ಕಾಬೂಲ್: ಆಫ್ಘಾನಿಸ್ತಾನದ ಮಜರ್ ಎ ಷರೀಫ್ ನಗರದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೇಲೆ ಭಾನುವಾರ ದಾಳಿ ನಡೆಸಲು ಯತ್ನಿಸಿದ ಶಂಕಿತ ಉಗ್ರರ ಪೈಕಿ ಮೂವರನ್ನು ಆಫ್ಘನ್ ಭದ್ರತಾ ಪಡೆಗಳು ಹೊಡೆದುರುಳಿಸಿವೆ.
ಉಗ್ರರು ಮತ್ತು ಆಫ್ಘನ್ ಪಡೆಯ ಮಧ್ಯೆ ಸೋಮವಾರವೂ ಭಾರಿ ಗುಂಡಿನ ಕಾಳಗ ಮುಂದುವರೆದಿದೆ. ಭಾನುವಾರ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಸೋಮವಾರ ಮತ್ತೊಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದೆ. ದಾಳಿ ವೇಳೆ 4 ನಾಗರಿಕರು ಮತ್ತು 6 ರಕ್ಷಣಾ ಸಿಬ್ಬಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ರಾಯಭಾರಿ ಕಚೇರಿಯ ಸಮೀಪ ಸಾವನ್ನಪ್ಪಿದ ಮೂವರು ಉಗ್ರರ ಮೃತದೇಹಗಳನ್ನು ವಶಪಡಿಸಿಕೊಂಡಿರುವುದಾಗಿ ಆಫ್ಘನ್ ರಾಷ್ಟ್ರೀಯ ಪೊಲೀಸರು ತಿಳಿಸಿದ್ದಾರೆ.
ರಾಯಭಾರಿ ಕಚೇರಿ ಮೇಲೆ ದಾಳಿ ನಡೆಸಿದ 4-6 ಮಂದಿ ಉಗ್ರರು ಭದ್ರತಾ ಪಡೆಗಳ ದಾಳಿಗೆ ಹೆದರಿ, ಸಮೀಪದ ಕಟ್ಟಡವೊದರಲ್ಲಿ ಅಡಗಿ ಕುಳಿತಿದ್ದರು. ಕಟ್ಟಡವನ್ನು ಸುತ್ತುವರೆದ ಭದ್ರತಾ ಪಡೆಗಳು ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆಸುತ್ತಿದ್ದಾರೆ. ಇತ್ತೀಚಿನ ವರದಿ ಬಂದಾಗ ಕಾರ್ಯಾಚರಣೆ ಮುಂದುವರೆದಿದೆ.