ಮೆಲ್ಬರ್ನ್ (ಐಎಎನ್ಎಸ್): ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದ ರೋಹನ್ ಬೋಪಣ್ಣ ಹಾಗೂ ಯುಂಗ್ ಜಾನ್ ಚಾನ್ ಅವರು ಆಸ್ಟ್ರೇಲಿಯಾ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು.
ಇಂಡೋ– ಚೀನಾ ತೈಪೆಯ ಜೋಡಿಯು 2–6, 5–7ರಲ್ಲಿ ಅಂದ್ರೆಜಾ ಕ್ಲೆಪಾಕ್ ಹಾಗೂ ಟ್ರೀಟ್ ಹ್ಯುಯಿ ಎದುರು ಸೋತರು.
ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಪಡೆದಿದ್ದ ಬೋಪಣ್ಣ–ಚಾನ್ ಜೋಡಿಯು ಉತ್ತಮ ಆರಂಭ ಪಡೆದಿತ್ತು. ಮೊದಲ ಸೆಟ್‌ನಲ್ಲಿ ಆರು ಯತ್ನಗಳ ಪೈಕಿ ನಾಲ್ಕು ಬಾರಿ ಎದುರಾಳಿಗಳ ಸರ್ವ್ ಮುರಿಯಿತು. ವಿನ್ನರ್‌ಗಳ ಮೂಲಕವೂ ಪಾಯಿಂಟ್ ಕಲೆ ಗಳಿಸಿತು.ಆದರೆ, ಅನಗತ್ಯ ತಪ್ಪುಗಳು ದುಬಾರಿಯಾದವು.
ಬಲಿಷ್ಠ ಸರ್ವ್ ಹಾಗೂ ಆಕರ್ಷಕ ಹೊಡೆತಗಳ ಮೂಲಕ ಎದುರಾಳಿ ಆಟಗಾರರು ಅಂಗಳದಲ್ಲಿ ಮಿಂಚು ಹರಿಸಿದರು. ಒಟ್ಟು 112ರ ಪೈಕಿ 59 ಪಾಯಿಂಟ್‌ಗಳನ್ನು ಗೆದ್ದರು. 21 ನಿಮಿಷಗಳಲ್ಲಿ ಮೊದಲ ಸೆಟ್ ಬಾಚಿದರು.
ಎರಡನೇ ಸೆಟ್‌ನಲ್ಲಿ ಇಂಡೋ– ಚೀನಾ ತೈಪೆಯ ಜೋಡಿ ಪ್ರಬಲ ಪೈಪೋಟಿ ಒಡ್ಡಿದರು. ಆದರೆ, ಸರ್ವ್‌ವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಿರುಸಿನ ಆಟವಾಡಿದ ಸ್ಲೊವೆನಿಯಾ- ಫಿಲಿಪ್ಪಿನೊ ಜೋಡಿಯು ಎರಡು ಬಾರಿ ಸರ್ವ್ ಮುರಿಯಿತು. ಕೇವಲ 54 ನಿಮಿಷಗಳಲ್ಲಿ ಗೆಲುವಿನ ನಗೆ ಚೆಲ್ಲಿತು.