
ಮಂಗಳೂರು,ಜ.16 : ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯಲ್ಲಿ ನಡೆದ ವೃದ್ಧ ದಂಪತಿಯ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ದ.ಕ.ಜಿಲ್ಲಾ ಎಸ್ಪಿ ಡಾ.ಶರಣಪ್ಪ ಅವರು ಶನಿವಾರ ಕರೆದ ಪ್ರತಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂದಿಸಿದಂತೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಗದಗ ಮೂಲದ ರವಿ ಯಾನೆ ರಾಜು (26) ಎಂಬವನ್ನನ್ನು ಕಕ್ಕಿಂಜೆಯ ವೃದ್ಧ ದಂಪತಿಗಳ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಅವರು ಹೇಳಿದರು.

ಘಟನೆಯ ವಿವರ :
ಜ.10ರಂದು ರಾತ್ರಿಯ ವೇಳೆ ವರ್ಗೀಸ್ ಹಾಗೂ ಪತ್ನಿ ಏಲಿಯಾಮ್ಮ ಅವರ ಮನೆಗೆ ಬಂದ ಆರೋಪಿ ನೀರು ಕೇಳಿದ್ದು, ಈ ಸಂದರ್ಭ ತನಗೆ ದಾರಿ ತೋರಿಸುವಂತೆ ಕೇಳಿ ವರ್ಗೀಸ್ ರನ್ನು ಕರೆದುಕೊಂಡು ಹೋಗಿ ದಾರಿ ಮಧ್ಯೆ ಹತ್ಯೆ ನಡೆಸಿದ್ದ. ಬಳಿಕ ಮನೆಗೆ ಬಂದು ಏಲಿಯಾಮ್ಮ ರನ್ನೂ ಕೊಲೆಗೈದು ಅವರ ಮೈಮೇಲಿದ್ದ ಚಿನ್ನಾಭರಣ ಹಾಗೂ ಮನೆಯಲ್ಲಿದ್ದ ನಗದು ದೋಚಿದ್ದಾನೆ ಎಂದು ಅವರು ವಿವರಿಸಿದರು. ಈತನ ಮೇಲೆ ಈಗಾಗಲೇ 15 ಪ್ರಕರಣಗಳು ದಾಖಲಾಗಿವೆ. 8 ಪ್ರಕರಣದಲ್ಲಿ ನ್ಯಾಯಾಲಯದ ವಾರೆಂಟ್ ಇದೆ ಎಂದು ಅವರು ಹೇಳಿದರು.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸರಿಗೆ ಪ್ರಸಂಶೆ ಪತ್ರ ನೀಡಿ ಗೌರವ :
ಕಾರ್ಯಾಚರಣೆಯಲ್ಲಿ ಶ್ರಮಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿನ್ಸೆಂಟ್ ಶಾಂತ್ ಕುಮಾರ್, ಎಎಸ್ಪಿ ರಾಹುಲ್ ಕುಮಾರ್, ಡಿಎಸ್ಪಿ ಎ.ಸಿ.ಗೌರೀಶ್ ಹಾಗೂ ಇತರ ಸಿಬ್ಬಂದಿ ವರ್ಗದವರಿಗೆ ಎಸ್ಪಿಯವರು ಪ್ರಸಂಶೆ ಪತ್ರ ನೀಡಿ ಗೌರವಿಸಿದರು.