
ಪಠಾಣ್ಕೋಟ್ : ಪಠಾಣ್ಕೋಟ್ ವಾಯು ನೆಲೆಯಲ್ಲಿ ಅಡಗಿಕೊಂಡಿದ್ದ ಇಬ್ಬರು ಉಗ್ರರ ಪೈಕಿ ಒಬ್ಬನನ್ನು ಭದ್ರತಾ ಪಡೆಗಳು ಭಾನುವಾರ ರಾತ್ರಿ ಹೊಡೆದುರುಳಿಸಿವೆ. ಮತ್ತೊಬ್ಬನ ದಮನಕ್ಕೆ ಕಾರ್ಯಾಚರಣೆ ಮುಂದುವರಿದಿದೆ. ಶನಿವಾರ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿತ್ತು.
‘ಎರಡು ಕಡೆಗಳಿಂದ ಗುಂಡು ಹಾರಿ ಬರುತ್ತಿವೆ. ಹಾಗಾಗಿ ಇನ್ನೂ ಇಬ್ಬರು ಉಗ್ರರು ಅಡಗಿರುವ ಸಂಭವ ಇದೆ. ಹೆಚ್ಚು ಉಗ್ರರು ಇದ್ದಾರೆಯೇ ಎಂಬ ಬಗ್ಗೆ ಖಚಿತತೆ ಇಲ್ಲ. ಕಾರ್ಯಾಚರಣೆ ಪೂರ್ಣಗೊಳ್ಳದೆ ಈ ಬಗ್ಗೆ ನಿಖರ ಮಾಹಿತಿ ದೊರೆಯದು’ ಎಂದು ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮಹರ್ಷಿ ದೆಹಲಿಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಇದುವರೆಗೆ ಎನ್ಎಸ್ಜಿಯ ಬಾಂಬ್ ನಿಷ್ಕ್ರಿಯ ದಳದ ಒಬ್ಬ ಲೆಫ್ಟಿನೆಂಟ್ ಕರ್ನಲ್ ಸೇರಿ ಏಳು ಯೋಧರು ಸಾವಿಗೀಡಾಗಿದ್ದಾರೆ.
ಶನಿವಾರ ಭದ್ರತಾ ಪಡೆಯ ಗುಂಡಿನಿಂದ ಸತ್ತ ಉಗ್ರನ ಚೀಲದಲ್ಲಿದ್ದ ಸಜೀವ ಗ್ರೆನೇಡನ್ನು ಹೊರತೆಗೆಯುವಾಗ ಸ್ಫೋಟಗೊಂಡು ತೀವ್ರ ಗಾಯಗೊಂಡಿದ್ದ ಎನ್ಎಸ್ಜಿಯ ಬೆಂಗಳೂರಿನ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಭಾನುವಾರ ಮೃತಪಟ್ಟರು.
ಮೃತರಲ್ಲಿ ರಕ್ಷಣಾ ಸುರಕ್ಷತಾ ದಳದ ಐವರು ಯೋಧರು ಸೇರಿದ್ದಾರೆ. ಭಾನುವಾರ ಸಂಜೆ ಮತ್ತೆ ಗುಂಡಿನ ದಾಳಿ ನಡೆದಿದ್ದು ಒಂದು ಗ್ರೆನೇಡ್ ಕೂಡ ಸ್ಫೋಟಗೊಂಡಿದೆ. ರಾಷ್ಟ್ರೀಯ ತನಿಖಾ ದಳವು ಉಗ್ರರ ದಾಳಿಯ ತನಿಖೆಯನ್ನು ಕೈಗೆತ್ತಿಕೊಂಡಿದೆ. ವಾಯು ನೆಲೆಯಲ್ಲಿರುವ ಎಲ್ಲ ಯುದ್ಧ ವಿಮಾನಗಳು ಮತ್ತು ಇತರ ಅಮೂಲ್ಯ ಉಪಕರಣಗಳು ಸುರಕ್ಷಿತವಾಗಿವೆ.
ದೆಹಲಿಗೆ ನುಸುಳಿರುವ ಉಗ್ರರು
ನವದೆಹಲಿ (ಪಿಟಿಐ): ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಗೆ ಸೇರಿದ ಇಬ್ಬರು ಉಗ್ರರು ರಾಜಧಾನಿ ದೆಹಲಿಗೆ ನುಸುಳಿದ್ದಾರೆ ಎಂದು ಶಂಕಿಸಲಾಗಿದೆ. ಜನರನ್ನು ಒತ್ತೆ ಇರಿಸಿಕೊಳ್ಳುವುದು ಸೇರಿ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸುವ ಸಂಚು ನಡೆಸಿದ್ದಾರೆ ಎನ್ನಲಾಗಿದೆ. ಹಾಗಾಗಿ ದೆಹಲಿಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.
ಉಗ್ರರು ಇರುವ ಬಗ್ಗೆ ದೆಹಲಿ ಪೊಲೀಸರಿಗೆ ಗುಪ್ತಚರ ಮಾಹಿತಿ ದೊರೆತಿದೆ. ಹಾಗಾಗಿ ಪೊಲೀಸ್ ಆಯುಕ್ತ ಬಿ.ಎಸ್. ಬಸ್ಸಿ ಅವರು ಭಾನುವಾರ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಪ್ರಮುಖ ಕೇಂದ್ರಗಳ ಮೇಲಿನ ಭದ್ರತೆಯನ್ನು ಹೆಚ್ಚಿಸುವುದಕ್ಕಾಗಿ ಅರೆ ಸೇನಾ ಪಡೆಯನ್ನು ನಿಯೋಜಿಸುವಂತೆ ಕೋರಲಾಗಿದೆ.
ಪಠಾಣ್ಕೋಟ್ ವಾಯು ನೆಲೆಯ ಮೇಲೆ ಉಗ್ರರ ದಾಳಿಯ ಕಾರಣದಿಂದ ದೆಹಲಿಯಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದೆ. ವಿಮಾನ, ರೈಲು ಮತ್ತು ಬಸ್ ನಿಲ್ದಾಣ ಹಾಗೂ ಇತರ ಪ್ರಮುಖ ಕೇಂದ್ರಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ. ದೆಹಲಿಯ ಅಪರಾಧ ಪತ್ತೆ ದಳ ಮತ್ತು ವಿಶೇಷ ಘಟಕದ ಪೊಲೀಸರನ್ನೂ ಭದ್ರತೆಗೆ ನಿಯೋಜಿಸಲಾಗಿದೆ. ದೆಹಲಿಯಲ್ಲಿರುವ ಗಣ್ಯ ವ್ಯಕ್ತಿಗಳ ಭದ್ರತೆಗೆ ಕಾರ್ಯತಂತ್ರ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.