ಮ೦ಗಳೂರು ಫೆ.06: ಗೇರು ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯ ವಾಣಿಜ್ಯ ಬೆಳೆಯಾಗಿದೆ. ಗೇರು ಬೆಳೆಯನ್ನು ಸುಮಾರು ೪೦ಕ್ಕೂ ಹೆಚ್ಚು ಜಾತಿಯ ಕೀಟಗಳು ವಿವಿಧ ಹಂತದಲ್ಲಿ ಹಾನಿ ಮಾಡುವುದಾದರೂ, ಆರ್ಥಿಕವಾಗಿ ಹಾನಿ ಮಾಡುವ ಕೀಟಗಳೆಂದರೆ ಟೀ ಸೊಳ್ಳೆ, ಕಾಂಡ /ಬೇರು ಕೊರೆಯುವ ಕೀಟ ಮತ್ತು ಎಲೆ ಸುರಂಗ ಕೀಟ.
(ಬೊಬ್ಬೆ ಹುಳು): ಚಹಾ ಸೊಳ್ಳೆ/ ಟೀ ಸೊಳ್ಳೆ: ಟೀ ಸೊಳ್ಳೆಯ ತಿಗಣೆಗಳು ಹಾಗೂ ಅವುಗಳ ಅಪ್ಸರೆಗಳು ಹೊಸ ಚಿಗುರಿನಿಂದ, ಹೂ ಗೊಂಚಲುಗಳಿಂದ, ಎಳೆಯ ಬೀಜಗಳಿಂದ ರಸ ಹೀರುವಾಗ ಒಂದು ರೀತಿಯ ವಿಷ ಪದಾರ್ಥವನ್ನು ಗಿಡದಲ್ಲಿ ಬಿಡುವುದರಿಂದ ಆ ಭಾಗ ಕಂದು ಬಣ್ಣಕ್ಕೆ ತಿರುಗಿ ಸುಟ್ಟಂತಾಗಿ ಒಣಗುತ್ತದೆ. ಎಳೆಯ ಕಾಯಿಗಳು ಕಪ್ಪಾಗಿ ಉದುರುತ್ತವೆ. ಬಾಧೆಯು ಸಾಮಾನ್ಯವಾಗಿ ಹೊಸ ಚಿಗುರಿನಿಂದ ಪ್ರಾರಂಭವಾಗಿ ಹೂ ಗೊಂಚಲು ಬಂದು, ಕಾಯಿ ಕಟ್ಟುವ ಸಮಯದಲ್ಲಿ ಗರಿಷ್ಟ ಪ್ರಮಾಣಕ್ಕೆ ತಗುಲುತ್ತದೆ.
ಗೇರು ಬೆಳೆಯುವ ಎಲ್ಲಾ ಪ್ರದೇಶಗಳಲ್ಲಿ ಮತ್ತು ಎಲ್ಲಾ ವಯಸ್ಸಿನ ಗಿಡಗಳಿಗೂ ಇದು ಹಾನಿ ಮಾಡುತ್ತದೆ. ಒಂದು ಟೀ ಸೊಳ್ಳೆ 3 ರಿಂದ 4ದಿವಸಗಳಲ್ಲಿ ಒಂದು ಚಿಗುರು ಅಥವಾ ಹೂ ಗೊಂಚಲನ್ನು ನಾಶಮಾಡಬಲ್ಲದು.
ಪ್ರೌಢ ಕೀಟವು 6-8 ಮಿ.ಮಿ. ಉದ್ದವಿದ್ದು, ರೆಕ್ಕೆ ಬಂದನಂತರ ಗಿಡದಿಂದ ಗಿಡಕ್ಕೆ ಹಾರಬಲ್ಲದ್ದು, ಹಾಗೂ 5 ರಿಂದ 10 ದಿವಸಗಳ ಕಾಲ ಬದುಕಿರುತ್ತದೆ. ಮರಿ ತಿಗಣೆಗಳು ದೊಡ್ಡ ಇರುವೆಗಳನ್ನು ಹೋಲುತ್ತದೆ. ಇದರ ಹಾನಿಯ ಪ್ರಮಾಣ ಶೇ. 20 ರಿಂದ 60 ರವರೆಗೂ ಇರುತ್ತದೆ.
ಆಸರೆ ಸಸ್ಯಗಳು: ಕೊಕೋ, ಸೀಬೆ, ಬೇವು, ಮಹಾಗನಿ, ಸಿಂಕೋನ, ಸೆಣಬು, ಹುಣಸೆ.
