ಕನ್ನಡ ವಾರ್ತೆಗಳು

ಪೇಜಾವರ ಐದನೆಯ ಪರ್ಯಾಯ ಮಹೋತ್ಸವಕ್ಕೆ ಕ್ಷಣಗಣನೆ; ಉಮಾಭಾರತಿ ಭೇಟಿ

Pinterest LinkedIn Tumblr

ಉಡುಪಿ: ಐತಿಹಾಸಿಕ ವೆನಿಸಲಿರುವ ಶ್ರೀಪೇಜಾವರ ಮಠದ ಐದನೆಯ ಪರ್ಯಾಯ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಡಿನ ನಾನಾ ಕಡೆಗಳಿಂದ ಭಕ್ತರ ದಂಡು ಆಗಮಿಸುತ್ತಿದ್ದು, ಪೇಜಾವರ ಮಠದಲ್ಲಿ ಜನಜಂಗುಳಿ ಕಂಡು ಬರುತ್ತಿದೆ. ವಿದ್ಯುದ್ದೀಪಗಳಿಂದ ರಥಬೀದಿ, ಪೇಜಾವರ ಮಠ, ಮಾರ್ಗಗಳು ಕಂಗೊಳಿಸುತ್ತಿವೆ.

1017393_980117508693873_2563294754961733357_n

ಬಿಗು ಭದ್ರತೆ: ಲಕ್ಷಾಂತರ ಸಂಖ್ಯೆಯಲ್ಲಿ ಜನರು ಆಗಮಿಸುವ ಕಾರಣ ಅವರನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ, ಸ್ವಯಂಸೇವಕರ ದೊಡ್ಡ ತಂಡವೇ ನಿರ್ಮಾಣಗೊಂಡಿದೆ. ವಿವಿ‌ಐಪಿಗಳಿಗೆ ಮಣಿಪಾಲದ ಕಂಟ್ರಿ ಇನ್ ಆಂಡ್ ಸೂಟ್ಸ್ ಹೊಟೇಲ್, ಪ್ರವಾಸಿ ಮಂದಿರದಲ್ಲಿ ವ್ಯವಸ್ಥೆ ಮಾಡಿದ್ದರೆ, ಮನೆಗಳಲ್ಲಿ ವಸತಿ, ದಿನ ಬಾಡಿಗೆ ಮನೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ವ್ಯವಸ್ಥೆಗಾಗಿ ನಾಲ್ಕು ಕೇಂದ್ರ ಗಳನ್ನು ತೆರೆಯಲಾಗಿದೆ. ಭವ್ಯ ವೇದಿಕೆ ಪರ್ಯಾಯ ದರ್ಬಾರ್‌ನ್ನು ಇದೇ ಮೊದಲ ಬಾರಿಗೆ ಪಾರ್ಕಿಂಗ್ ಪ್ರದೇಶದಲ್ಲಿ ನಡೆಸಲಾಗುತ್ತಿದೆ.

ಬ್ಯಾಗ್ ಲಗ್ಗೇಜ್ ತರಬೇಡಿ: ಶ್ರೀಕೃಷ್ಣ ಮಠದಲ್ಲಿ ನಡೆಯುವ ಪರ್ಯಾಯೋತ್ಸವದ ಅಂಗವಾಗಿ ಜ. 18ರ ಮುಂಜಾನೆ 2.30ಕ್ಕೆ ಕಿನ್ನಿಮೂಲ್ಕಿ ಕಡೆಯಿಂದ ಮೆರವಣಿಗೆ ಹೊರಡಲಿದೆ. ಮೆರವಣಿಗೆ ಮತ್ತು ವೀಕ್ಷಣೆಯಲ್ಲಿ ವಿವಿಧ ರಾಜ್ಯಗಳ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳುತ್ತಾರೆ. ಇಲ್ಲಿ ಭದ್ರತಾ ದೃಷ್ಟಿಯಿಂದ ಮೆರವಣಿಗೆ ಮತ್ತು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರು ಯಾರು ಕೂಡ ಯಾವುದೇ ರೀತಿಯ ಬ್ಯಾಗ್/ಲಗೇಜ್‌ಗಳನ್ನು ಕೈಯಲ್ಲಿ ಅಥವಾ ಬೆನ್ನಹಿಂಬದಿಯಲ್ಲಿ ಹಾಕಿಕೊಂಡು ಬರದಂತೆ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಬ್ಯಾಗ್/ಲಗೇಜ್ ಇದ್ದಲ್ಲಿ ಸೂಕ್ತ ಭದ್ರತೆ ಒದಗಿಸಲಿರುವ ಪೊಲೀಸ್ ಅಧಿಕಾರಿ/ಸಿಬಂದಿಗೆ ಗೊಂದಲ ಉಂಟಾಗಿ ಸುರಕ್ಷತೆ ಕಷ್ಟವಾಗಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಕೋರಿಕೊಂಡಿದ್ದಾರೆ.

