
ಮಂಗಳೂರು, ಡಿ.24: ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಆಡಿ ಸಂಸ್ಥೆಯ ನೂತನ ‘ಆಡಿ ಕ್ಯೂ7’ ಮಾದರಿಯ ಕಾರನ್ನು ಮಂಗಳೂರು ಮಾರುಕಟ್ಟೆಗೆ ಬುಧವಾರ ಬಿಡುಗಡೆಗೊಂಡಿತು. ಆಡಿ ಸಂಸ್ಥೆಯ ಕರ್ನಾಟಕ-ಪುಣೆಯ ಉಪಾಧ್ಯಕ್ಷ ಗಜಾನನ ಹೆಗ್ಡೆ ಕಟ್ಟೆ ನಗರದ ಮ್ಯಾಕ್‌ಮಾಲ್ ಕಟ್ಟಡದ ಜುಬಿಲ್ಯೆಂಟ್ ಮೋಟಾರ್ ವರ್ಕ್ಸ್ ಪ್ರೈ.ಲಿ. ಸಂಸ್ಥೆಯ ಆಡಿ ಪ್ರದರ್ಶನ ಮಳಿಗೆಯಲ್ಲಿ ಕಾರನ್ನು ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಗಜಾನನ ಹೆಗ್ಡೆ ಕಟ್ಟೆ ಅವರು, ನೂತನ ‘ಆಡಿ ಕ್ಯೂ 7’ ಮಾದರಿ ಪ್ರಸಕ್ತ ಉತ್ತಮ ಬೇಡಿಕೆಯನ್ನು ಸೃಷ್ಟಿಸಿದೆ. ಹಿಂದಿನ ಮಾದರಿಗಳಿಂತ ಹೆಚ್ಚು ಸುಧಾರಣೆಯನ್ನು ಹೊಂದಿರುವ ‘ಆಡಿ ಕ್ಯೂ 7’ ಹಗುರವಾದ ವಾಹನವಾಗಿದ್ದು, ಹೆಚ್ಚಿನ ದೃಢತೆಯನ್ನು ಹೊಂದಿದೆ. ಯಾವುದೇ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರೂಪಿಸಲಾದ ಈ ಮಾದರಿಯ ಕಾರು ಇಂಧನದ ಉಳಿತಾಯದಲ್ಲೂ ಸುಧಾರಣೆಯನ್ನು ಹೊಂದಿದೆ ಎಂದು ಹೇಳಿದರು.


ಹೊಸ ಮಾದರಿಯ ಆಡಿ ಕ್ಯೂ7 ಮಾದರಿ ಬಲಿಷ್ಠವಾದ 45 ಟಿಡಿಐ (3.0ಟಿಡಿಐ)ಎಂಜಿನ್ 249 ಎಚ್‌ಪಿ ಸಾಮರ್ಥ್ಯವನ್ನು ಹೊಂದಿದೆ. ಹಿಂದಿನ ಆಡಿ ಕಾರಿನ ಮಾದರಿಗಿಂತ 325 ಕೆ.ಜಿ ಕಡಿಮೆ ಭಾರವನ್ನು ಈ ವಾಹನ ಹೊಂದಿದೆ. 360 ಡಿಗ್ರಿ ಕ್ಯಾಮರಾವನ್ನು ಹೊಂದಿರುವ ಕಾರು, ಎಸ್‌ಎಂಎಸ್ ಓದುವ ಸೌಲಭ್ಯ, ಆರು ವರ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಆಡಿ ಮಂಗಳೂರು ಪ್ರದರ್ಶನ ಮಳಿಗೆಯ ಮಹಾ ಪ್ರಬಂಧಕ ರವೀಂದ್ರ ಪೈ ಅವರು ಮಾತನಾಡಿ, ಲೀಟರಿಗೆ 14.75 ಕಿ.ಮೀ. ಮೈಲೇಜ್ ಇಂಧನ ಕ್ಷಮತೆಯನ್ನು ನೀಡುತ್ತದೆ. ಎಲ್ಲಾ ‘ಆಡಿ ಕ್ಯೂ 7’ ಪ್ರೀಮಿಯಂ ಪ್ಲಸ್ 73,60,000 ರೂ. ಹಾಗೂ ಕ್ಯೂ 7 ಟೆಕ್ನಾಲಜಿ 79,19,000 ರೂ. ಎಕ್ಸ್ ಶೋ ರೂಮ್ ವೌಲ್ಯವನ್ನು (ಮುಂಬೈ-ದಿಲ್ಲಿ) ಹೊಂದಿದೆ ಎಂದು ತಿಳಿಸಿದರು.