ಕರಾವಳಿ

ಗಲ್ಫ್ ಇಶಾರ ಗಲ್ಫ್ ಕನ್ನಡಿಗರ ಮುಖವಾಣಿವಾಗಲಿ: ಕಾಗೋಡು

Pinterest LinkedIn Tumblr

IMG-20160109-WA0428

ದುಬೈ: ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಸಮಸ್ಯೆಗಳಿಗೆ ಸರಕಾರ ಸಕರಾತ್ಮಕವಾಗಿ ಸ್ಪಂದಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಗಲ್ಫ್‌ನಾಧ್ಯಂತ ಹರಡಿಕೊಂಡಿರುವ ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆ.ಸಿ.ಎಫ್) ಅನಿವಾಸಿ ಕನ್ನಡಿಗರಿಗೆ ಪ್ರಾಮಾಣಿಕವಾಗಿ ಸಿಗಬೇಕಾಗಿರುವ ಸೌಲಭ್ಯಗಳನ್ನು ಒದಗಿಸಲು ನಡೆಸುತ್ತಿರುವ ಪ್ರಯತ್ನದೊಂದಿಗೆ ಕೈಜೋಡಿಸಲು ಸಿದ್ಧವೆಂದು ಕರ್ನಾಟಕ ವಿಧಾನಸಭೆಯ ಸಭಾಪತಿ ಶ್ರೀ ಕಾಗೋಡು ತಿಮ್ಮಪ್ಪ ಭರವಸೆ ನೀಡಿದರು. ಕೆ.ಸಿ.ಎಫ್‌ನ ಸಾರಥ್ಯದಲ್ಲಿ ಲೋಕಾರ್ಪಣೆಗೊಂಡ ಗಲ್ಫ್ ಇಶಾರ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತಾಡಿದ ಶ್ರೀಯುತರು ಪತ್ರಿಕೆಗಳು ಜನರಲ್ಲಿ ನೈತಿಕತೆ ಮತ್ತು ಸೃಜನಶೀಲತೆಯನ್ನು ಬೆಳೆಸಲು ಶಕ್ತಿಯುತ ಮಾಧ್ಯಮವಾಗಿದ್ದು ಅನಿವಾಸಿಗರಿಗೆ ಪತ್ರಿಕೆಯ ಅಗತ್ಯವನ್ನು ಮನಗಂಡು ಪತ್ರಿಕೆ ಪ್ರಕಟಿಸಲು ಮುಂದೆ ಬಂದಿರುವುದು ನಿಜವಾಗಿಯೂ ಕನ್ನಡಿಗರ ಹೆಮ್ಮೆಯಾಗಿದ್ದು ಗಲ್ಫ್ ಇಶಾರ ಪತ್ರಿಕೆಯು ಗಲ್ಫ್ ಕನ್ನಡಿಗರ ಮುಖವಾಣಿಯಾಗಿ ಬೆಳೆಯಲಿ ಎಂದು ಹಾರೈಸಿದರು. ವಿದೇಶದಲ್ಲಿ ನೆಲೆಸಿರುವ ಅನಿವಾಸಿಗರ ಸಮಸ್ಯೆಯನ್ನು ಕಣ್ಣಾರೆ ಕಂಡಿದ್ದೇನೆ, ತಾಯ್ನಡಿಗೆ ಅವರು ಸಲ್ಲಿಸುತ್ತಿರುವ ಸೇವೆ ಸ್ತುತ್ಯರ್ಹವಾಗಿದ್ದು ತಮ್ಮ ಬಿಡುವಿನ ವೇಳೆಯನ್ನು ಸಮಾಜಮುಖಿ ಕಾರ್ಯಗಳಿಗೆ ಮೀಸಲಿಟ್ಟು ಅದ್ಭುತ ಸಮಾಜ ಸೇವೆಯನ್ನು ಸಂಘಟಿಸುತ್ತಿರುವ ಕೆ.ಸಿ.ಎಫ್, ಕನ್ನಡಿಗರಿಗೆ ಅವರ ಸರಕಾರದಿಂದ ಸಿಗಬೇಕಾಗಿರುವ ಸವಲತ್ತು ಒದಗಿಸಿಕೊಡುವಲ್ಲಿ ಇನ್ನಷ್ಟು ಕ್ರಿಯಾಶೀಲವಾಗಿ ಪ್ರಯತ್ನಿಸಬೇಕೆಂದೂ, ಸರಕಾರದೊಂದಿಗೆ ಈ ಬಗ್ಗೆ ಮಾತಾಡಲು ನಿಯೋಗವೊಂದಕ್ಕೆ ಆಹ್ವಾನ ನೀಡಿ ತಮ್ಮಿಂದಾಗುವ ಎಲ್ಲಾ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜ್ಯ ಆರೋಗ್ಯ ಸಚಿವ ಶ್ರೀ. ಯು.ಟಿ. ಖಾದರ್ ಯುವಕರು ತಮ್ಮ ಜೀವನದ ಅಮೂಲ್ಯ ಸಮಯವನ್ನು ತಮ್ಮ ಕುಟುಂಬದ ಆಸರೆಗಾಗಿ ವಿದೇಶದಲ್ಲಿ ಸವೆಸುತ್ತಿದ್ದು ಅವರ ತ್ಯಾಗದಿಂದ ಅದೆಷ್ಟೋ ಕುಟುಂಬಗಳು ಆರ್ಥಿಕವಾಗಿ ಸಭಲವಾಗಿರುವುದು ಮಾತ್ರವಲ್ಲ ಗೌರವಯುತ ಬದುಕನ್ನು ನಡೆಸಲು ಸಾಧ್ಯವಾಗಿದೆಯೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

