ರಾಷ್ಟ್ರೀಯ

ಯುವ ಶಕ್ತಿ ಭಾರತದ ದೊಡ್ಡ ಆಸ್ತಿ ಹತಾಶೆ ಬಿಡಿ, ಗುರಿಯತ್ತ ಮುನ್ನುಗ್ಗಿ

Pinterest LinkedIn Tumblr

yuva-fiನನಗಾಗಿ ಕಣ್ಣೀರು ಸುರಿಸಬೇಡಿ. ಬದುಕುವುದಕ್ಕಿಂತ ಸಾಯುವುದೇ ಖುಷಿ ಎಂದು ಮನಗಂಡಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಪತ್ರ ಬರೆದಿಟ್ಟ ರೋಹಿತ್ ಎಂಬ ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನಿಗೆ ವಿದ್ಯಾರ್ಥಿ ವೇತನ ಸಿಕ್ಕಿತ್ತು. ರೋಹಿತ್‌ನ ಸಾವು ಅವರ ಕುಟುಂಬಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಆಗಿರುವ ನಷ್ಟ. ಏಕೆಂದರೆ, ಪ್ರತಿಯೊಬ್ಬ ತರುಣ-ತರುಣಿಯರೂ ನಮ್ಮ ಈ ಮಹೋನ್ನತ ದೇಶದ ಅಮೂಲ್ಯ ಆಸ್ತಿ. ಇಡೀ ವಿಶ್ವದಲ್ಲಿ ಭಾರತವು ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಅಗ್ರಮಾನ್ಯ ರಾಷ್ಟ್ರ. ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ, ಹಣಕಾಸು ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಕೂಡ ಭಾರತವು ಮುನ್ನಡೆ ಸಾಧಿಸುತ್ತಿದೆ. ಯಂಗ್ ಇಂಡಿಯಾ ವನ್ ಇಂಡಿಯಾ ಎಂಬ ಮೂಲಮಂತ್ರವನ್ನು ಅಳವಡಿಸಿಕೊಂಡು ಭಾರತವು ವಿಶ್ವದ ಇತರ ಎಲ್ಲ ರಾಷ್ಟ್ರಗಳ ಗಮನ ಸೆಳೆದಿದೆ.
ಅಮೆರಿಕ ಸೇರಿದಂತೆ ವಿಶ್ವದ ಅನೇಕ ಮುಂದುವರೆದ ರಾಷ್ಟ್ರಗಳ ಉನ್ನತ ಹುದ್ದೆಗಳನ್ನು ಭಾರತೀಯರು ಅಲಂಕರಿಸಿದ್ದಾರೆ. ಭಾರತೀಯರೆಂದರೆ ಬುದ್ಧಿವಂತರು ಎಂಬ ಅನ್ವರ್ಥನಾಮವಾಗಿದೆ. ವಿದೇಶಗಳಿಗೆ ಗುಳೆ ಹೋಗಿ ನೆಲೆಸಿರುವ ಜನರ ಪೈಕಿ ಭಾರತೀಯರ ಸಂಖ್ಯೆ ಅತ್ಯಧಿಕ. ಇದು ಭಾರತದ ಹೆಗ್ಗಳಿಕೆ. ಇದು ಸರ್ವಧರ್ಮ ಸಮನ್ವಯತೆಯಿಂದ ಕೂಡಿದ ರಾಷ್ಟ್ರ.. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಲ್ಲಿ ಎಲ್ಲ ವರ್ಗದ ಜನರೂ ಗೌರವದಿಂದ ಸಮಾನವಾಗಿ ಬಾಳುವ ಅವಕಾಶ ಕಲ್ಪಿಸಲಾಗಿದೆ. ಯಾರೂ ಕೂಡ ತುಳಿತ, ದೌರ್ಜನ್ಯಕ್ಕೆ ಒಳಗಾಗುವ ಅನಿವಾರ್ಯತೆ ಇಲ್ಲ. ಜಾತಿ-ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡುವಂತಿಲ್ಲ. ಒಂದು ವೇಳೆ ಅನ್ಯಾಯವಾದರೆ ಅಂಥಹವರು ನ್ಯಾಯಾಲಯದ ಮೊರೆ ಹೋಗಬಹುದು. ಆರ್ಥಿಕ ಅನುಕೂಲ ಇಲ್ಲದವರು ಉಚಿತವಾಗಿ ಕಾನೂನಿನ ನೆರವು ಪಡೆದುಕೊಳ್ಳಬಹುದು. ಇಂದು ಭಾರತದ ಪತ್ರಿಕಾ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಅತ್ಯಂತ ಪ್ರಬಲವಾಗಿವೆ. ಸಮಾಜದಲ್ಲಿ ನಡೆಯುವ ಅನ್ಯಾಯಗಳನ್ನು ಕ್ಷಣಮಾತ್ರದಲ್ಲಿ ಜನರ ಮುಂದೆ ಇಡುತ್ತವೆ.
ತನಗೆ ಅನ್ಯಾಯವಾಯಿತು ಎಂದು ರೋಹಿತ್ ಹತಾಶನಾಗುವ ಅಗತ್ಯ ಇರಲಿಲ್ಲ. ಆತ್ಮಹತ್ಯೆಗೆ ಮುಂದಾಗುವಂಥಹ ತೀವ್ರತೆಯ ಅಗತ್ಯವಿರಲಿಲ್ಲ. ಕಾನೂನು ಹಾಗೂ ಮಾಧ್ಯಮಗಳ ನೆರವು ಪಡೆಯಬಹುದಾಗಿತ್ತು. ರೋಹಿತ್‌ನ ಸಾವು ಸಮಾಜಕ್ಕೆ ಅದೂ ಯುವಜನತೆಗೆ ತಪ್ಪು ಸಂದೇಶ ನೀಡಿದೆ. ಈ ಪ್ರಕರಣವು ಅಸಹ್ಯಕರವಾದ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿವೆ. ಇದರಿಂದ ಉರಿಯುತ್ತಿರುವ ಅಗ್ನಿಗೆ ತುಪ್ಪ ಸುರಿದಂತಾಗಿದೆಯೇ ವಿನಃ ರೋಹಿತ್‌ನ ಆತ್ಮಕ್ಕಂತೂ ಶಾಂತಿ ಸಿಗುವುದಿಲ್ಲ. ಈ ಘಟನೆಯಿಂದ ನಮ್ಮ ರಾಷ್ಟ್ರದ ಯುವಜನರು ಧೃತಿಗೆಡಬಾರದು. ಜಾತೀಯತೆಯ ಸಂಕುಚಿತ ಭಾವನೆಗೆ ಒಳಗಾಗಬಾರದು. ನಮ್ಮ ರಾಷ್ಟ್ರಕ್ಕೆ ಉಜ್ವಲವಾದ ವಿದ್ಯಾರ್ಥಿಯೊಬ್ಬನ ನಷ್ಟವಾಗಿದೆ ನಿಜ. ಅದರಿಂದ ರೊಚ್ಚಿಗೇಳುವ ಬದಲು ಸಂಯಮದಿಂದ ಆಲೋಚನೆ ಮಾಡಬೇಕು. ಯುವಶಕ್ತಿ ಎಂಬ ಪ್ರಬಲ ಪ್ರವಾಹವು ವಿರುದ್ಧ ದಿಕ್ಕಿನಲ್ಲಿ ಹರಿಯಲು ಅನುವಾಗಬಾರದು.
ಭಾರತದಲ್ಲಿ ವಾಸಿಸುವ ಯಾರೊಬ್ಬರಿಗೂ ಕೀಳರಿಮೆ ಇರಬಾರದು. ಇಲ್ಲಿ ಎಲ್ಲರೂ ಸಮಾನರು. ಎಲ್ಲರಿಗೂ ಸಂವಿಧಾನದತ್ತವಾದ ಸಮಾನ ಅವಕಾಶವಿದೆ. ವಿಶ್ವದ ಭೂಪಟದಲ್ಲಿ ಹೆಮ್ಮೆಯ ಸ್ಥಾನ ಕಂಡು ಕೊಳ್ಳುತ್ತಿರುವ ನಮ್ಮ ಭವ್ಯ ರಾಷ್ಟ್ರಕ್ಕೆ ಯುವ ಜನತೆ ಬೆನ್ನೆಲುಬಾಗಬೇಕು. ನೂರಾರು ಜಾತಿ-ಧರ್ಮಗಳಿಗೆ ಸೇರಿದ ಜನರಿಗೆ ಭಾರತಾಂಬೆಯು ತನ್ನ ಮಡಿಲಿನಲ್ಲಿ ಸಮಾನವಾದ ಅವಕಾಶ ನೀಡಿದ್ದಾಳೆ. ಅವಳ ದೃಷ್ಟಿಯಲ್ಲಿ ಕೀಳು-ಮೇಲು ಎಂಬ ಭೇದವಿಲ್ಲ. ಇದನ್ನು ಅಪಾರ್ಥ ಮಾಡಿಕೊಂಡು ಭಾರತಾಂಬೆಗೆ ಅವಮಾನ ಮಾಡುವುದು ಸಲ್ಲದು. ಭವ್ಯ ಭಾರತದ ಅಮೂಲ್ಯ ಆಸ್ತಿಯಾಗಿ ರುವ ಯುವಜನತೆಯು ಕ್ಲೀಷೆಗಳಿಂದ ಹೊರಬಂದು ಸದೃಢವಾದ, ಸಮೃದ್ಧವಾದ ರಾಷ್ಟ್ರ ನಿರ್ಮಾಣ ಮಾಡಬೇಕು. ಅದೊಂದೇ ಅವರ ಗುರಿ ಅದೊಂದೇ ಪವಿತ್ರ ಕರ್ತವ್ಯ.

Write A Comment