ಕರ್ನಾಟಕ

ಉಪ ಚುನಾವಣೆಗೆ ತಯಾರಿ ಜೋರು: ನಾಮಪತ್ರ ಸಲ್ಲಿಕೆಗೆ ಐದೇ ದಿನ ಬಾಕಿ

Pinterest LinkedIn Tumblr
Voters
ಬೆಂಗಳೂರು: ಬೆಂಗಳೂರಿನ ಹೆಬ್ಬಾಳ, ರಾಯಚೂರು ಜಿಲ್ಲೆಯ ದೇವದುರ್ಗ ಹಾಗೂ ಬೀದರ್ ವಿಧಾನಸಭಾ ಕ್ಷೇತ್ರಗಳಿಗೆ ಫೆ.13 ರಂದು ನಡೆಯಲಿರುವ ಉಪ ಚುನಾವಣೆಗೆ ಪ್ರಮುಖ ರಾಜಕೀಯ ಪಕ್ಷಗಳು ಇನ್ನಷ್ಟೇ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಇಂದಿನಿಂದ ಶುರುವಾಗಲಿದೆ.
ನಾಮಪತ್ರ ಸಲ್ಲಿಕೆ ಆರಂಭವಾಗಲು (ಜ.20) ಕೇವಲ 5 ದಿನ ಬಾಕಿ ಇರುವುದರಿಂದ ಅಭ್ಯರ್ಥಿಗಳ ಆಯ್ಕೆ ಆದಷ್ಟು ಬೇಗ ಆಗಬೇಕಿದೆ. ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೂ ಮುನ್ನವೇ ಎದುರಾಗಿರುವ ಈ ಉಪ ಚುನಾವಣೆ ಆಡಳಿತ ಹಾಗೂ ವಿಪಕ್ಷಗಳ ಪಾಲಿಗೆ ಮತ್ತೊಂದು ಸವಾಲು ಹಾಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಬಿಜೆಪಿಯ ಎರಡು ಸ್ಥಾನಗಳು (ಬೀದರ್, ಹೆಬ್ಬಾಳ) ಹಾಗೂ ಕಾಂಗ್ರೆಸ್‍ನ ಒಂದು (ದೇವದುರ್ಗ) ಸ್ಥಾನಕ್ಕೆ ಚುನಾವಣೆ ನಡೆಯುತ್ತಿರುವುದರಿಂದ ತಮ್ಮ ತಮ್ಮ ಸ್ಥಾನಗಳನ್ನು ಗಟ್ಟಿ ಮಾಡಿಕೊಳ್ಳಲು ಬಿಜೆಪಿ ಹಾಗೂ ಕಾಂಗ್ರೆಸ್ ಹರಸಾಹಸ ಪಡಬೇಕಿದೆ. ಆದರೆ ಆಡಳಿತಾರೂಢ ಕಾಂಗ್ರೆಸ್ ತನ್ನ ಒಂದು ಸ್ಥಾನದ ಜತೆಗೆ ಮತ್ತೆರಡು ಸ್ಥಾನಗಳನ್ನೂ ಗೆಲ್ಲುವ ಲೆಕ್ಕಾಚಾರ ಶುರು ಮಾಡಿದೆ. ಆದ್ದರಿಂದ ಬಿಜೆಪಿಕಾಂಗ್ರೆಸ್ ಮಧ್ಯೆ ಭಾರಿ ಚುನಾವಣಾ ಸಮರ ಏರ್ಪಡುವ ಸಾಧ್ಯತೆಗಳಿವೆ.
ಈ ಹಿನ್ನೆಲೆಯಲ್ಲಿ ಈ ಎರಡೂ ಪಕ್ಷಗಳು ಗೆಲ್ಲುವ ಅಭ್ಯರ್ಥಿಗಳ ಹುಡುಕಾಟದಲ್ಲಿ ನಿರತವಾಗಿವೆ, ಅನುಕಂಪದ ಅಲೆಯಲ್ಲಿ ಸುಲಭವಾಗಿ ಚುನಾವಣೆ ಗೆಲ್ಲಬಹುದು ಎಂಬ ಕಾಲ ಇದಲ್ಲ. ಹಾಗಾಗಿ ಗೆಲ್ಲಲು ಎಲ್ಲಾ ರೀತಿಯಿಂದಲೂ ಸಮರ್ಥರಿರುವ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲು ಉಭಯ ಪಕ್ಷಗಳು ಪ್ರಯತ್ನಿಸುತ್ತಿವೆ. ಇನ್ನೂ ಜೆಡಿಎಸ್ ಈ ಚುನಾವಣೆಯಲ್ಲಿ ತನ್ನ ಪಾತ್ರ ಏನು ಎಂಬುದನ್ನು ಇದುವರೆಗೂ ಸ್ಪಷ್ಟಪಡಿಸಿಲ್ಲ. ಅಭ್ಯರ್ಥಿಗಳನ್ನು ಹಾಕಬೇಕೋ ಇಲ್ಲವೋ ಬಿಡಬೇಕೋ ಎಂಬ ಗೊಂದಲ ಆ ಪಕ್ಷದಲ್ಲಿ ಇದ್ದಂತಿದೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ನಡೆಯನ್ನು ಜೆಡಿಎಸ್ ಕಾದು ನೋಡುತ್ತಿದೆ.
ಅಭ್ಯರ್ಥಿಗಳ ಆಯ್ಕೆ ಕಗ್ಗಂಟು: ಕಾಂಗ್ರೆಸ್‍ನಲ್ಲಿ ದೇವದುರ್ಗ ಹಾಗೂ ಬೀದರ್ ಕ್ಷೇತ್ರಗಳಿಗೆ ಬಹುತೇಕ ಅಭ್ಯರ್ಥಿಗಳು ಯಾರೆಂಬುದು ನಿರ್ಧಾರವಾಗಿದೆ, ಅಧಿಕೃತ ಪ್ರಕಟಣೆಯಷ್ಟೇ ಬಾಕಿ ಇದೆ. ಆದರೆ ಹೆಬ್ಬಾಳಕ್ಕೆ ಮಾತ್ರ ಅರ್ಧ ಡಜನ್ ಆಕಾಂಕ್ಷಿಗಳಿರುವುದರಿಂದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ. ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಆರ್.ವಿ.ವೆಂಕಟೇಶ್, ರವಿಶಂಕರ್ ಶೆಟ್ಟಿ, ವಿಧಾನ ಪರಿಷತ್ತಿನ ಸದಸ್ಯ ಎಚ್.ಎಂ.ರೇವಣ್ಣ, ಕಳೆದ ಸಲದ ಅಭ್ಯರ್ಥಿ ರೆಹಮಾನ್ ಷರೀಫ್ ಸೇರಿದಂತೆ 6 ಮಂದಿ ಅಭ್ಯರ್ಥಿಗಳು ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ.
ಈಗಾಗಲೇ ಅಭ್ಯರ್ಥಿಗಳು ಕ್ಷೇತ್ರದ ವಿವಿಧ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳ ಜತೆ ಸಭೆ ನಡೆಸುವ ಮೂಲಕ ಪಕ್ಷದ ಮೇಲೆ ಒತ್ತಡ ಹೇರುತ್ತಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಜಿಲ್ಲಾ ಉಸ್ತುವಾರಿ ಸಚಿವರು, ಪಕ್ಷದ ಸಂಸದರು ಹಾಗೂ ಶಾಸಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ ದೆಹಲಿಗೆ ಅಂತಿಮ ಅನುಮೋದನೆಗೆ ಕಳುಹಿಸಿಕೊಡಲಿ ದ್ದಾರೆ. ಹೀಗಾಗಿ ಭಾನುವಾರದ ನಂತರ ಆಕಾಂಕ್ಷಿಗಳು ದೆಹಲಿಗೆ ಪಯಣ ಬೆಳೆಸುವ ಸಾಧ್ಯತೆಗಳಿವೆ.

 

Write A Comment