IMG_6010

IMG_5974

ಸಮಾರಂಭದಲ್ಲಿ ಆಶಿರ್ವಚನ ನೀಡಿದ ರಾಜ್ಯದ ಹಿರಿಯ ವಿದ್ವಾಂಸ, ಕೊಡಗು ಜಿಲ್ಲಾ ವಿದ್ವಾಂಸ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮೆಹಮೂದ್ ಮುಸ್ಲಿಯಾರ್ ಎಡಪ್ಪಾಲ ಪತ್ರಿಕೆಯು ಸಮಾಜವನ್ನು ತಿದ್ದುವ ನಿಟ್ಟಿನಲ್ಲಿ ಇಶಾರೆಯಾಗಲಿ ಎಂದು ಶುಭ ಹಾರೈಸಿದರು. ಮುನ್ನುಡಿ ಮಾತನ್ನಾಡಿದ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಶ್ರೀ ಶಾಫಿ ಸಅದಿ, ಸಮಾಜಕ್ಕೆ ತಲೆನೋವಾಗಿ ಪರಿಣಮಿಸಿರುವ ಯುವಕರನ್ನು ನೈತಿಕ ಜಾಗೃತಿಯ ವಾಹಕರನ್ನಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಕೆ.ಸಿ.ಎಫ್ ನಡೆಸುತ್ತಿರುವ ಆಂದೋಲನವನ್ನು ಪರಿಚಯಿಸಿ, ಇಶಾರ ಪತ್ರಿಕೆಯು ತಾತ್ವಿಕ ಪರಂಪರೆಯ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಲಿದೆಯೆಂದು ತಿಳಿಸಿದರು. ಸಮಾರಂಭದಲ್ಲಿ ಮಾತಾಡಿದ ದುಬೈ ಪೋಲೀಸ್ ಆಯುಕ್ತ ಮುಹಮ್ಮದ್ ಅಬ್ದುಲ್ಲಾ ಬಿನ್ ಮಾಜಿದ್, ಭಾರತೀಯರ ವೈವಿಧ್ಯಮಯ ಕೌಶಲ್ಯಗಳು ಯು.ಎ.ಇ ಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದೆಯೆಂದು ಪ್ರಶಂಸಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತಾಡಿದ ಯು.ಎ.ಇ ರಾಷ್ಟೀಯ ಅಧ್ಯಕ್ಷ ಹಮೀದ್ ಸಅದಿ ಈಶ್ವರಮಂಗಿಲ ಯು.ಎ.ಇ ಸರಕಾರ 2016 ನ್ನು ಓದುವ ವರ್ಷವನ್ನಾಗಿ ಘೋಷಣೆ ಮಾಡಿದ್ದು ಈ ಸಂದರ್ಭದಲ್ಲಿ ಇಶಾರ ಯು.ಎ.