ಹತೋಟಿ ಕ್ರಮಗಳು: ಟೀ ಸೊಳ್ಳೆಯನ್ನು ಸಮರ್ಪಕ ರೀತಿಯಲ್ಲಿ ಹತೋಟಿ ಮಾಡಲು ಸಾಮಾನ್ಯವಾಗಿ ಗಿಡಗಳ ಬೆಳೆವಣಿಗೆ ಹಂತ, ವಾತಾವರಣ, ಟೀ ಸೊಳ್ಳೆ ಅಭಿವೃದ್ಧಿ ಇತ್ಯಾದಿ ಅಂಶಗಳನ್ನು ಅವಲಂಭಿಸಿ ಕೀಟನಾಶಕಗಳನ್ನು 2-3 ಬಾರಿ ಸಿಂಪರಣೆ ಮಾಡಬೇಕು. ಚಿಗುರು ಬರುವಾಗ, ಹೂ ಗೊಂಚಲು ಬರುವಾಗ ಹಾಗೂ ಕಾಯಿ ಕಟ್ಟುವಾಗ ಹೀಗೆ ೩ ಸಾರಿ ಸಿಂಪಡಿಸಬೇಕಾಗುತ್ತದೆ.
ಕಾಯಿ ಕಟ್ಟುವಾಗ (ಫೆಬ್ರವರಿ ಎಪ್ರಿಲ್) ತಿಂಗಳ ಅವಧಿಯಲ್ಲಿ 1ಮಿ.ಲೀ. ಲ್ಯಾಂಬ್ಡಸೈಲೋಥ್ರಿನ್ ಅಥವಾ 4ಗ್ರಾಂ ಕಾರ್ಬಾರಿಲ್ ಅಥವಾ 1. 7ಮಿ.ಲೀ ಡೈಮಿಥೋಯೇಟ್ ಅಥವಾ ೨ ಮೀ.ಲೀ ಕ್ಲೋರೋಪೈರೊಪಾಸ್ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಗಿಡಗಳ ಬೆಳವಣಿಗೆಯ ಹಂತವು ತಳಿಗಳನ್ನು ಅನುಸರಿಸಿರುವುದರಿಂದ, ಸಿಂಪರಣೆಯ ಸಮಯದಲ್ಲಿ ಸ್ವಲ್ಪ ಬದಲಾವಣೆಯಾಗಬಹುದು. ಮೂರು ಸಿಂಪರಣೆಗೆ ಬೇರೆ ಬೇರೆ ಕೀಟನಾಶಕಗಳನ್ನು ಬಳಸುವುದು ಸೂಕ್ತ.
ಕಾಂಡ ಮತ್ತು ಬೇರು ಕೊರೆಯುವ ಹುಳು
ಪ್ರೌಢ ಕೀಟಗಳು ಗಾಢ ಕಂದು ಬಣ್ಣಕ್ಕಿದ್ದು. ಕುಡಿ ಮೀಸೆಗಳು ದೇಹದಷ್ಟು ಉದ್ದವಾಗಿರುತ್ತದೆ. ರಾತ್ರಿಯ ವೇಳೆ ಹೆಣ್ಣು ದುಂಬಿಗಳು ಕಾಂಡದ ಮೇಲೆ ಹಾಗೂ ತೆರೆದ ಬೇರುಗಳ ಮೇಲೆ, ನೆಲದಿಂದ ಒಂದು ಮೀಟರ್ ಎತ್ತರದವರೆಗೆ ತೊಗಟೆಯ ಸಂದುಗಳಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಈ ಮೊಟ್ಟೆಗಳಿಂದ 5-7 ದಿನಗಳ ಅವಧಿಯಲ್ಲಿ ಸಣ್ಣ ಮರಿಹುಳುಗಳು ಹೊರ ಬಂದು ಕೂಡಲೇ ತೊಗಟೆಯನ್ನು ಕೊರೆಯಲು ಪ್ರಾರಂಭಿಸುತ್ತವೆ. ಈ ಮರಿಹುಳುಗಳು 6 ರಿಂದ 8 ತಿಂಗಳ ಕಾಲ ಅತಿಯಾಗಿ ಗೇರು ಕಾಂಡದ ತಿರುಳನ್ನು ಆಹಾರವಾಗಿ ಸೇವಿಸುತ್ತಾ ಗಾತ್ರದಲ್ಲಿ ಬೇಗನೇ ದೊಡ್ಡದಾಗುತ್ತವೆ ಹಾಗೂ ತಾವು ಮಾಡಿದ ಸುರಂಗಗಳನ್ನು ಜಗಿದ ನಾರು ಹಾಗೂ ಹಿಕ್ಕೆಗಳಿಂದ ತುಂಬಿಸುತ್ತವೆ. ಇವುಗಳು ಅಡ್ಡಾದಿಡ್ಡಿ ಕೊರೆಯುವ ಸುರಂಗಗಳು ಮರದ ಕಾಂಡ ಹಾಗೂ ಬೇರುಗಳಲ್ಲಿ ನೀರಿನ ಸಂಚಲನೆಗೆ ತೊಡಕು ಉಂಟುಮಾಡಿ ಆಕಾಲಿಕ ಎಲೆ ಉದುರುವಿಕೆ, ಕೊಂಬೆಗಳ ಒಣಗುವಿಕೆ ಹಾಗೂ ಮರದ ನಿಧಾನ ಸಾಯುವಿಕೆಗೆ ಕಾರಣವಾಗುತ್ತವೆ. ಪೂರ್ಣ ಬೆಳೆದ ಮರಿಹುಳುಗಳು ಕಾಂಡದ ನಡುಮರದಲ್ಲಿ ಸುರಂಗ ಮಾಡಿ ಸುಣ್ಣ ಭರಿತವಾದ ಗಟ್ಟಿ ಕೋಶಗಳನ್ನು ನಿರ್ಮಿಸಿಕೊಳ್ಳುತ್ತವೆ. ಕೀಟವು ಇಂತಹ ಕೋಶಗಳಲ್ಲಿ 60-90 ದಿನಗಳ ಕಾಲ ಇದ್ದು, ನಂತರ ಇವುಗಳು ವಯಸ್ಕ ದುಂಬಿಗಳಾಗಿ ಹೊರ ಬಂದು ಜೀವನ ಚಕ್ರವನ್ನು ಮುಂದುವರಿಸುತ್ತವೆ.
ಸಾಧಾರಣವಾಗಿ ಕೀಟ ಹಾನಿಯು ಡಿಸೆಂಬರ್ ನಿಂದ ಮೇ ತಿಂಗಳ ನಡುವೆ ಗೇರು ಬೆಳೆಯುವ ವಿವಿಧ ಪ್ರದೇಶಗಳಲ್ಲಿ ಕಂಡುಬರುತ್ತದೆ. ಹಾನಿಯ ವಿವಿಧ ಹಂತಗಳು ಸಾಮಾನ್ಯವಾಗಿ ವರ್ಷ ಪೂರ್ತಿ ಕಂಡುಬರುತ್ತವೆ. ಮಳೆಗಾಲದ ಆರಂಭದೊಂದಿಗೆ ಆರೋಗ್ಯವಂತ ಮರಗಳು ಕಡು ಹಸಿರು ಬಣ್ಣಕ್ಕೆ ತಿರುಗುತ್ತವೆ. ಆದಾಗ್ಯೂ ಬಾಧಿತ ಮರಗಳು ಹಳದಿ ಬಣ್ಣದಲ್ಲೇ ಉಳಿಯುತ್ತವೆ.
ನಿರ್ವಹಣೆ: ಈ ಕೀಟವು ಹಾನಿ ಮಾಡುವ ಹಂತ ಹೊರಗೆ ಕಾಣಿಸದೆ, ಕಾಂಡದ ಒಳಗಡೆಯೇ ಇರುವುದರಿಂದ ಸಕಾಲದಲ್ಲಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವುದರಿಂದ ಬಾಧೆಯ ಪ್ರಮಾಣವನ್ನು ಕಡಿಮೆ ಮಾಡುವುದು ಸಾಧ್ಯ.
೧. ತೋಟದ ಸ್ವಚ್ಛತೆ ಕಾಪಾಡಿಕೊಳ್ಳುವುದು: ಗೇರು ಬೀಜಗಳನ್ನು ಸಂಗ್ರಹಿಸುವ ಸಮಯದಲ್ಲಿ, ಮರಗಳ ಬುಡಗಳನ್ನು ಸಮೀಪದಿಂದ ಗಮನಿಸಿದರೆ ಹಾನಿಯ ಪ್ರಾರಂಭದ ಹಂತಗಳನ್ನು ಪತ್ತೆ ಮಾಡಿ ಕೂಡಲೇ ಸೂಕ್ತವಾಗಿ ಉಪಚರಿಸಬಹುದಾಗಿದೆ.
೨. ಕೀಟದ ಇತರೆ ಅಸರೆ ಸಸ್ಯಗಳನ್ನು ಹಲಸು, ನುಗ್ಗೆ, ಅಂಜೂರ ಇತ್ಯಾದಿಗಳು. ಗೇರು ತೋಟ ಮತ್ತು ಸುತ್ತಮುತ್ತಲೂ ಹತ್ತಿರದಲ್ಲಿ ಬೆಳೆಸಬಾರದು. ಈ ಮರಗಳಲ್ಲಿ ಕಾಂಡ ಕೊರೆಯುವ ಹುಳ ಅಭಿವೃದ್ಧಿಯಾಗಿ ಗೇರು ಮರಗಳಿಗೆ ಹೆಚ್ಚು ಬಾಧೆ ಉಂಟು ಮಾಡುತ್ತದೆ.
