ಕುಂದಾಪುರ: ತುಳುನಾಡ ಜನರ ಆರಾಧ್ಯ ದೈವ , ಮಕರ ಸಂಕ್ರಮಣ ದಿನದಂದು ವಿಜೃಂಭಣೆಯಿಂದ ಪೂಜೆಗೊಳ್ಳುವ ದೇವ , ಮೂಲೋಕದೊಡತಿ ಮೂಕಾಂಬಿಕೆಯಿಂದ ಮಡಿದು ಭೂಲೋಕದ ಧರೆಯಲ್ಲಿ ಕಾರಣೀಕ ದೈವವಾಗಿ ಮಾರಣಕಟ್ಟೆಯ ಧರೆಯಲಿ ನೆಲೆಸಿ ನಿಂದವನೇ ಶ್ರೀ ಬ್ರಹ್ಮಲಿಂಗೇಶ್ವರ ದೇವರು. ಕುಂದಾಪುರದಿಂದ ಕೊಲ್ಲೂರಿಗೆ ಸಂಚರಿಸುವ ಮಾರ್ಗ ಮಧ್ಯದಲ್ಲಿ ಚಿತ್ತೂರಿನ ಬಳಿ ಇರುವ ಪುರಾಣ ಪ್ರಸಿದ್ಧ ಕ್ಷೇತ್ರವೇ ಶ್ರೀ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಾಲಯ. ಶ್ರೀ ದೇವಿ ಮೂಕಾಂಬೆಯಿಂದ ಮೂಕಾಸುರನು ಹತನಾದ ಕ್ಷೇತ್ರ ಶ್ರೀ ಮಾರಣಕಟ್ಟೆಯಾಗಿ ಲಕ್ಷಾಂತರ ಭಕ್ತರನ್ನೊಳಗೊಂಡು ಪ್ರಸಿದ್ಧಿ ಪಡೆದಿದೆ.
ಮೂಲೋಕದೊಡತಿ ಶ್ರೀ ಮೂಕಾಂಬಿಕೆಯಿಂದ ಮಡಿದ ಮೂಕಾಸುರ ಶ್ರೀ ದೇವಿಯಿಂದ ವರ ಪಡೆದು ಕಾರಣೀಕ ದೈವ ಶ್ರೀ ಬ್ರಹ್ಮಲಿಂಗೇಶ್ವರನಾಗಿ ಮಾರಣಕಟ್ಟೆಯಲ್ಲಿ ನೆಲೆಸಿದ್ದಾನೆ.


ಪಶ್ಚಿಮ ಘಟ್ಟದ ತಪ್ಪಲು ಕರಾವಳಿಯ ಪೂರ್ವ ಭಾಗ ಮಲೆನಾಡು-ಮಲೆನಾಡಿಗೆ ಸೇರಿಕೊಂಡ ಪ್ರದೇಶ. ಉತ್ತರ ದಕ್ಷಿಣವಾಗಿ ಹಬ್ಬಿದಂತಹ ದೊಡ್ಡ ಕಾಡು. ಇಲ್ಲಿ ಲೋಕಕಲ್ಯಾಣಕ್ಕೂ, ಸ್ವಯಂ ಶ್ರೇಯಸ್ಸಿಗೂ ತಪಸ್ಸು ಮಾಡುತ್ತಿದ್ದ ಋಷಿಗಳ ವಾಸ ಹಾಗೇ ಈ ದಟ್ಟಾರಣ್ಯದಲ್ಲಿ ಕಂಹಾಸುರ ಎನ್ನುವ ರಾಕ್ಷಸನಿದ್ದನಂತೆ ಆತನು ಕ್ರೂರಿಯು ಆಗಿದ್ದನಂತೆ. ಕೋಲಮುನಿ ಹಾಗೂ ಮೊದಲಾದ ಋಷಿಗಳ ತಪಸ್ಸಿಗೆ ಭಂಗವನ್ನು ತರುತ್ತಿದ್ದ ಕಂಹಾಸುರ ಅಂತೆ ಜನಸಾಮಾನ್ಯರನ್ನು ಪೀಡಿಸುತ್ತಿದ್ದನಂತೆ ಋಷಿಗಳ ಮತ್ತು ಜನಸಾಮಾನ್ಯರ ರೋಧನ ಹಾಗೂ ಪ್ರಾರ್ಥನೆ ಮೂಕಾಂಬಿಕೆಗೆ ಕೇಳಿಸಿತು. ಜಗಜ್ಜನನಿಯಿಂದ ಸಾಂತ್ವಾನ, ಕಂಹಾಸುರನಿಗೆ ದೇವಿಯಿಂದ ಶಿಕ್ಷೆ ಮೂಕನಾದ, ದೇವಿಯ ಭಕ್ತನಾಗಬೇಕೆಂಬ ತುಡಿತದಿಂದ ಭಕ್ತನಾದ.
