ಲಾಹೋರ್ (ಪಿಟಿಐ): ಪಠಾಣ್‌ಕೋಟ್ ಮೇಲಿನ ಉಗ್ರರ ದಾಳಿ ಘಟನೆ ಸಂಬಂಧ ಭಾರತದಿಂದ ಮತ್ತಷ್ಟು ಪುರಾವೆಗಳನ್ನು ಕೇಳುವುದಾಗಿ ಪಾಕಿಸ್ತಾನವು ಸೋಮವಾರ ಹೇಳಿದೆ.
ಉಗ್ರ ದಾಳಿ ಘಟನೆಯ ತನಿಖೆಯ ಸಾರವನ್ನು ಶೀಘ್ರವೇ ಬಹಿರಂಗಪಡಿಸಲಾಗುವುದು ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ಹೇಳಿದ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ.
ಭಾರತದ ಬಳಿ ಮತ್ತಷ್ಟು ಸಾಕ್ಷ್ಯಗಳನ್ನು ಕೇಳುವಂತೆ ಕೋರಿ ವಿದೇಶಾಂಗ ಸಚಿವಾಲಯಕ್ಕೆ ಪಠಾಣ್‌ಕೋಟ್ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ಆರು ಸದಸ್ಯರ ಪಾಕಿಸ್ತಾನಿ ತಂಡವು ಪತ್ರ ಬರೆದಿದೆ.
‘ಚೆಂಡು ಮತ್ತೆ ಭಾರತದ ಅಂಗಳದಲ್ಲಿದೆ. ತನಿಖೆ ಮುಂದುವರೆಸಲು ನಮಗೆ ಮತ್ತಷ್ಟು ಸಾಕ್ಷ್ಯಗಳು ಬೇಕಿವೆ’ ಎಂದು ತನಿಖಾ ತಂಡದ ಮೂಲವೊಂದು ತಿಳಿಸಿದೆ.
‘ಭಾರತ ಸರ್ಕಾರವು ನೀಡಿದ್ದ ಐದು ಮೊಬೈಲ್ ಸಂಖ್ಯೆಗಳ (ಪಾಕಿಸ್ತಾನದಿಂದ ಭಾರತಕ್ಕೆ ದೂರವಾಣಿ ಕರೆಗಳನ್ನು ಮಾಡಲು ಬಳಸಲಾಗಿದೆ ಎನ್ನಲಾದ) ಕುರಿತ ತನಿಖೆಯನ್ನು ತಂಡವು ಬಹುತೇಕ ಪೂರ್ಣಗೊಳಿಸಿದೆ. ಅವು ದಾಖಲಿಸದ ಸಂಖ್ಯೆಗಳಾಗಿದ್ದು, ನಕಲಿ ವಿಳಾಸಗಳನ್ನು ಹೊಂದಿವೆ. ಅವುಗಳಿಂದ ಹೆಚ್ಚಿನ ಸುಳಿವು ದೊರೆತಿಲ್ಲ’ ಎಂದೂ ಆ ಮೂಲ ಹೇಳಿದೆ.
‘ತನಿಖೆ ಇದನ್ನು ದಾಟಿ ಮುಂದೆಹೋಗುತ್ತಿಲ್ಲ. ತಂಡಕ್ಕೆ ಮತ್ತಷ್ಟು ಪುರಾವೆಗಳ ಅಗತ್ಯವಿದೆ. ಆದ್ದರಿಂದ ಭಾರತದೊಟ್ಟಿಗೆ ಮಾತನಾಡಿ, ಪರಿಸ್ಥಿತಿಯನ್ನು ವಿವರಿಸಿ ಮತ್ತಷ್ಟು ಸಾಕ್ಷ್ಯಗಳಿಗೆ ಬೇಡಿಕೆ ಇಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಠಾಣ್‌ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿ ಘಟನೆ ಸಂಬಂಧ ವಶಕ್ಕೆ ಪಡೆದಿರುವ ಜೈಷ್–ಎ–ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಹಾಗೂ ಇತರರ ಕುರಿತ ಪ್ರಶ್ನೆಗೆ ಅವರು ‘ಮೊದಲು ಭಾರತದಿಂದ ಹೆಚ್ಚಿನ ಪುರಾವೆಗಳು ಬರಲಿ ಬಿಡಿ’ ಎಂದು ಪ್ರತಿಕ್ರಿಯಿಸಿದ್ದಾರೆ.