ಕರ್ನಾಟಕ

ಬಸವಳಿದ ರೈತರಿಗೆ ದೇಸೀ ಹಸುಗಳ ಸಾಕಣೆಯಲ್ಲಿ ಆಶಾಕಿರಣ!

Pinterest LinkedIn Tumblr

16-ANKANA-1ಕನಕಪುರ ತಾಲೂಕಿನ ಒಂದೆರಡು ಗ್ರಾಮಗಳ ರೈತರು ಸಂಘ ಕಟ್ಟಿಕೊಂಡು ಶುದ್ಧ ದೇಸೀ ಹಸುಗಳ ಹಾಲನ್ನು ಬೆಂಗಳೂರಿನಲ್ಲಿ ಮಾರುತ್ತಿದ್ದಾರೆ. ಈ ಗ್ರಾಮೀಣ ಸ್ಟಾರ್ಟಪ್‌ ಐಟಿ ಕ್ಷೇತ್ರದವರ ಮನ ಗೆದ್ದಿದೆ. ಈ ಹಾಲಿಗೆ 1 ಲೀಟರ್‌ಗೆ 54 ರೂ.! ಇದರಲ್ಲಿ ಶೇ.80ರಷ್ಟು ಹಣ ರೈತರಿಗೆ ಸಿಗುತ್ತದೆ. ದಿನಾ 10 ಲೀಟರ್‌ ದೇಸೀ ಹಾಲು ಉತ್ಪಾದಿಸುವ ರೈತ ಸಮಾಧಾನಕರ ಜೀವನ ಮಾಡಬಹುದು.

ರಾಷ್ಟ್ರೀಯ ಕ್ರೈಂ ರೀಸರ್ಚ್‌ ಬ್ಯೂರೋ ಪ್ರಕಾರ ಪ್ರತಿವರ್ಷ ದೇಶದಲ್ಲಿ 10ರಿಂದ 12 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ದಕ್ಷಿಣದ ಕೆಲವು ರಾಜ್ಯಗಳಲ್ಲಿನ ಆತ್ಮಹತ್ಯಾ ಸಂಖ್ಯೆ ಉತ್ತರ ಭಾರತದ ರಾಜ್ಯಗಳ ಸಂಖ್ಯೆಗಿಂತ 10 ಪಟ್ಟು ಹೆಚ್ಚಾಗಿದೆ. ರೈತ ಅಭಾದಿತ ಜೀವನವನ್ನು (IRDP) ನಡೆಸುವಂತಾಗಲು ಏನು ಮಾಡಬೇಕು? ವಿಶ್ವ ಬ್ಯಾಂಕ್‌ನ ಅಧ್ಯಯನವೊಂದರ ಪ್ರಕಾರ ಎಲ್ಲ ಉದ್ಯೋಗಗಳಿಗಿಂತಲೂ ಹೆಚ್ಚು ದಣಿವು ಮಾಡುವ ಉದ್ಯೋಗವೆಂದರೆ ಕೃಷಿ. ನಾಜೂಕಿನ ಉದ್ಯೋಗಗಳೆಂದರೆ ಹೆಚ್ಚು ಹೆಚ್ಚು ಹಣ ತರುವಂತಹವು.

ರೈತರ ಕೋಪತಾಪಗಳ ಉರಿ ಶಮನಗೊಳಿಸಲು 1978ರಲ್ಲಿ ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆ (ಐRಈಕ) ಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತು. ರೈತರಿಗೆ ಹಸು, ಎಮ್ಮೆ ಖರೀದಿಸಲು ಧನಸಹಾಯ ನೀಡುವುದು ಇದರ ಉದ್ದೇಶಗಳಲ್ಲಿ ಒಂದು. ಸರ್ಕಾರಿ ಅಧಿಕಾರಿಗಳ ಅಡ್ಡಾದಿಡ್ಡಿತನ ಮತ್ತು ಫ‌ಲಾನುಭವಿಗಳಿಂದ ಸಾಲದ ಹಣದ ದುರ್ಬಳಕೆ ಆಯಿತೆಂದು ಎಲ್ಲೆಲ್ಲೂ ಕೂಗು ಕೇಳಿಬಂತು. ಈ ಯೋಜನೆ ಜನರ ಮೇಲೆ ಹೇರಿದ ಯೋಜನೆಯಾಗಿತ್ತು. ಸ್ಥಳೀಯ ಸಂಪತ್ತು ಮತ್ತು ಪ್ರತಿಭೆಯನ್ನು ಈ ಯೋಜನೆ ಗಮನಕ್ಕೆ ತೆಗೆದುಕೊಳ್ಳಲೇ ಇಲ್ಲ. ಈ ಎಲ್ಲವನ್ನೂ ನೋಡಿದ ರೈತ ಇಂದು ತನ್ನ ಸಮಸ್ಯೆಗೆ ಯಾವುದು ಸರಿಯಾದ ಪರಿಹಾರ ಎಂಬುದನ್ನು ವಿಶ್ಲೇಷಿಸುವಷ್ಟು ಜಾಣನಾಗಿದ್ದಾನೆ.

ಸ್ವಯಂ ಪರಾಮರ್ಶೆ
ಕನಕಪುರ ತಾಲೂಕಿನ ದಕ್ಷಿಣದಲ್ಲಿರುವ ಸುಣ್ಣಘಟ್ಟ ಅಥವಾ ಅದರ ಉತ್ತರದಲ್ಲಿರುವ ಗಬ್ಟಾಡಿ ಗ್ರಾಮಗಳು 60 ವರ್ಷಗಳ ಜಾಗತಿಕ ಇತಿಹಾಸದಲ್ಲಿ ಬೇಡವೆಂದರೂ ಬರುವ ಅಭಿವೃದ್ಧಿಯನ್ನು ಕಂಡ ಪ್ರದೇಶಗಳು. ಒಂದು ಕಾಲದಲ್ಲಿ ಇಲ್ಲಿನ ರೈತರೆಲ್ಲರೂ ಅನಕ್ಷರಸ್ಥರಾಗಿದ್ದರು. ಶಾಲಾ ಕಾಲೇಜುಗಳು ಬರಲಾಗಿ ಅವರೆಲ್ಲರೂ ಅಕ್ಷರಸ್ಥರಾದರು. ದೂರದರ್ಶನ, ದೂರವಾಣಿ, ಮಾಧ್ಯಮಗಳ ವಿಕಾಸದಿಂದ ಅವರಲ್ಲಿ ಇಂದು ಬಹು ಬದಲಾವಣೆ ಕಾಣಸಿಗುತ್ತದೆ. ಅವರ ಚಿಂತನೆಯ ರೀತಿ ಬದಲಾಗಿದೆ. ನಮಗೆ ಯಾವುದು ಸರಿ? ಯಾವುದು ಸರಿಯಲ್ಲ ಎಂಬುದನ್ನು ನಿರ್ಧರಿಸಬಲ್ಲವರಾಗಿದ್ದಾರೆ.

ಸುಣ್ಣಘಟ್ಟದ ನಾರಾಯಣಗೌಡರ ಪ್ರಕಾರ ನಮ್ಮ ಸಮಸ್ಯೆಗಳು ಏನು ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ಅವರ ನಿರೀಕ್ಷೆಗೆ ಸರಿಯಾಗಿ, ಮುಂಬೈನ ಐ.ಐ.ಟಿ.ಯ ಪದವೀಧರರೊಬ್ಬರು ಗ್ರಾಮೀಣಾಭಿವೃದ್ಧಿ ಮಾಡಬೇಕೆಂಬ ಸಂಕಲ್ಪದಿಂದ ತಮ್ಮ ಉತ್ತಮ ಕೆಲಸ ಬಿಟ್ಟು ಈ ಜನರ ನಡುವೆ ಇದ್ದು ಅವರ ಆರ್ಥಿಕ ವಿಕಾಸಕ್ಕಾಗಿ ಒಂದು ವರ್ಷದಿಂದ ಕೈ ಜೋಡಿಸಿದ್ದಾರೆ. ಈ ಕನ್ನಡ ಯುವಕ, ಮಾಧವ್‌ ಪಶುಪತಿ, ಅವರ ಪ್ರಕಾರ ರಾಜ್ಯದ ಬಹುತೇಕ ಗ್ರಾಮಗಳನ್ನು ಹಣಕಾಸಿನ ವಿಚಾರದಲ್ಲಿ ಸ್ವಾವಲಂಬಿ ಮಾಡುವುದು ಸಾಧ್ಯ. ಹಸುವನ್ನು ಉತ್ಪಾದನಾ ಮೂಲವನ್ನಾಗಿ ಮಾಡಿಕೊಂಡು ರೈತರು ಹೆಚ್ಚು ಹೆಚ್ಚು ಹಣ ಸಂಪಾದನೆ ಮಾಡುವಂತೆ ಮಾಡಬಹುದು.

