದ್ದ ಧಾರಾವಾಹಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದ ಪ್ರವೀಣ್, ಈ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ‘ಮುಂದಿನ ದಿನಗಳಲ್ಲಿ ಪ್ರವೀಣ್ ಬೇಡಿಕೆಯ ನಟನಾಗಲಿದ್ದಾರೆ’ ಎಂದು ಅಶು ಭವಿಷ್ಯ ನುಡಿದರು.

‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಯಶಸ್ಸನ್ನು ನೋಡಿರುವ ಪ್ರವೀಣ್, ಅದರ ನೆರಳಿನಲ್ಲೇ ಈ ಚಿತ್ರವೂ ಯಶಸ್ಸು ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‘ತಲುಪುವ ತಾಣಕ್ಕಿಂತ ಅದನ್ನು ಮುಟ್ಟುವ ದಾರಿಯೇ ಚೆಂದ ಎಂಬ ಸಂದೇಶ ಈ ಚಿತ್ರದಲ್ಲಿದೆ’ ಎಂದು ನಾಯಕಿ ಮೇಘನಾ ಹೇಳಿದರು.

ವಾಚಾಳಿ ಬಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಾ. ಹೇಮಂತ್, ಸಂಗೀತ ಹೊಸೆದಿರುವ ಭರತ್ ಬಿ.ಜೆ. ಹಾಗೂ ಕ್ಯಾಮೆರಾ ಹಿಡಿದಿರುವ ದರ್ಶನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇನ್ನು ಎರಡು ವಾರದಲ್ಲಿ ಆಡಿಯೊ ಬಿಡುಗಡೆ ಮಾಡಿ, ತಿಂಗಳ ಅಂತ್ಯಕ್ಕೆ ಚಿತ್ರವನ್ನು ತೆರೆ ಕಾಣಿಸುವ ಯೋಜನೆಯನ್ನು ಸುನಿ ತೆರೆದಿಟ್ಟರು.

Write A Comment