ಕುಂದಾಪುರ: ಅಪಘಾತಗಳ ತಡೆ ಹಾಗೂ ಸಂಚಾರಿ ಸುರಕ್ಷತಾ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಅವರನ್ನು ಜಾಗ್ರತಗೊಳಿಸುವ ನಿಟ್ಟಿನಲ್ಲಿ ಕುಂದಾಪುರ ಪೊಲೀಸರು ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಮಂಗಳವಾರ ಸಂಜೆ ಕುಂದಾಪುರ ಡಿವೈಎಸ್ಪಿ ಕಛೇರಿ ಸಮೀಪದಲ್ಲಿ ದೊಡ್ಡ ಗಾತ್ರದ ಎಲ್.ಇ.ಡಿ. ಸ್ಕ್ರೀನ್ ಅಳವಡಿಸಿ ಅದರಲ್ಲಿ ಸಂಚಾರಿ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ವಿಡಿಯೋ ತುಣುಕುಗಳ ಪ್ರದರ್ಶನವನ್ನು ಸಾರ್ವಜನಿಕರಿಗಾಗಿ ಏರ್ಪಡಿಸಲಾಗಿತ್ತು. ಸಂಚಾರಿ ನಿಯಮಗಳ ಪಾಲನೆ, ಮದ್ಯ ಸೇವಿಸಿ ವಾಹನ ಚಾಲನೆಯ ಅವಘಡಗಳು, ಪಾರ್ಕಿಂಗ್ ಸಮಸ್ಯೆಗಳು, ರಸ್ತೆಯ ನಿಯಮಗಳು, ವಾಹನ ಚಾಲನೆಯ ರೀತಿಗಳ ಬಗ್ಗೆ ವಾಯಿಸ್ ಓವರ್ ಜೊತೆಗಿನ ವಿಡಿಯೋಗಳು ನೆರೆದ ನೂರಾರು ಜನರಲ್ಲಿ ಅರಿವು ಮೂಡಿಸಿತ್ತು.
ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ವೃತ್ತನಿರೀಕ್ಷಕ ದಿವಾಕರ್ ಪಿ.ಎಂ., ಸಂಚಾರಿ ಠಾಣೆ ಎಸ್‌ಐ ಜಯ, ಕುಂದಾಪುರ ಠಾಣೆ ಎಸ್‌ಐ ನಾಸೀರ್ ಹುಸೇನ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.