ಹಳ್ಳಿಗಳು ಈ ಮಾದರಿ ಆರ್ಥಿಕ ಸ್ವಾವಲಂಬನೆ ಅನುಭವಿಸಬೇಕಾದರೆ ಭಾರತೀಯ ಹಸುವಿನ ತಳಿ (ದೇಸೀ ಹಸು ಅಥವಾ ಬಾಸ್‌ ಇಂಡಿಕಸ್‌) ಬಳಸಿಕೊಂಡರೆ ಸಾಧ್ಯ ಎಂಬುದು ಮಾಧವ್‌ರ ಅಭಿಪ್ರಾಯ. ಕರ್ನಾಟಕದಲ್ಲೇ ಸುಮಾರು 5 ಲಕ್ಷ ಹಳ್ಳಿಗಳಿದ್ದು,  ರೈತರು ಪಶುಸಂಗೋಪನೆ ಮತ್ತು ಹಾಲು ಮಾರಾಟದಿಂದ ಜೀವನ ಸಾಗಿಸುತ್ತಿದ್ದಾರೆ. ಮಾಧವ್‌ ಮತ್ತು ಅವರ ಸ್ನೇಹಿತರು ಮಾಡಿರುವ ಗ್ರಾಮ ಆರ್ಥಿಕ ಸ್ವಾತಂತ್ರ ಯೋಜನೆ ಸರ್ಕಾರಿ ಯೋಜನೆಯನ್ನು ಮೀರಿದ್ದು. ಈ ಯುವಕರು ಇಡೀ ಗ್ರಾಮವೇ ಒಂದು ಸಣ್ಣ ಕೈಗಾರಿಕೆಯಂತೆ ಕಾರ್ಯ ನಿರ್ವಹಿಸುವಂತೆ ಆಗಬೇಕು ಎಂದು ಹೇಳುತ್ತಾರೆ. ದೇಸೀ ಹಸುವಿನಿಂದ ಎಲ್ಲ ಹಳ್ಳಿಗಳೂ ಸ್ವಾವಲಂಬಿ ಮತ್ತು ಸಮೃದ್ಧಿಯ ಘಟಕಗಳಾಗಬಹುದು. ನಾವು ಇದನ್ನು ಮಾಡಿ ತೋರಿಸುತ್ತೇವೆ ಎಂಬ ಕುಗ್ಗದ ಉತ್ಸಾಹ. ಹಾಲು, ಗೋಮೂತ್ರ ಮತ್ತು ಗೋಸಗಣಿ ಇವುಗಳಿಂದ ಲಾಭ ಮಾಡಬೇಕು ಎಂಬ ನಿರ್ಧಾರ.

