ಕನ್ನಡ ವಾರ್ತೆಗಳು

ಜಿಲ್ಲಾ ಪಂಚಾಯಿತಿ ಚುಣಾವಣೆಯ 36 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ.

Pinterest LinkedIn Tumblr

congres_press_meet_1

ಮಂಗಳೂರು,ಫೆ.06 : ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲ್ಲೂಕು ಪಂಚಾಯಿತಿಗಳ 36 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಜಿಲ್ಲಾ ಕಾಂಗ್ರೆಸ್‌ ಸಮಿತಿ ಶುಕ್ರವಾರ ಪ್ರಕಟಿಸಿದೆ. ಕೆಲವು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ತೀವ್ರ ಪೈಪೋಟಿ ಇರುವ ಕಾರಣದಿಂದ ಜಿಲ್ಲೆಯ ಐದು ತಾಲ್ಲೂಕು ಪಂಚಾಯಿತಿಗಳ 136 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಸೋಮವಾರ ಬಹಿರಂಗಪಡಿಸಲು ಕಾಂಗ್ರೆಸ್ ನಿರ್ಧರಿಸಿದೆ.

ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್‌ನ ಸದಸ್ಯಬಲ 11 ಇದೆ. ಹಾಲಿ ಸದಸ್ಯರ ಪೈಕಿ ಎಂ.ಎಸ್‌.ಮಹಮ್ಮದ್, ಮಮತಾ ಗಟ್ಟಿ, ಚಂದ್ರಪ್ರಕಾಶ್ ಶೆಟ್ಟಿ ಮತ್ತು ಸರಸ್ವತಿ ಕಾಮತ್ ಅವರಿಗೆ ಮಾತ್ರ ಪುನಃ ಸ್ಪರ್ಧೆಗಿಳಿಯುವ ಅವಕಾಶ ನೀಡಲಾಗಿದೆ. ಮೀಸಲಾತಿ ಬದಲಾವಣೆ, ಹೆಚ್ಚಿದ ಪೈಪೋಟಿ ಮತ್ತಿತರ ಕಾರಣಗಳಿಂದಾಗಿ ಕಾಂಗ್ರೆಸ್‌ನ ಏಳು ಹಾಲಿ ಸದಸ್ಯರು ಮತ್ತೆ ಪಕ್ಷದಿಂದ ಜಿಲ್ಲಾ ಪಂಚಾಯಿತಿ ಚುನಾವಣಾ ಅಖಾಡಕ್ಕಿಳಿಯುವ ಅವಕಾಶ ಕಳೆದುಕೊಂಡಿದ್ದಾರೆ.

congres_press_meet_2 congres_press_meet_3 congres_press_meet_4

ಪಕ್ಷದ ವೀಕ್ಷಕರಾದ ವಿ.ಆರ್‌.ಸುದರ್ಶನ್‌ ಅವರೊಂದಿಗೆ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಒಂದೇ ಕಂತಿನಲ್ಲಿ ಜಿಲ್ಲಾ ಪಂಚಾಯಿತಿಯ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ತಾಲ್ಲೂಕು ಪಂಚಾಯಿತಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು, ಸೋಮವಾರ ಬೆಳಿಗ್ಗೆ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಮುನ್ನ ಸಚಿವರಾದ ಯು.ಟಿ.ಖಾದರ್, ಕೆ.ಅಭಯಚಂದ್ರ ಜೈನ್, ಶಾಸಕರಾದ ವಸಂತ ಬಂಗೇರ, ಶಕುಂತಳಾ ಶೆಟ್ಟಿ, ಮೊಯಿದ್ದೀನ್‌ ಬಾವಾ, ಜೆ.ಆರ್‌.ಲೋಬೊ, ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯಾಗಿರುವ ಡಾ.ರಘು ಅವರ ಅಭಿಪ್ರಾಯಗಳನ್ನು ಪಡೆಯಲಾಗಿದೆ. ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ, ಸಂಸದರಾದ ಆಸ್ಕರ್‌ ಫರ್ನಾಂಡಿಸ್‌ ಮತ್ತು ಎಂ.ವೀರಪ್ಪ ಮೊಯಿಲಿ ಅವರ ಮಾರ್ಗದರ್ಶನವನ್ನೂ ಪಡೆಯಲಾಗಿತ್ತು ಎಂದರು.

ಕಾಂಗ್ರೆಸ್‌ ಪಕ್ಷವು ಸಾಮಾಜಿಕ ನ್ಯಾಯದ ತತ್ವದಲ್ಲಿ ನಂಬಿಕೆ ಇರಿಸಿದೆ. ಈ ಕಾರಣದಿಂದಾಗಿಯೇ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಹೆಚ್ಚಿನ ಅಭ್ಯರ್ಥಿಗಳ ಸ್ಪರ್ಧೆಗೆ ಅವಕಾಶ ನೀಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ರೈ ಹೇಳಿದರು.

ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅಭ್ಯರ್ಥಿಗಳ ಆಯ್ಕೆ ಸಂಬಂಧ ರಮಾನಾಥ ರೈ ಮತ್ತು ಶಕುಂತಳಾ ಶೆಟ್ಟಿ ನಡುವೆ ವಾಗ್ವಾದ ನಡೆದಿದೆ ಎಂಬುದನ್ನು ಅಲ್ಲಗಳೆದ ಅವರು, ‘ಹೆಚ್ಚು ಆಕಾಂಕ್ಷಿಗಳು ಇದ್ದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿಸ್ತೃತವಾಗಿ ಚರ್ಚೆ ನಡೆದಿರುವುದು ನಿಜ. ಅಭಿಪ್ರಾಯ ಮಂಡನೆಗೆ ಅವಕಾಶ ಇತ್ತು. ಆದರೆ, ಈ ಸಂಬಂಧ ಸಚಿವರು ಮತ್ತು ಶಾಸಕರ ನಡುವೆ ವಾಗ್ವಾದ ನಡೆದಿದೆ ಎಂಬುದು ಸತ್ಯಕ್ಕೆ ದೂರವಾದುದು’ ಎಂದರು.

ಶಕುಂತಳಾ ಶೆಟ್ಟಿ, ಐವನ್‌ ಡಿಸೋಜ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Write A Comment