ದೇವಿಯನ್ನು ಸೇರಬೇಕು, ಮೋಕ್ಷ ಪಡೆಯಬೇಕೆಂಬ ಹಂಬಲ , ತಾಯಿಯನ್ನು ಮಹಾತ್ವಾಕಾಂಕ್ಷೆಯಿಂದ ವಿರೋಧಿಸಿ ಕುಕೃತ್ಯ ಎಸಗಿದ.
ಕುಪಿತಳಾದ ಮಾತೆ ಬುದ್ಧಿಯ ಮಾತು ಕೇಳದ ಅಸುರನೊಂದಿಗೆ ಮಹಾರಣ. ರಾಕ್ಷಸ ಅಸುನೀಗಿದ ಈ ಸ್ಥಳವೇ ಮಾರಣಕಟ್ಟೆ . ದೇವಿಯು ತನ್ನ ಭಕ್ತನ ಆಶಯದಂತೆ ಈಶ್ವರ ಶಕ್ತಿಯನ್ನು ನೀಡಿ ಶ್ರೀ ಬ್ರಹ್ಮಲಿಂಗೇಶ್ವರನೆಂಬ ನಾಮವನ್ನಿತ್ತು, ಭಕ್ತ ಪೋಷಕನಾಗಿ ಅಭಯದಾತನಾಗುವಂತೆ ಹರಸಿದಳು. ಅಂತಹ ಮಹಾಸ್ಥಳವೇ ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನ ಸನ್ನಿಧಿ.
ಮುಂದೆ ಕೊಲ್ಲೂರಿಗೆ ಬಂದ ಶ್ರೀ ಶಂಕರಾಚಾರ್ಯರು ಈ ಕ್ಷೇತ್ರಕ್ಕೆ ಬಂದರು. ಮಹಾ ಪುರುಷರ ಪಾದದೂಳಿಯಿಂದಾಗಿಯೂ, ಪೂಜ್ಯರಿಂದ ಬರೆಯಲ್ಪಟ್ಟ ಶ್ರೀ ಚಕ್ರದಿಂದಾಗಿಯೂ ಮಹಾನ್ ಶಕ್ತಿಯೊಂದಿಗೆ ಪುಣ್ಯಕ್ಷೇತ್ರವಾಗಿ ಭಕ್ತರ ಯಾತ್ರಾ ಸ್ಥಳವಾಯಿತು. ಅಲ್ಲದೇ ಜನಪದಗಳಲ್ಲಿದ್ದಂತೆ ಬಾಯಿಂದ ಬಾಯಿಗೆ ಬಂದ ಜನರ ಮಾತಿನಂತೆ ಚಿತ್ತೂರು ಗುಡಿಕೇರಿ ಸಂಸ್ಥಾನ ಮನೆಯ ಚಂದಯ್ಯ ಶೆಟ್ಟಿ ಯವರ ಮನೆಯಲ್ಲಿ ದನಕಾಯುವ ಮಂಜನು ದನ ಕರುಗಳನ್ನು ಮೇಯಿಸಲು ತನ್ನ ಸಂಗಡಿಗರೊಂದಿಗೆ ಬ್ರಹ್ಮ ಗುಂಡಿಯ ಕಾಡಿನ ಕಡೆಗೆ ಹೋಗುತ್ತಾರೆ. ಆ ದನ ಕರುಗಳ ಗುಂಪಿನಲ್ಲಿ ಕಪಿಲೆಯೆಂಬ ದನವು ಪ್ರತಿ ದಿನ ಬ್ರಹ್ಮ ಗುಂಡಿಯ ಬಳಿ ಬಂದು ಶಿಲೆಯ ಮೇಲೆ ಹಾಲು ಸುರಿದು ಹೋಗುತ್ತಿತ್ತು. ಅದನ್ನು ಒಂದು ದಿನ ದನ ಕಾಯುವ ಮಂಜ ಕಪಿಲೆ ದನ ಹಿಂಡನ್ನು ಬಿಟ್ಟು ಕಾಡಿನ ಒಳಗೆ ಹೋಗುವುದನ್ನು