ಗೋ ಕೇಂದ್ರೀಕೃತ ಅರ್ಥಶಾಸ್ತ್ರ
ಗೋ ಮೂಲ ಅರ್ಥಶಾಸ್ತ್ರದ ಪ್ರಕಾರ ಹಸು ಮತ್ತು ಅದರ ಉತ್ಪನ್ನಗಳನ್ನು ಲಾಭದಾಯಕವಾಗಿ ಮಾರುವುದರ ಮೂಲಕ ರೈತನ ವರಮಾನವನ್ನು ಹೆಚ್ಚಿಸಬಹುದು. ಹೊಸ ತಂತ್ರಜಾnನದ ಮೂಲಕ ಗೋಮೂತ್ರ ಮತ್ತು ಸಗಣಿಯನ್ನು ಲಾಭದಾಯಕವಾಗಿ ಉಪಯೋಗಿಸಬಹುದು. ಅಧ್ಯಯನವೊಂದರ ಪ್ರಕಾರ ಗೋಮೂತ್ರ ಮತ್ತು ಸಗಣಿಯನ್ನು ಔಷಧ ತಯಾರಿಕೆ, ಸುಗಂಧದ್ರವ್ಯ ತಯಾರಿಕೆ ಮತ್ತು ಸಾವಯವ ಇಂಧನ (ಗೋಬರ್‌ ಗ್ಯಾಸ್‌) ತಯಾರಿಕೆ ಮತ್ತಿತರ 100 ತರಹ ತಯಾರಿಕೆಗಳಲ್ಲಿ ಉಪಯೋಗಿಸಬಹುದು.  ರಾಷ್ಟ್ರೀಯ ಜಿ.ಡಿ.ಪಿ.ಗೆ ಕ್ಷೀರ ಮತ್ತು ಕ್ಷೀರೋತ್ಪನ್ನಗಳಿಂದ ಸಂದಾಯವಾಗುವುದು 1,01,990 ಕೋಟಿ ರೂ.ಗಳಾದರೆ, ಗೋಧಿ ಕೇವಲ 47,090 ಕೋಟಿ ರೂ. ಹಾಗೂ ಸಕ್ಕರೆ 27,647 ಕೋಟಿ ರೂ.ಗಳನ್ನು ಸಂದಾಯಿಸುತ್ತವೆ. ಇದು 20 ವರ್ಷಗಳ ಹಿಂದಿನ ಅಂಕಿ ಅಂಶಗಳ ಪ್ರಕಾರ ಮಾಡಿದ ಲೆಕ್ಕಾಚಾರ. ಮುಖ್ಯಾಂಶವೆಂದರೆ, ರಾಷ್ಟ್ರೀಯ ಪಶುಸಂಪತ್ತಿನಲ್ಲಿ ಶೇ.70 ರಷ್ಟು ಸಣ್ಣ ಮತ್ತು ಮಧ್ಯಮ ರೈತರ ಬಳಿ ಇದೆ. 2001-02ರಲ್ಲಿ ಭಾರತ 85 ದಶಲಕ್ಷ ಟನ್‌ ಹಾಲು ಉತ್ಪಾದಿಸಿದ್ದರೆ, 1998ರಲ್ಲಿ ವಿಶ್ವದಲ್ಲೇ ಹಾಲು ಉತ್ಪಾದನೆಯಲ್ಲಿ ಭಾರತ ಪ್ರಥಮ ಸ್ಥಾನ ಪಡೆದಿತ್ತು.