ಹತೋಟಿ ಕ್ರಮಗಳು :
೧. ಮರಗಳ ಕಾಂಡದ ಮೇಲೆ 1 ಮೀ. ಎತ್ತರದವರೆಗೆ 1 ಲೀ ನೀರಿಗೆ. ಲ್ಯಾಂಬ್ಡಸೈಲೋಥ್ರಿನ್1.5 ಮೀ.ಲೀ. ದ್ರಾವಣವನ್ನು ವರ್ಷದಲ್ಲಿ ಎರಡು ಬಾರಿ (ಮುಂಗಾರಿಗೆ ಮುನ್ನ ಮತ್ತು ಮಳೆಗಾಲದ ನಂತರ) ಹಚ್ಚುವುದರಿಂದ ಬಾಧೆಯನ್ನು ಕಡಿಮೆಮಾಡಬಹುದು.
೨. ಎಳೆಯ ಮರಗಳಿಗೆ ಕಾಂಡ ಕೊರೆತದ ಬಾಧೆ ಕಂಡು ಬಂದಲ್ಲಿ ಪ್ರತಿ ಗಿಡಕ್ಕೆ 25 ಗ್ರಾಂನಂತೆ ಕಾರ್ಬೊಫ್ಯುರಾನ್ ಅಥವಾ ಫೋರೇಟ್ ಹರಳನ್ನು ಗಿಡದ ಸುತ್ತಲೂ ಮಣ್ಣಿಗೆ ಸೇರಿಸಬೇಕು.
೩. ಪ್ರಾರಂಭದಲ್ಲಿಯೇ ಬುಡಭಾಗದಲ್ಲಿ ತೋಗಟೆಯನ್ನು ಕೆತ್ತಿ ತೆಗೆದು ಹುಳುಗಳನ್ನು ನಾಶ ಮಾಡಿ ಕೆತ್ತಿದ ಭಾಗಕ್ಕೆ1 ಲೀ. ನೀರಿನಲ್ಲಿ 50ಗ್ರಾಂ. ಕಾಪರ್ ಆಕ್ಸಿಕ್ಲೋರೈಡ್+ 10ಮಿ. ಲೀ. ಕ್ಲೋರೋಪೈರಿಫಾಸ್ ಬೆರೆಸಿದ ಮಿಶ್ರಣವನ್ನು ಚೆನ್ನಾಗಿ ಲೇಪಿಸಬೇಕು.
ಎಲೆ ಸುರಂಗ ಕೀಟ (ಬೊಬ್ಬೆ ಹುಳ)
ಈ ಕೀಟದ ಮರಿಹುಳುಗಳು ಹೊಸಚಿಗುರು ಇರುವಾಗ ಎಲೆಯ ಮೇಲ್ಪೋರೆಯ ಅಡಿಯಲ್ಲಿ ಬೆಳ್ಳಿಯಂತಹ ಹೊಳಪುಳ್ಳ ಸುರಂಗ ಮಾಡಿಕೊಂಡು, ಎಲೆಯ ಹಸಿರುಭಾಗ (ಹರಿತ್ತು)ವನ್ನು ತಿನ್ನುತ್ತವೆ. ಹಾಗಾಗಿ ಹಾನಿಗೊಳಗಾದ ಭಾಗವು ಬಿಸಿಲಿಗೆ ಒಣಗಿ, ಎಲೆಯು ಮುರುಟುತ್ತದೆ. ಇದರಿಂದ ಎಲೆಯ ದ್ಯುತಿಸಂಶ್ಲೇಷಣಾ ಕ್ರಿಯೆಯು ಕುಂಠಿತವಾಗುತ್ತದೆ.
ಹತೋಟಿ ಕ್ರಮಗಳು: 1.7 ಮಿಲೀ. ಡೈಮಿಥೋಯೇಟ್ 30 ಇಸಿ ಅಥವಾ 1 ಮಿಲೀ ಮೊನೋಕ್ರೋಟೋಫಾಸ್ 36 ಇಸಿ ಎಸ್ ಎಲ್ ಅಥವಾ 4 ಗ್ರಾಂ ಕಾರ್ಬಾರಿಲ್ ಅಥವಾ 1 ಮಿಲೀ. ಲ್ಯಾಂಬ್ಡಸೈಲೋಥ್ರಿನ್ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು ಎಂದು ತೋಟಗಾರಿಕಾ ಇಲಾಖೆ ಪ್ರಕಟಣೆ ತಿಳಿಸಿದೆ.