ಹಿಂಬಾಲಿಸಿದ. ಆ ದನವು ಮುಂದೆ ಹೋಗಿ ಬ್ರಹ್ಮ ಗುಂಡಿಯ ಬಳಿ ಇರುವ ಶಿಲೆಯ ಮೇಲೆ ಹಾಲು ಸುರಿಸುತ್ತಿರುವುದನ್ನು ನೋಡಿದನಂತೆ ಆ ವಿಷಯವನ್ನು ಮನೆಗೆ ಬಂದು ತನ್ನ ಮಡದಿ ಮಂಜಿಯಲ್ಲಿ ತಿಳಿಸಿದ.ಈ ವಿಚಾರವನ್ನು ಮನೆಯ ಯಜಮಾನರಾದ ಚಂದಯ್ಯ ಶೆಟ್ಟಿಯವರಿಗೆ ತಿಳಿಸುತ್ತಾರಂತೆ. ಅವರಿಗೆ ಇವರ ಮಾತಿನಿಂದ ನಂಬಿಕೆಬಾರದೇ ಅದನ್ನು ನೋಡಬೇಕೆಂದು ದನ ಕಾಯುವ ಮಂಜನೊಂದಿಗೆ ಒಂದು ದಿನ ಆ ಕಾಡಿಗೆ ಹೋಗಿ ಕಪಿಲೆ ದನವನ್ನು ಹಿಂಬಾಲಿಸಿಕೊಂಡು ಹೋಗುತ್ತಾರಂತೆ ಆ ದನವು ಬ್ರಹ್ಮ ಗುಂಡಿ ಬಳಿ ಇರುವ ಶಿಲೆಯ ಮೇಲೆ ಹಾಲು ಸುರಿಯುದನ್ನು ನೋಡಿದರಂತೆ ಅವನು ಮನೆಗೆ ಹಿಂದಿರುಗಿ ಬಂದ ನಂತರ ಬ್ರಾಹ್ಮಣರನ್ನು ಕರೆಸಿ ಅವರಲ್ಲಿ ಈ ವಿಚಾರವನ್ನು ತಿಳಿಸಿದರಂತೆ ಆಗ ಅವರು ಈ ಶಿಲೆ ಇರುವ ಸ್ಥಳವು ಪ್ರಸಿದ್ಧ ಶಕ್ತಿ ಸ್ಥಳವಾಗಿದ್ದು ಈ ಹಿಂದೆ ಶ್ರೀ ದೇವಿಯು ಕಂಹಾಸುರನನ್ನು ವದಿಸಿ ಮೂಕಾಸುರನಾದಾಗ ಶ್ರೀ ದೇವಿಯಲ್ಲಿ ನಿನ್ನ ಭಕ್ತನಾಗಬೇಕೆಂದು ಹಂಬಲಿಸಿದಾಗ ದೇವಿಯು ತನ್ನ ಭಕ್ತನ ಆಶಯದಂತೆ ಈಶ್ವರ ಶಕ್ತಿಯನ್ನು ನೀಡಿ ಹರಸಿದಳು. ಮುಂದೆ ಈ ಕ್ಷೇತ್ರಕ್ಕೆ ಯತಿನ್ವರನೊಬ್ಬ ಬಂದ ನಂತರ ಈ ಕ್ಷೇತ್ರ ಪ್ರಸಿದ್ಧವಾಗುತ್ತದೆ. ಕಟ್ಟೆಯಲ್ಲಿ ಈಶ್ವರಿ ಶಕ್ತಿಯು ಹೊಂದಿದಂತಹ ಈ ಸ್ಥಳವೇ ಬಹಳ ಶಕ್ತಿಯುತವಾದ ಬ್ರಹ್ಮಲಿಂಗೇಶ್ವರ ಎಂದು ಹೇಳುತ್ತಾರಂತೆ. ನೋವು-ನಲಿವು-ದುಖಃಗಳಿಗೆ ಅಭಯಧಾಮವಾದ ಈ ಕ್ಷೇತ್ರವೇ ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನ.
