ಚಿತ್ರದುರ್ಗ: ಇಬ್ಬರ ಮೇಲೆ ದಾಳಿ ಮಾಡಿ ತಾಲೂಕಿನ ಉಪ್ಪನಾಯಕನಹಳ್ಳಿಯ ಜನರ ಕೈಗೆ ಸಿಕ್ಕಿಬಿದ್ದಿದ್ದ ಕರಡಿಯನ್ನು ನಿನ್ನೆ ಜನ ಹಿಗ್ಗಾಮುಗ್ಗಾ ಹೊಡೆದಿದ್ದ ಪರಿಣಾಮ ಅದು ಮೃತಪಟ್ಟಿದೆ.
ಬುಧವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಕರಡಿ ಸೆರೆ ಹಿಡಿಯಲು ಅಗತ್ಯವಿರುವ ಬಲೆ ಮತ್ತಿತರ ಪರಿಕರಗಳನ್ನು ತೆಗೆದುಕೊಂಡು ಗ್ರಾಮಕ್ಕೆ ತೆರಳಿದ್ದಾರೆ. ಕರಡಿ ಓಡಾಡುವ ಜಾಗಗಳಲ್ಲೆಲ್ಲ ಬಲೆ ಹಾಕಿ ಸೆರೆ ಹಿಡಿಯಲು ಮುಂದಾದರು.
ಆದರೆ, ಕರಡಿ ಹಾವಳಿಯಿಂದ ಬೇಸತ್ತಿದ್ದ ಗ್ರಾಮಸ್ಥರು ಜಮೀನಿನಲ್ಲಿ ಕರಡಿ ಕಂಡ ಕೂಡಲೇ ಗದ್ದಲ ಎಬ್ಬಿಸಿದರು. ಇದರಿಂದ ಬೆದರಿದ ಕರಡಿ ಕಂಡ ಕಂಡ ಕಡೆಗೆ ಓಡತೊಡಗಿತು. ಗ್ರಾಮಸ್ಥರ ಕೂಗಾಟದಿಂದ ಗಾಬರಿಗೊಂಡ ಕರಡಿ ನಂತರ ಗ್ರಾಮದೊಳಗೇ ನುಗ್ಗಿತ್ತು.
ಗ್ರಾಮಕ್ಕೆ ಬಂದ ಕರಡಿಗೆ ಜನರು ಕಲ್ಲು, ದೊಣ್ಣೆಗಳಿಂದ ದಾಳಿ ನಡೆಸಿದ್ದರು. ಇದರಿಂದ ಸಿಟ್ಟಿಗೆದ್ದ ಕರಡಿ ಅಡ್ಡಸಿಕ್ಕ ಪಿಎಸ್‍ಐ ಸತೀಶ್ ಅವರ ಮೇಲೆ ದಾಳಿ ಮಾಡಿ ಅವರ ಕಾಲಿಗೆ ಪರಚಿ ಗಾಯಗೊಳಿಸಿತ್ತು. ಇದರಿಂದ ರೊಚ್ಚಿಗೆದ್ದ ಜನರು ಕರಡಿಯನ್ನು ಬೆನ್ನಟ್ಟಿ ಮತ್ತೆ ಮತ್ತೆ ದಾಳಿ ನಡೆಸಿದ್ದರು. ಗ್ರಾಮದ ಬೀದಿ ಬೀದಿಗಳಲ್ಲಿ ಓಡಿ ಓಡಿ ಸುಸ್ತಾಗಿತ್ತು. ಈ ದೃಶ್ಯವನ್ನು ಸೆರೆಹಿಡಿಯುತ್ತಿದ್ದ ಕ್ಯಾಮೆರಾಮನ್ ಮಂಜು ಅವರ ಮೇಲೆಯೂ ದಾಳಿ ನಡೆಸಿ ಅವರ ಎಡಗೈಗೆ ಪರಚಿ ಗಾಯ ಮಾಡಿತ್ತು.
ಇಷ್ಟೆಲ್ಲಾ ಅವಾಂತರವಾದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬೀಸಿ ಕರಡಿಯನ್ನು ಸೆರೆ ಹಿಡಿದಿದ್ದರು. ಗ್ರಾಮಸ್ಥರ ದಾಳಿಯಿಂದ ತೀವ್ರ ಗಾಯಗೊಂಡ ಕರಡಿಗೆ ಚಿಕಿತ್ಸೆ ಕೊಡಿಸಿ ಆಡುಮಲ್ಲೇಶ್ವರ ಮೃಗಾಲಯದಲ್ಲಿ ಇಡಲಾಗಿತ್ತು. ಕೊಂಚ ಚೇತರಿಸಿಕೊಳ್ಳುತ್ತಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದರು. ಆದರೆ ಇಂದು ಬೆಳಗಿನ ಜಾವ ಮೃತಪಟ್ಟಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕರಡಿಯ ಮೃತ ದೇಹವನ್ನು ದಹನ ಮಾಡಿ ಅಂತ್ಯಸಂಸ್ಕಾರ ಮಾಡಿದ್ದಾರೆ.