ಇ ತಲುಪುತ್ತಿರುವುದು ಸಕಾಲಿಕವಾಗಿದೆಯೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ಮಾಧ್ಯಮ ಕಾರ್ಯದರ್ಶಿ ಎಂ.ಎ.ಸಲೀಂ, ಕೆ.ಸಿ.ಎಫ್ ಅಂತರಾಷ್ಟೀಯ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಶೈಖ್ ಬಾವ, ಸಯ್ಯಿದ್ ತ್ವಾಹಾ ಬಾಫಕೀ ತಂಙಳ್, ಸಯ್ಯಿದ್ ಮುಖ್ತಾರ್ ತಂಙಳ್, ಕೆ.ಸಿ.ಎಫ್ ಯು.ಎ.ಇ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಹಾಜಿ ನಾಪೋಕ್ಲು, ಉದ್ಯಮಿಗಳಾದ ಬಶೀರ್ ಬೋಳ್ವಾರ್, ಎಂ.ಇ.ಮೂಳೂರು, ಅಬ್ದುಲ್ಲತೀಫ್ ಮುಲ್ಕಿ, ಎಸ್ಸೆಸೆಫ್ ರಾಜ್ಯ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ಕಲ್ಕಟ್ಟ, ಪ್ರವಾಸಿ ವಾಯನ ಪತ್ರಿಕೆಯ ಸಂಪಾದಕ ಶರೀಫ್ ಕಾರಶ್ಯೇರಿ, ಸ್ವಾಗತ ಸಮಿತಿ ಅಧ್ಯಕ್ಷ ಅರಾಫತ್ ನಾಪೋಕ್ಲು, ಕನ್ವೀನರ್ ಸೈಫುದ್ದೀನ್ ಪಟೇಲ್ ಆರಂತೋಡ್, ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮ್ಮಾಡು, ಅಶ್ರಫ್ ಅಡ್ಯಾರ್, ಕೆ.ಸಿ.ಎಫ್ ದುಬೈ ಕೋಶಾಧಿಕಾರಿ ಅಬೂಬಕ್ಕರ್ ಕೊಟ್ಟಮುಡಿ ಉಪಸ್ಥಿತರಿದ್ದರು. ರಾಜ್ಯ ಎಸ್ಸೆಸೆಫ್ ಪ್ರತಿಭೋತ್ಸವದ ಪ್ರತಿಭೆಗಳಾದ ಮುಹಮ್ಮದ್ ಆಶಿಖ್ ಕಾಜೂರ್, ಸಲೀಂ ಖಾದ್ರಿ ಉಜಿರೆಯವರಿಗೆ ಅಭಿನಂದನಾ ಪತ್ರ ನೀಡಲಾಯಿತು. ಸಮಾರಂಭದಲ್ಲಿ ಕೆ.ಸಿ.ಎಫ್ ದುಬೈ ಸಮಿತಿ ಅಧ್ಯಕ್ಷ ಮೆಹಬೂಬ್ ಸಖಾಫಿ ಕಿನ್ಯ ಸ್ವಾಗತಿಸಿ ಖಲಂದರ್ ಕಬಕ ಧನ್ಯವಾದವಿತ್ತರು.

Write A Comment