ಈ ಕ್ಷೇತ್ರದಲ್ಲಿ ಯಕ್ಷೆ, ಚಿಕ್ಕಮ್ಮ, ಹ್ಯಾಗುಳಿ ದೇವರೇ ಮೊದಲಾದ ದೇವತೆಗಳ ಬಳಗವು ಕಂಡುಬರುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳದಂತೆ ವಾಕ್ಯ ಪ್ರಮಾಣದ ತಿರ್ಪು ಸಿಗುತ್ತದೆ. ಆದ್ದರಿಂದ ಮಂಜುನಾಥನ ಸನ್ನಿಧಿ ತೆಂಕಿನ ದೇವರಾದಂತೆ ಈ ಕ್ಷೇತ್ರವು ಬಡಗಿನ ದೇವರೆಂದು ಕರೆಯಲ್ಪಡುತ್ತದೆ. ಧನು ಸಂಕ್ರಮಣದಂದು ದೊಟ್ಟಿಕಾಲು ಚಿಕ್ಕು ದೇವರ ಪಾತ್ರಿ ಚಕ್ರ ಉಪನದಿಯನ್ನು ದಾಟುವುದು ಅಂತೆಯೇ ತುಳುನಾಡಿನಾದ್ಯಂತ ಭಕ್ತರ ಮನೆಯಲ್ಲಿ ಮೈ ದರ್ಶನ ಮಾಡುವುದು, ದರ್ಶನ ಪಾತ್ರಿ ಮಕರ ಸಂಕ್ರಮಣದಂದು ಶ್ರೀ ಕ್ಷೇತ್ರದಲ್ಲಿ ಹಾಜರಿರುವುದು ಇದರಿಂದ ತುಳು ನಾಡಿಗೂ ಈ ಕ್ಷೇತ್ರಕ್ಕೂ ಇರುವ ಸಂಬಂಧ ಕಂಡುಬರುತ್ತದೆ.
ಪ್ರಾಚೀನತೆಯ ಕುರುಹುವಾಗಿ ಶೇಡಿಮರವೂ ಇದ್ದಿತ್ತು. ಅಂತೇಯೇ ಸನ್ಯಾಸಿ (ಯೋಗಿ)ಯೊಬ್ಬರಿಂದ ಪೂಜಿಸಲ್ಪಡುತ್ತಿತ್ತಂತೆ ಎಂಬುದಕ್ಕೆ ಸಾಕ್ಷಿಯಾಗಿ ಸನ್ಯಾಸಿ ಬೆಟ್ಟು ಎನ್ನುವ ಸ್ಥಳವೂ ಸಮೀಪದಲ್ಲಿದೆ, ಅಂತಹ ಸನ್ಯಾಸಿಗಳು ಪರಿಚಾರಕರಾಗಿದ್ದು ಆದಿ ದ್ರಾವಿಡ ಮೂಲದವರು ಇಂದು ಶ್ರೀ ಕ್ಷೇತ್ರದ ಈಶಾನ್ಯ ದಿಕ್ಕಿನಲ್ಲಿ ಬಂದು ನೆಲೆಸಿದ್ದಾರೆ. ಅವರ ಪೂರ್ವಜರ ಬಾಯಿಯಿಂದ ಬಾಯಿಗೆ ಬಂದ ನಾಡಿಗರ ಮಾತು ಈಗಲೂ ನಾವು ಕೇಳಬಹುದು.
