ಉಡುಪಿ: ಪೇಜಾವರ ಸ್ವಾಮೀಜಿಗಳ ಐದನೇ ಪರ್ಯಾಯ ಮಹೋತ್ಸವಕ್ಕೆ ಉಡುಪಿ ಧರ್ಮಪ್ರಾಂತ್ಯದ ಕ್ರೈಸ್ತ ಭಾಂಧವರಿಂದ ಹಸಿರು ಹೊರೆ ಕಾಣಿಕೆಯನ್ನು ಗುರುವಾರ ಸಮರ್ಪಿಸಲಾಯಿತು.
ನಗರದ ಜೋಡುಕಟ್ಟೆಯಲ್ಲಿ ಹೊರೆ ಕಾಣಿಕೆ ಮೆರವಣಿಗೆಗೆ ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಉಡುಪಿ ಪರ್ಯಾಯ ಸಮಾರಂಭದ ಶುಭ ಸಂಧರ್ಭದಲ್ಲಿ ಪ್ರತಿಯೊಂದು ಸಮಾಜದವರು ಅವರವರ ಸಮಾಜದ ಕಾಣಿಕೆಯನ್ನು ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಇದು ಒಂದು ಸಮಾಜದ ಕಾರ್ಯಕ್ರಮವಲ್ಲದೆ ಸರ್ವ ಸಮಾಜದ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ. ವಿವಿಧ ಸಮುದಾಯದ ಜನರು ತಮ್ಮ ಹೊರೆಯನ್ನು ನೀಡುವುದರ ಮೂಲಕ ತಮ್ಮ ಕಾಣಿಕೆಯನ್ನು ಪರ್ಯಾಯ ಮಹೋತ್ಸವಕ್ಕೆ ನೀಡುತ್ತಿದ್ದಾರೆ. ಕ್ರೈಸ್ತ ಬಾಂಧವರು ಇಂದಿನ ದಿವಸ ಹೊರೆಕಾಣಿಕೆಯನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ, ಮುಸ್ಲಿಂ ಸಮಾಜದ ಭಾಂದವರು ನಿನ್ನೆಯ ದಿವಸ ತಮ್ಮ ಕಾಣಿಕೆಯನ್ನು ನೀಡುವುದರ ಮೂಲಕ ಉಡುಪಿ ಪರ್ಯಾಯ ಮಹೋತ್ಸವದಲ್ಲಿ ಸೌಹಾರ್ದತೆಯನ್ನು ಮೆರೆದಿದ್ದಾರೆ ಇದು ದೇಶಕ್ಕೆ ಮಾದರಿ ಎಂದರು.
ಮೆರವಣಿಗೆಯಲ್ಲಿ 30 ಕ್ಕೂ ಅಧಿಕ ವಾಹನಗಳು ಭಾಗವಹಿಸಿದ್ದು, ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್ ಸಭಾ, ಮಹಿಳಾ ಸಂಘಟನೆ, ಭಾರತೀಯ ಕೆಥೊಲಿಕ್ ಯುವ ಸಂಚಾಲನ(ಐಸಿವೈಎಮ್), ಯುವ ವಿದ್ಯಾರ್ಥಿ ಸಂಚಾಲನ (ವೈಸಿಎಸ್) ಅಲ್ಲದೆ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆ ಸಂತೆಕಟ್ಟೆ, ಅಂತರಾಷ್ಟ್ರೀಯ ಕ್ರೈಸ್ತ ಸಂಘಟನೆಗಳ ಒಕ್ಕೂಟ ಉಡುಪಿ ಜಿಲ್ಲೆ ಸಹಕಾರ ನೀಡಿದ್ದವು.
ಕೆಥೊಲಿಕ್ ಸಭಾ ಉಡುಪಿ ಧರ್ಮಪ್ರಾಂತ್ಯ ಇದರ ಅಧ್ಯಕ್ಷ ವಿಲಿಯಂ ಮಚಾದೊ, ಕಾರ್ಯದರ್ಶಿ ಆಲಿಸ್ ರೊಡ್ರಿಗಸ್, ಐಸಿವೈಎಮ್ ಇದರ ನಿರ್ದೇಶಕ ವಂ ಎಡ್ವಿನ್ ಡಿ’ಸೋಜಾ, ಅಧ್ಯಕ್ಷ ಡೆರಿಕ್ ಮಸ್ಕರೇನ್ಹಸ್, ವೈಸಿಎಸ್ ಇದರ ಪ್ರಿಯಾಂಕ, ಮಹಿಳಾ ಸಂಘಟನೆಯ ಸ್ಮೀತಾ ರೇಂಜರ್, ಕೆಥೊಲಿಕ್ ಸಭಾ ಇದರ ನಿಕಟಪೂರ್ವ ಅಧ್ಯಕ್ಷರಾದ ಕಿರಣ್ ಎಲ್ರೋಯ್ ಕ್ರಾಸ್ತಾ, ಧರ್ಮಪ್ರಾಂತ್ಯದ ಪಾಲನಾ ಸಮಿತಿಯ ಕಾರ್ಯದರ್ಶಿ ಆಲ್ಫೋನ್ಸ್ ಡಿಕೊಸ್ತಾ, ಮಿಲಾಗ್ರಿಸ್ ಕ್ಯಾಥೆಡ್ರಲ್ ಕಲ್ಯಾಣಪುರ ಇದರ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ವಾಲ್ಟರ್ ಸಿರಿಲ್ ಪಿಂಟೊ, ಮಾಜಿ ಜಿಪಂ ಸದಸ್ಯ ಜೆರಾಲ್ಡ್ ಫೆರ್ನಾಂಡಿಸ್, ಹೊರೆ ಕಾಣಿಕೆ ಕಾರ್ಯಕ್ರಮದ ಸಂಯೋಜಕ ಮೆಲ್ವಿನ್ ಆರಾನ್ಹಾ, ಜೊಸೇಫ್ ರೆಬೆಲ್ಲೊ ಕಲ್ಯಾಣಪುರ, ಲೂಯಿಸ್ ಲೋಬೊ, ಹೆನ್ರಿ ಫೆರ್ನಾಂಡಿಸ್ ಇನ್ನಿತರರು ಉಪಸ್ಥಿತರಿದ್ದರು