ಬೆಂಗಳೂರು, ಜ.14-ಕಳೆದ 2008ರಲ್ಲಿ ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಪ್ರಕರಣಗಳ ವಿಚಾರಣೆಯನ್ನು ಒಟ್ಟಿಗೆ ನಡೆಸುವಂತೆ ಕೋರಿ ಪ್ರಮುಖ ಆರೋಪಿ ಅಬ್ದುಲ್ ನಾಸಿರ್ ಮದನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕೆಳಹಂತದ ನ್ಯಾಯಾಲಯದಲ್ಲೇ ವಿಚಾರಣೆ ನಡೆಸಲು ಸೂಚಿಸಿ, ನಾಲ್ಕು ವಾರಗಳ ಕಾಲ ವಿಚಾರಣೆಯನ್ನು ಮುಂದೂಡಿದೆ.
2008ರಲ್ಲಿ ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ 9 ಪ್ರಕರಣಗಳ ವಿಚಾರಣೆಯನ್ನು ಒಟ್ಟಿಗೆ ನಡೆಸಬೇಕೆಂದು ಅಬ್ದುಲ್ ನಾಸಿರ್ ಮದನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್, ಒಂದು ವಾರದಲ್ಲಿ ಕೆಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಆರೋಪಿಗೆ ಸೂಚಿಸಿದೆ.
ಕೆಳ ನ್ಯಾಯಾಲಯಕ್ಕೂ ಸುಪ್ರೀಂ ಕೋರ್ಟ್ನಷ್ಟೇ ಅಧಿಕಾರವಿದೆ. ಈ ಪ್ರಕರಣದ ನಿರ್ಧಾರವನ್ನು ಕೆಳ ನ್ಯಾಯಾಲಯಕ್ಕೆ ಬಿಡುವುದು ಸೂಕ್ತ. ಕೆಳ ನ್ಯಾಯಾಲಯ ಕೂಡ ಆರು ದಿನ ಕಾರ್ಯ ನಿರ್ವಹಿಸುವ ನ್ಯಾಯಾಲಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಒಂಭತ್ತು ಪ್ರಕರಣದಲ್ಲಿ ಒಟ್ಟು 31 ಆರೋಪಿಗಳಿದ್ದು, ಈಗಾಗಲೇ ಶೇ.60 ಭಾಗ ವಿಚಾರಣೆ ಮುಗಿದಿದೆ. ಮೂವರು ಅಧಿಕಾರಿಗಳು 9 ಪ್ರಕರಣಗಳ ವಿಚಾರಣೆ ನಡೆಸಿದ್ದಾರೆ. ಒಬ್ಬ ಆರೋಪಿ ಮಾತ್ರ ಸುಪ್ರೀಂಕೋರ್ಟ್ಗೆ ಬಂದಿದ್ದಾನೆ. ಈ ಅರ್ಜಿಯನ್ನು ಮಾನ್ಯ ಮಾಡಬಾರದು ಎಂದು ಸರ್ಕಾರದ ಪರ ವಕೀಲರು ವಾದ ಮಂಡಿಸಿದರು. ಈ ವಾದವನ್ನು ಪರಿಗಣಿಸಿದ ನ್ಯಾಯಾಲಯ, ಕೆಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ನಾಲ್ಕು ವಾರ ಮುಂದೂಡಿದೆ.