ಸೇವಂತಿಗೆ ಪ್ರಿಯ ದೇವ
ಸೇವಂತಿಗೆ ಹೂ ಹಾಗು ಗಂಟೆಯ ಸದ್ದು ಈ ದೇವರಿಗೆ ಅಚ್ಚುಮೆಚ್ಚು. ನಂಬಿದವರ ಕೈ ಎಂದೂ ಬಿಡದೆ ಕಾಪಾಡಿ ಸಲಹುವನು ತಂದೆ ಬ್ರಹ್ಮಲಿಂಗೇಶ್ವರ ಸ್ವಾಮಿ ಎಂದು ಭಕ್ತರು ಹೇಳುತ್ತಾರೆ.ಅದಕ್ಕಾಗಿಯೇ ಸೇವಂತಿಗೆ ಅರ್ಪಣೆಯನ್ನು ಮಾಡುತ್ತಾರೆ, ಇನ್ನು ಬ್ರಹ್ಮಲಿಂಗೇಶ್ವರ ಸ್ವಾಮಿಗೆ ರಂಗ ಪೋಜೆಯ ಸೇವೆ, ಸಿಂಗಾರ ಹೂವಿನ ಪೂಜೆ, ಮಂಗಳಾರತಿ, ಹಲವು ಬಗೆಯ ಅಭಿಷೇಕ, ಬಯಲಾಟ ಯಕ್ಷಗಾನದ ಸೇವೆಯೆಂದರೆ ಬ್ರಹ್ಮಲಿಂಗೇಶ್ವರನಿಗೆ ಬಹಳ ಇಷ್ಟ.
ಶ್ರೀ ಆದಿ ಶಂಕರಾಚಾರ್ಯರು ಶ್ರೀ ಮೂಕಾಂಬಿಕಾ ದೇವಿಯ ಇಷ್ಟ ವಿಗ್ರಹವನ್ನು ಪಂಚಲೋಹಗಳಲ್ಲಿ ಪ್ರತಿಷ್ಟಾಪಿಸಿದ ನಂತರ ಮಾರನಕಟ್ಟೆ ಮಾರ್ಗವಾಗಿ ಬಂದು ಬ್ರಹ್ಮಲಿಂಗೇಶ್ವರ ಸನ್ನಿಧಿಯಲ್ಲಿ ಸಹ “ಶ್ರೀ ಚಕ್ರ”ವನ್ನು ಸ್ಥಾಪಿಸಿ ಈ ಕ್ಷೇತ್ರವನ್ನು ಸದಾ ಜಾಗ್ರತಗೊಳಿಸಿದ್ದಾರೆ ಎಂಬ ಪ್ರತೀತಿ ಇದೆ.
ಗುರುವಾರ ರಾತ್ರಿ ಮಾರಣಕಟ್ಟೆಯಲ್ಲಿ ಕೆಂಡೋತ್ಸವ ಸಂಭ್ರಮ. ಸಾವಿರಾರು ಭಕ್ತರು ಆಗಮಿಸಿ ಶ್ರೀ ದೇವರ ದರ್ಶನ ಪಡೆಯುವುದು ವಾಡಿಕೆ.
ಕ್ರಪೆ- ಮಾರಣಕಟ್ಟೆ-ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಬ್ಲಾಗ್(ವೆಬ್ ಸೈಟ್)