
ಮಂಗಳೂರು: ಪತ್ರಕರ್ತರಲ್ಲೂ ಸಾಕಷ್ಟು ಪ್ರತಿಭೆಗಳಿದ್ದಾರೆ. ಅಂತಹವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಕ್ರೀಡಾಕೂಟದ ಮೂಲಕ ಆಗುತ್ತಿರುವುದು ಹರ್ಷದಾಯಕ ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಹೇಳಿದರು.
ಅವರು ದ.ಕ. ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್‌ಕ್ಲಬ್ ಮಂಗಳೂರು ಇವರ ಸಹಯೋಗದಲ್ಲಿ ರವಿವಾರ ನಗರದ ನೆಹರೂ ಮೈದಾನದಲ್ಲಿ ನಡೆದ ಪತ್ರಕರ್ತರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ನಿರಂತರ ವರದಿಗಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪತ್ರಕರ್ತರಿಗೆ ಈ ಕ್ರೀಡಾಕೂಟ ಒತ್ತಡದ ಬದುಕಿಗೆ ಮತ್ತಷ್ಟು ಸ್ಪೂರ್ತಿ ಕೊಡುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸ್ಪೋರ್ಟ್ಸ್ ಪ್ರಮೋಟರ್ಸ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅವರು ಮಾತನಾಡಿ, ಈ ಕ್ರೀಡಾಕೂಟವು ನಾವೆಲ್ಲರೂ ಒಂದೇ ಎನ್ನುವ ಸಂದೇಶವನ್ನು ಸಾರುತ್ತದೆ. ಹಿಂದಿನಿಂದಲೂ ಸ್ಪೋರ್ಟ್ಸ್ ಪ್ರಮೋಟರ್ಸ ಕ್ರೀಡೆಗಳಿಗೆ ಉತ್ತಮ ಉತ್ತೇಜನ ಕೊಡುತ್ತಾ ಬಂದಿದ್ದು, ಪತ್ರಕರ್ತರ ಸಂಘಟನೆ ಜೊತೆ ಉತ್ತಮ ಭಾಂದವ್ಯ ಹೊಂದಿದೆ ಎಂದು ಹೇಳಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಕ್ರೀಡಾಕೂಟ ನಡೆಯುತ್ತಿದ್ದ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ದ.ಕ.ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಸುದೇಶ್ ಕುಮಾರ್ ಮುಂತಾದವರು ಭೇಟಿ ನೀಡಿ ಶುಭಾ ಕೋರಿದರು.

ಅಂತಾರಾಷ್ಟ್ರೀಯ ಕ್ರೀಡಾಪಟು ಭಾಸ್ಕರ ತೊಕ್ಕೊಟ್ಟು, ಪ್ರೆಸ್‌ಕ್ಲಬ್ ಟ್ರಸ್ಟಿ ಆನಂದ ಶೆಟ್ಟಿ, ಪ್ರೆಸ್‌ಕ್ಲಬ್ ಅಧ್ಯಕ್ಷ ರೊನಾಲ್ಡ್ ಅನಿಲ್ ಫೆರ್ನಾಂಡಿಸ್, ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ ಮತ್ತಿತರರು ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಮುಹಮ್ಮದ್ ಆರಿಫ್ ಸ್ವಾಗತಿಸಿದರು. ಪಿ.ಬಿ ಹರೀಶ್ ರೈ ಪ್ರಸ್ತಾವನೆಗೈದರು. ಬಿ.ಎನ್.ಪುಷ್ಪರಾಜ್ ಕಾರ್ಯ ಕ್ರಮ ನಿರೂಪಿಸಿದರು.
ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಫರ್ಧೆ :
ಈ ಕ್ರೀಡಾಕೂಟದಲ್ಲಿ ಬಾಳೆಹಣ್ಣು ತಿನ್ನುವ ಸ್ಫರ್ಧೆ, ಹಗ್ಗದಲ್ಲಿ ಕಟ್ಟಿದ ಚಕ್ಕುಲಿಯನ್ನು ಹಾರಿ ತಿನ್ನುವ ಸ್ಫರ್ಧೆ, ಲೆಮೆನ್ ಸ್ಪೂನ್ ನಡಿಗೆ ಸ್ಫರ್ಧೆ, ಗೋಣಿ ಚೀಲ ಓಟ, ಮ್ಯೂಸಿಕಲ್ ಚೇರ್, ಕ್ರಿಕೆಟ್ ಸೇರಿದಂತೆ ಮಹಿಳೆಯರು ಹಾಗೂ ಪುರುಷರ ಪ್ರತ್ಯೇಕ ವಿಭಾಗಗಳಲ್ಲಿ ಹಲವಾರು ಸ್ಫರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.