ಕನ್ನಡ ವಾರ್ತೆಗಳು

ಕೋವಿ ಪರವಾನಿಗೆ: ಜಿಲ್ಲಾ ದಂಡಾಧಿಕಾರಿ ಸ್ಪಷ್ಟನೆ

Pinterest LinkedIn Tumblr

Gun_laicewnc_pic

ಮ೦ಗಳೂರು ಡಿ.22: ಕೇಂದ್ರ ಗೃಹ ಮಂತ್ರಾಲಯದ ಪತ್ರ  ನಿರ್ದೇಶನದನ್ವಯ ಆಯುಧ ಪರವಾನಗಿ ನೀಡುವ ಅಧಿಕಾರವು ಜಿಲ್ಲಾದಂಡಾಧಿಕಾರಿಗಳಿಗೆ ಮಾತ್ರವಿದ್ದು, ಜಿಲ್ಲಾ ದಂಡಾಧಿಕಾರಿಗಳ ಬದಲಾಗಿ, ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಗಳು/ಜಿಲ್ಲಾಧಿಕಾರಿಗಳ ಕೇಂದ್ರೀಯ ಸ್ಥಾನ ಸಹಾಯಕರು / ಉಪವಿಭಾಗಾಧಿಕಾರಿಗಳು/ ತಹಶೀಲ್ದಾರರು ಹಾಗೂ ಇನ್ನಿತರೆ ಯಾವುದೇ ಅಧಿಕಾರಿಗಳು ಶಸ್ತ್ರ ಪರವಾನಗಿಯನ್ನು ನೀಡುವಂತಿಲ್ಲ ಎಂದು ಎಲ್ಲಾ ಜಿಲ್ಲಾ ದಂಡಾಧಿಕಾರಿಗಳಿಗೆ ನಿರ್ದೇಶನ ಬಂದಿರುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ತಾಲೂಕು ವ್ಯಾಪ್ತಿಯಲ್ಲಿ ತಹಶೀಲ್ದಾರರು ಬೆಳೆ ರಕ್ಷಣೆಗೆ ಕೋವಿ ಪರವಾನಗಿ ಮಂಜೂರು ಮಾಡುತ್ತಿದ್ದು, ಅವರ ವ್ಯಾಪ್ತಿಯಲ್ಲೇ ನವೀಕರಿಸುವ ಬಗ್ಗೆ ಕ್ರಮಕೈಗೊಳ್ಳಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಯಾವುದೇ ಮಾನದಂಡಗಳನ್ನು ಅನುಸರಿಸದೇ ಹಾಗೂ ಅರ್ಜಿದಾರರ ಅವಶ್ಯಕತೆಗಳನ್ನು ಪರಿಶೀಲಿಸದೇ ಹೆಚ್ಚಿನ ಪ್ರಮಾಣದಲ್ಲಿ ಪರವಾನಗಿ ಅವಶ್ಯಕತೆ ಇದ್ದವರಿಗೂ ಇಲ್ಲದವರಿಗೂ ಬೇಕಾಬಿಟ್ಟಿಯಾಗಿ ತಾಲೂಕು ಕಚೇರಿಯಲ್ಲಿ ಪರವಾನಗಿ ಮಂಜೂರು ಮಾಡುತ್ತಿರುವುದು ಹಾಗೂ ಹೀಗೆ ಪರವಾನಗಿ ಪಡೆದವರು ಕಾಲಕಾಲಕ್ಕೆ ಪರವಾನಗಿಯನ್ನು ನವೀಕರಿಸಿಕೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಜಿಲ್ಲಾ ದಂಡಾಧಿಕಾರಿಯವರ ಗಮನಕ್ಕೆ ಬಂದಿರುತ್ತದೆ.

ಜಿಲ್ಲಾ ದಂಡಾಧಿಕಾರಿಯವರು ಜಿಲ್ಲೆಯ ವಿವಿಧ ತಾಲೂಕು ಕಚೇರಿಗಳನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ ಆಯುಧ ಪರವಾನಗಿ ಮಂಜೂರಾತಿ ವಹಿಗಳನ್ನು ಪರಿಶೀಲಿಸಿದಾಗ, ಆಯುಧ ಪರವಾನಗಿಗಳನ್ನು ಕಾಲಕಾಲಕ್ಕೆ ನವೀಕರಿಸಿಕೊಳ್ಳದೆ, ಹಲವಾರು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವುದು ಹಾಗೂ ಈ ಮೂಲಕ ಶಸ್ತ್ರಾಸ್ತ್ರಗಳನ್ನು ಅನಧಿಕೃತವಾಗಿ ಹೊಂದಿರುವುದು ಜಿಲ್ಲಾ ದಂಡಾಧಿಕಾರಿಯವರ ಗಮನಕ್ಕೆ ಬಂದಿರುತ್ತದೆ. ಅಲ್ಲದೆ ಪರವಾನಗಿಗಾಗಿ ಅರ್ಜಿ ಸಲ್ಲಿಸುವ ಹಾಗೂ ಮಂಜೂರು ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಹೊಂದಿರುವ ಆಸಕ್ತಿಯನ್ನು ಅರ್ಜಿದಾರರು ಪರವಾನಗಿ ಮಂಜೂರಾದ ನಂತರ ನವೀಕರಿಸುವ ಸಂದರ್ಭದಲ್ಲಿ ತೋರದಿರುವುದನ್ನು ಜಿಲ್ಲಾ ದಂಡಾಧಿಕಾರಿಯವರು ಗಮನಿಸಿರುತ್ತಾರೆ.

