
ಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ ಕದ್ರಿ ಉದ್ಯಾನವನದಲ್ಲಿ ಫಲ ಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಕದ್ರಿ ಉದ್ಯಾನವನ ಹೊಸ ರಂಗಿನ ಮೂಲಕ ಸಾರ್ವಜನಿಕರ ಗಮನಸೆಳೆದಿದೆ.
ಫಲಪುಷ್ಪ ಪ್ರದರ್ಶನದ ಮಳಿಗೆಯನ್ನು ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಉದ್ಘಾಟಿಸಿದರು. ಹೂವಿನಿಂದ ಆಲಂಕೃತವಾದ ಯಕ್ಷಗಾನ ಪ್ರದರ್ಶನ ಮಾದರಿಯನ್ನು ಮಂಗಳೂರು ದಕ್ಷಿಣ ಶಾಸಕ ಜೆ. ಆರ್. ಲೋಬೊ, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು.
ವಿಧಾನ ಪರಿಷತ್ ಸದಸ್ಯರಾದ ಪ್ರತಾಪಚಂದ್ರ ಶೆಟ್ಟಿ, ಐವನ್ ಡಿ. ಸೋಜಾ, ಅಪರ ಜಿಲ್ಲಾಧಿಕಾರಿ ಕುಮಾರ್, ಮುಡಾ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಪಾಲಿಕೆ ಸಚೇತಕ ಶಶಿಧರ ಹೆಗ್ಡೆ, ಬ್ಯಾರಿ ಅಕಾಡೆಮಿ ಅಧ್ಯಕ್ಷ ಬಿ. ಎ. ಮಹಮ್ಮದ್ ಹನೀಫ್, ರಿಜಿಸ್ಟ್ರಾರ್ ಉಮ್ಮರಬ್ಬ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮೈಸೂರಿನ ಉಮಾಶಂಕರ್ ಮತ್ತು ಬಳಗದವರು ನಿರ್ಮಿಸಿದ ಹೂವಿನಿಂದಲೇ ಅಲಂಕೃತಗೊಂಡ ತೆಂಕುತಿಟ್ಟು ಯಕ್ಷಗಾನದ ಮಾದರಿ ಪ್ರಮುಖ ಆಕರ್ಷಣೆಯಾಗಿದೆ. 11 ಅಡಿ ಎತ್ತರದ ಅರ್ಜುನ, 10.5 ಅಡಿ ಎತ್ತರದ ಕೃಷ್ಣ, ಭಾಗವತ, ಚೆಂಡೆ, ಮೃದಂಗ ಬಾರಿಸುವ ಪಾತ್ರಧಾರಿಗಳು, ಕೃಷ್ಣ ಮತ್ತು ಅರ್ಜುನನ ಮಾದರಿಯನ್ನು 22 ಸಾವಿರ ಹೂವಿನಿಂದ ನಿರ್ಮಿಸಲಾಗಿದೆ. 12 ಸಾವಿರ ಗುಲಾಬಿ ಹೂವು, 2 ಸಾವಿರ ಸೇವಂತಿಗೆ, 40 ಗೊಂಚಲು ಆರ್ಕಿಡ್, 50 ದಸೀನಾ ಎಲೆಯನ್ನು ಬಳಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
20 ಸಾವಿರ ಗುಲಾಬಿಯನ್ನು ಬಳಸಲಾದ ಗಿಟಾರ್, ತಬಲಾ, ವೀಣೆ ಮತ್ತು 2 ಸಾವಿರ ಗುಲಾಬಿ, 30 ಗೊಂಚಲು ಅಸ್ಪರೇಗನ್ ಬಳಸಿದ ಡಾಲ್ಫಿನ್, 3 ಸಾವಿರ ಗುಲಾಬಿ ಮತ್ತು 50 ಗೊಂಚಲು ಆಸ್ಪರೇಗನ್ ಬಳಸಿದ ಪೆಂಗ್ವಿನ್, 5 ಸಾವಿರ ಗುಲಾಬಿ ಬಳಸಿದ ಐಸ್ಕ್ರೀಂ ಮಾದರಿ ಇದೇ ಪ್ರಥಮ ಬಾರಿಗೆ ಮಂಗಳೂರಿನಲ್ಲಿ ಕಂಡು ಬಂದಿದ್ದು, ಸಾರ್ವಜನಿಕರ ಪ್ರಸಂಶೆಗೆ ಪಾತ್ರವಾಗಿದೆ.