ಆಯುರ್ವೇದ ಪಂಡಿತರು ಸಂಜೀವಿನಿಯಂದೇ ಪರಿಗಣಿಸಿರುವ ಪಂಚಗವ್ಯ ಇಂದು ಹಲವಾರು ಕೈಗಾರಿಕಾ ಘಟಕಗಳು ಅಸ್ತಿತ್ವಕ್ಕೆ ಬರಲು ಕಾರಣವಾಗಿದೆ. ಕರು ಹಾಕಿದ ನಂತರದ ಮೊದಲ ಗೋಮೂತ್ರ ಇಂದು ಅತೀ ಹೆಚ್ಚಿನ ಬೇಡಿಕೆಯುಳ್ಳ ವಸ್ತು. ಇದರಲ್ಲಿ ವಿಶೇಷ ಔಷಧಿ ಗುಣಗಳಿವೆ ಎಂಬುದು ಸಾಬೀತಾಗಿದೆ. ಗೋಮೂತ್ರಕ್ಕೆ ಕ್ಯಾನ್ಸರ್‌ ಮತ್ತು ಎಚ್‌.ಐ.ವಿ. ವಿರುದ್ಧ ಹೋರಾಡುವ ಗುಣಗಳಿವೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ ಎನ್ನುತ್ತಾರೆ ಮಾಧವ್‌. ಯೋಜನಾ ಆಯೋಗದ ಪ್ರಕಾರ ರಾಷ್ಟ್ರದಲ್ಲಿ ಬಡತನ ಶೇಕಡಾ 22ಕ್ಕೆ ಇಳಿದಿದೆ. ರಾಷ್ಟ್ರದಲ್ಲಿರುವ 26.93 ಕೋಟಿ ಬಡವರಲ್ಲಿ 21.60 ಕೋಟಿ ಜನ ಗ್ರಾಮೀಣ ಪ್ರದೇಶದಲ್ಲಿದ್ದಾರೆ. 2004-05ರಲ್ಲಿ ಶೇ.37.2ರಷ್ಟಿದ್ದ ಬಡತನ 2009-10ಕ್ಕೆ ಶೇ.29.8ಕ್ಕೆ ಇಳಿಯಿತು. ಬಡತನ ಕೆಳಗಿಳಿಯಲು ಮುಖ್ಯ ಕಾರಣ 2000-2010ರಲ್ಲಿ ರಾಷ್ಟ್ರ ಕಂಡ ಅತಿ ಹೆಚ್ಚು ಆರ್ಥಿಕ ಬೆಳವಣಿಗೆ. ಟ್ರಿಕಲ್‌ ಡೌನ್‌ ಥಿಯರಿ ಕೊನೆಗೂ ನಿಜವಾಯಿತು ಎಂದು ಯೋಜನಾ ಆಯೋಗ ಉದ್ಗರಿಸಿತು. ಆದರೆ ಬಡತನ ರೇಖೆಗಿಂತ ಕೆಳಗುಳಿದವರು ಯಾರು ಎಂದರೆ (ತೆಂಡೂಲ್ಕರ್‌ ಸೂತ್ರ) ಯಾರಿಗೆ ದಿನಕ್ಕೆ ರೂ.26.65 ದಿನಗೂಲಿ ಸಿಗುತ್ತದೋ ಅವರು ಎಂದು ಯೋಜನಾ ಆಯೋಗ ನೀಡಿದ ವಿವರಣೆಯನ್ನು ಎಲ್ಲರೂ ಹಾಸ್ಯಾಸ್ಪದ ಎಂದರು. ರೈತನ ಜೀವನದಲ್ಲಿ ಕಾಣಬರುವ ಒಂದು ಬದಲಾವಣೆಯೆಂದರೆ: ಅವನಿಗೆ ಮೊದಲು ನೀಡುತ್ತಿದ್ದ ಬಿ.ಪಿ.ಎಲ್‌. ಕಾರ್ಡಿಗೆ ಬದಲಾಗಿ ಹಲವಾರು ಕಡೆ ಎ.ಪಿ.ಎಲ್‌. ಕಾರ್ಡ್‌ ನೀಡಲಾಗುತ್ತಿದೆ. ಹಣೆಪಟ್ಟಿಯಲ್ಲಿ ಬದಲಾವಣೆ!

ದೇಸೀ ಹಸುವಿನ ಹಾಲು
ವೈಜಾನಿಕ ಸಂಶೋಧನೆಗಳಿಂದ ಭಾರತೀಯ ದೇಸೀ ಹಸುವಿನ ಹಾಲಿನಲ್ಲಿರುವ ಕೆಲವು ಗುಣಗಳು ಅಮೆರಿಕದ ಜರ್ಸಿ ಹಸುಗಳಲ್ಲಿ ಇಲ್ಲ ಎಂಬುದು. ಬ್ರೆಜಿಲ್‌ ದೇಶ ಭಾರತದಿಂದ 1950ರಲ್ಲಿ 10,000 ದೇಸೀ ಹಸುಗಳನ್ನು ಆಮದು ಮಾಡಿಕೊಂಡಿತು. ಅದರ ಶುದ್ಧ ತಳಿಯ ಮೇಲೆ ಅಲ್ಲಿಯ ವಿಜಾnನಿಗಳು ಮಾಡಿದ ಪ್ರಯೋಗಗಳು ದೇಸೀ ಹಸುಗಳಲ್ಲಿ ಕೆಲವು ವಿಶೇಷ ಗುಣಗಳಿವೆ ಎಂದು ಹೇಳಿದವು. ಉದಾಹರಣೆಗೆ ದೇಸೀ ಹಸುವಿನ ಹಾಲಿನಲ್ಲಿ ಅತಿ ಹೆಚ್ಚು ಮೆಲಾನಿನ್‌ ಇದೆ. ಕರಗುವ ಕೊಬ್ಬು, 22 ತರಹದ ವಿವಿಧ ಕರಗುವ ಖನಿಜಗಳನ್ನು ಹೊಂದಿರುವ ದೇಸೀ ಹಸುವಿನ ಹಾಲು ಉತ್ತಮ ಅಮೈನೋ ರಾಶಿಯನ್ನು ಹೊಂದಿದೆ. ಇದು ಅಲರ್ಜಿ ನಿಷೇಧಕವೂ ಆಗಿದೆ.