ಈ ಹಿಂದೆ ತಹಶೀಲ್ದಾರರು ಬೆಳೆ ರಕ್ಷಣೆಗಾಗಿ ಕೋವಿ ಪರವಾನಗಿಯನ್ನು ಮಂಜೂರು ಮಾಡುತ್ತಿದ್ದು, ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ರಂತೆ ಯಾವುದೇ ಪ್ರಾಣಿ ಪಕ್ಷಿಗಳನ್ನು ಕೊಲ್ಲುವಂತಿಲ್ಲ. ಆದುದರಿಂದ ಇತ್ತಿಚಿನ ದಿನಗಳಲ್ಲಿ ಬೆಳೆ ರಕ್ಷಣೆಗಾಗಿ ಪರವಾನಗಿ ಮಂಜೂರು ಮಾಡುವುದೆಂಬ ಪರಿಕಲ್ಪನೆಯಲ್ಲಿ ಯಾವುದೇ ಅರ್ಥ ಇರುವುದಿಲ್ಲ.

ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯು ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ಜಿಲ್ಲೆಯಲ್ಲಿ ಈಗಾಗಲೇ 15,000 ಕ್ಕೂ ಮಿಕ್ಕಿ ಪರವಾನಗಿಗಳು ಚಾಲ್ತಿಯಲ್ಲಿದ್ದು, ಕೃಷಿ ರಕ್ಷಣೆ ಎಂಬ ನೆಪದಲ್ಲಿ ಶಸ್ತ್ರಾಸ್ತ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದುತ್ತಿರುವವರ ಪ್ರಮಾಣ ದಿನದಿಂದ ದಿನಕ್ಕೆ ಇನ್ನಷ್ಟು ಹೆಚ್ಚಾಗುತ್ತಿರುವುದು ರಾಜ್ಯದ / ದೇಶದ ಭದ್ರತೆಗೆ ಆತಂಕಕಾರಿಯಾದ ಬೆಳವಣಿಗೆಯಾಗಿರುತ್ತದೆ.

ಈಗಾಗಲೇ ಕೇಂದ್ರ ಗೃಹ ಮಂತ್ರಾಲಯದಿಂದ ಆಯುಧ ಪರವಾನಗಿ ಮಂಜೂರು ಮಾಡುವ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮವಹಿಸಲು ಸೂಚನೆ ನೀಡಿರುವ ಹಿನ್ನಲೆಯಲ್ಲಿ ಸರ್ಕಾರದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸುವ ಉದ್ದೇಶದಿಂದ ಹಾಗೂ ಜಿಲ್ಲೆಯಲ್ಲಿ ಶಸ್ತ್ರಾಸ್ತ್ರ ಪರವಾನಗಿಗಳ ಸಂಖ್ಯೆಯನ್ನು ನಿರ್ಬಂಧಿಸುವ ಉದ್ದೇಶದಿಂದ ತಹಶೀಲ್ದಾರರಿಗೆ ಬೆಳೆ ರಕ್ಷಣೆಗಾಗಿ ಹೊಸದಾಗಿ ಪರವಾನಗಿ ಮಂಜೂರು ಮಾಡದಂತೆ ನಿರ್ದೇಶನಗಳನ್ನು ನೀಡಲಾಗಿರುತ್ತದೆ. ಹೊರತು ಕೃಷಿಕರ / ರೈತರ ಹಕ್ಕನ್ನು ಕಸಿದುಕೊಳ್ಳುವ ಯಾವುದೇ ಉದ್ದೇಶವಿರುವುದಿಲ್ಲ.

ಆದಾಗ್ಯೂ ಕೋವಿ ಪರವಾನಗಿ ಕೃಷಿಕರಿಗೆ ತೀರಾ ಅವಶ್ಯಕವೆಂದು ಪ್ರಕರಣಗಳಲ್ಲಿ ಪರವಾನಗಿ ಮಂಜೂರಾತಿಗಾಗಿ ಜಿಲ್ಲಾದಂಡಾಧಿಕಾರಿಯವರಿಗೆ ಪ್ರಸ್ತಾವನೆ ಸಲ್ಲಿಸಲು ಸಂಬಂಧಪಟ್ಟ ತಹಶೀಲ್ದಾರರಿಗೆ ನಿರ್ದೇಶನ ನೀಡಲಾಗಿದೆ. ಹಾಗೂ ಅರ್ಹ ಪ್ರಕರಣಗಳಲ್ಲಿ ಪರವಾನಗಿ ಮಂಜೂರಾತಿ ಮಾಡಲು ಈ ಕಚೇರಿಯಿಂದ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ದಂಡಾಧಿಕಾರಿಗಳ ತಿಳಿಸಿದ್ದಾರೆ.

Write A Comment