
ಕುಣಿಗಲ್: ವೇಗವಾಗಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಗೆ ಉರುಳಿ ಬಿದ್ದ ಪರಿಣಾಮ ಒಂದೇ ಕುಟುಂಬದ ಮೂವರು ಮಹಿಳೆಯರು ಸಾವನ್ನಪ್ಪಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಬೈಪಾಸ್ ರಸ್ತೆಯ ಉರ್ಕೆಹಳ್ಳಿ ಸಮೀಪ ಇಂದು ಬೆಳಿಗ್ಗೆ 6.30 ರಲ್ಲಿ ನಡೆದಿದೆ.
ಮೃತಪಟ್ಟವರನ್ನು ಸಕಲೇಶಪುರ ತಾಲ್ಲೂಕಿನ ಹೆಡ್ಲಹಳ್ಳಿ ಗ್ರಾಮದ ಪುಟ್ಟಮ್ಮ (77), ಲತಾದೇವಿ (53), ಪ್ರಗತಿ (17) ಎಂದು ಗುರುತಿಸಲಾಗಿದೆ. ಧರ್ಮೇಗೌಡ ಮತ್ತು ಮೋಹನ್ಕುಮಾರ್ ಎಂಬುವರ ತೀವ್ರವಾಗಿ ಗಾಯಗೊಂಡಿದ್ದಾರೆ.
ಧರ್ಮೇಗೌಡ ತಮ್ಮ ಕುಟುಂಬ ಸಮೇತರಾಗಿ ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಮುಂಜಾನೆ ಬೆಂಗಳೂರಿನಿಂದ ಸಕಲೇಶಪುರಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರನ್ನು ಧರ್ಮೇಗೌಡರ ಪುತ್ರ ಮೋಹನ್ಕುಮಾರ್ ಚಲಾಯಿಸುತ್ತಿದ್ದರು. ಪಟ್ಟಣ ಬೈಪಾಸ್ ರಸ್ತೆಯ ಉರ್ಕೆಹಳ್ಳಿ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದ ಪರಿಣಾಮ ಧರ್ಮೇಗೌಡರ ತಾಯಿ ಪುಟ್ಟಮ್ಮ, ಪತ್ನಿ ಲತಾದೇವಿ ಅವರು ಸ್ಥಳದಲ್ಲೇ ಸಾಪನ್ನಪ್ಪಿದರೆ, ಇವರ ಬಾಮೈದನ ಪುತ್ರಿ ಪ್ರಗತಿ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಗಾಯಗೊಂಡಿರುವ ಧರ್ಮೇಗೌಡ ಮತ್ತು ಮೋಹನ್ಕುಮಾರ್ ಅವರನ್ನು ಕುಣಿಗಲ್ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆಗಾಗಿ ದಾಖಲಿಸಿದ್ದು, ಧರ್ಮೇಗೌಡರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕೊಂಡೊಯ್ಯಲಾಗಿದೆ.
ಕಾರು ರಸ್ತೆಬದಿಗೆ ಪಲ್ಟಿ ಹೊಡೆದ ರಭಸಕ್ಕೆ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯ ಸುದ್ದಿ ತಿಳಿದ ಕೂಡಲೇ ಕುಣಿಗಲ್ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಶ್ರಮಿಸಿದರು. ಈ ಸಂಬಂಧ ಸಹಾಯಕ ಸಬ್ಇನ್ಸ್ಪೆಕ್ಟರ್ ಸದಾಶಿವಪ್ಪ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.