ಈ ಸುದ್ದಿಗಳು ಸುಣ್ಣಘಟ್ಟ ಮತ್ತು ಗಬ್ಟಾಡಿಯಂತಹ ಗ್ರಾಮಗಳ ರೈತರಿಗೆ ಸಂತಸ ತಂದಿದೆ. ಈ ಗ್ರಾಮಗಳ ರೈತರು ಮಾಧವ್‌ ಪಶುಪತಿ ನೇತೃತ್ವದಲ್ಲಿ ಒಂದು ಸಂಸ್ಥೆಯನ್ನು ಕಟ್ಟಿ ಕಲಬೆರಕೆಯಿಲ್ಲದ ಶುದ್ಧ ದೇಸೀ ಹಾಲನ್ನು ಬೆಂಗಳೂರು ನಗರದ ಜನರಿಗೆ ಹಂಚುತ್ತಿದ್ದಾರೆ. ಈ ರೂರಲ್‌ ಸ್ಟಾರ್ಟ್‌ ಅಪ್‌ ಐ.ಟಿ. ಕ್ಷೇತ್ರದವರ ಮನ ಗೆದ್ದಿದೆ. ನಾವು ದೇಸೀ ಹಾಲನ್ನು ಲೀಟರ್‌ ಒಂದಕ್ಕೆ 54 ರೂ.ನಂತೆ ಮಾರುತ್ತಿದ್ದೇವೆ. ಏಕೆಂದರೆ ಶೇ.80ರಷ್ಟು ಮಾರುಬೆಲೆ ರೈತನಿಗೆ ತಲುಪಬೇಕು ಎನ್ನುತ್ತಾರೆ ಮಾಧವ್‌.

ಕನಕಪುರ ತಾಲೂಕಿನ ಮೂರು ಗ್ರಾಮಗಳ 650 ರೈತರು ಈ ಹೊಸ ಆರ್ಥಿಕ ಯೋಜನೆಗೆ ಸದಸ್ಯರಾಗಿದ್ದಾರೆ. ಇದು ವೃದ್ಧಿಸಬಹುದೆಂಬ ಸೂಚನೆಗಳಿವೆ. ಟೀಮ್‌ ದೇಸೀ ಮಿಲ್ಕ್ಗೆ ಇದು ಸಂತಸ ತಂದಿದೆ. ಟೀಮ್‌ ದೇಸೀ ಮಿಲ್ಕ್ನವರು ಈ ಆವಿಷ್ಕಾರವನ್ನು ಈಗಾಗಲೇ ರಾಜಸ್ಥಾನ, ಮಹಾರಾಷ್ಟ್ರ ಮತ್ತು ತಮಿಳುನಾಡಿಗೆ ಹರಡಿದ್ದಾರೆ. ಇದರ ಯಶಸ್ಸು, ವ್ಯವಹಾರದ ಪ್ರಮಾಣದ ಮೇಲೆ ಅವಲಂಬಿತವಾಗಿದೆ. ಇದನ್ನು ರಾಷ್ಟ್ರವ್ಯಾಪಿ ಮಾಡಬೇಕೆಂಬುದು ನಮ್ಮ ಧ್ಯೇಯ ಎನ್ನುತ್ತಾರೆ ಪಶುಪತಿ.
-ಜಿ.ಎಸ್‌.ಕೃಷ್ಣಮೂರ್ತಿ, ಬೆಂಗಳೂರು
-ಉದಯವಾಣಿ

Write A Comment