ಡಿಡಿಯಲ್ಲಿ ನೇರ ಪ್ರಸಾರ ಜ. 17ರ ಮಧ್ಯರಾತ್ರಿಯಿಂದ ಪರ್‍ಯಾಯ ಸಮಾರಂಭವನ್ನು ದೂರದರ್ಶನವು ನೇರ ಪ್ರಸಾರ ಮಾಡಲಿದೆ. ಆಕಾಶವಾಣಿಯಲ್ಲಿ ಕೂಡ ವೀಕ್ಷಕ ವಿವರಣೆ ಪ್ರಸಾರವಾಗಲಿದೆ. ಸಾಂಸ್ಕೃತಿಕ ಕಾರ್‍ಯಕ್ರಮ ಜ. 17ರ ರಾತ್ರಿ ನಗರದ 12ಕ್ಕೂ ಹೆಚ್ಚು ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಚಲನಚಿತ್ರ ನಟನಟಿಯರು ಕೆಲವು ಕಾರ್‍ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.

ಉಮಾಭಾರತಿಯವರು ಭಾನುವಾರ ಮಧ್ಯಾಹ್ನ ಶ್ರಿಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ಬಳಿಕ ಮಾತನಾಡಿದ ಅವರು ತಮಗೆ ಧೀಕ್ಷೆ ನೀಡಿದ ಪೇಜಾವರ ಸ್ವಾಮೀಜಿಯವರ ಪಂಚಮ ಪರ್ಯಾಯ ಸಂದರ್ಭ ಖುಷಿ ನೀಡಿದೆ ಎಂದರು.

ಬಿಜೆಪಿ ನಾಯಕರಾದ ಎಲ್.ಕೆ. ಆಡ್ವಾಣಿ, ದೇವೇಂದ್ರ ಫಡ್ನವೀಸ್, ವಸುಂಧರಾ ರಾಜೇ ಸಿಂಧಿಯಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ಅನಂತ ಕುಮಾರ್, ಡಿ.ವಿ. ಸದಾನಂದ ಗೌಡ, ಜಿ.ಎಂ. ಸಿದ್ಧೇಶ್ವರ, ಶ್ರೀಪಾದ ನಾಯಕ್, ಸ್ಮೃತಿ ಇರಾನಿ, ಸುರೇಶ ಪ್ರಭು, ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಡಿ.ಎಚ್. ಶಂಕರಮೂರ್ತಿ, ಪ್ರಹ್ಲಾದ್ ಜೋಶಿ, ಕೆ.ಎಸ್. ಈಶ್ವರಪ್ಪ, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು, ಬಿ.ವೈ. ರಾಘವೇಂದ್ರ, ಸಿ.ಟಿ. ರವಿ ಮೊದಲಾದ ೨೦ಕ್ಕೂ ಹೆಚ್ಚು ನಾಯಕರು ಭಾಗವಹಿಸಲಿದ್ದಾರೆ.

ರಾಜ್ಯದ ಗೃಹ ಸಚಿವ ಡಾ| ಜಿ. ಪರಮೇಶ್ವರ್ ಶನಿವಾರವೇ ಪೇಜಾವರ ಮಠಕ್ಕೆ ಆಗಮಿಸಿ ಶ್ರೀಗಳವರನ್ನು ಭೇಟಿ ಮಾಡಿ ಪ್ರಸಾದ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ನಾಯಕರಾದ ಆಸ್ಕರ್, ವೀರಪ್ಪ ಮೊಯ್ಲಿ, ದಿನೇಶ್ ಗುಂಡೂ ರಾವ್, ಆರ್. ವಿ. ದೇಶಪಾಂಡೆ, ಎಚ್.ಕೆ. ಪಾಟೀಲ್, ರಮಾನಾಥ ರೈ, ಖಾದರ್, ಮಹದೇವ ಪ್ರಸಾದ್, ಮಂಜು, ಸಿ.ಎಂ. ಇಬ್ರಾಹಿಂ, ಧರಂ ಸಿಂಗ್, ವಿನಯಕುಮಾರ ಸೊರಕೆ, ಅಭಯಚಂದ್ರ ಜೈನ್ ಮೊದಲಾದವರು ಪಾಲ್ಗೊಳ್ಳುವರೆಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗೋಪಾಲ ಪೂಜಾರಿ ತಿಳಿಸಿದ್ದಾರೆ.

Write A Comment