
ಮಂಗಳೂರು, ಡಿ.22: ಹಿಂದು ಧರ್ಮ, ದೇವರನ್ನು ಹೀಯಾಳಿಸಿ ಭಾಷಣ ಮಾಡುವ ಮೂಲಕ ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿರುವ ಜಾಕಿರ್ ನಾಯ್ಕ ಜ.2ರಂದು ಜಿಲ್ಲೆಗೆ ಆಗಮಿಸುವುದನ್ನು ವಿರೋಧಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನ ಸಭೆಯನ್ನುದ್ದೇಶಿಸಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಗುರು ಪ್ರಸಾದ್ ಅವರು ಮಾತನಾಡಿ, ದೇಶ ದ್ರೋಹಿ, ಕೋಮು ಪ್ರಚೋದಕ, ಭಯೋತ್ಪಾದಕ ಹಾಗೂ ಹಿಂದೂ ದೇವತೆಗಳಿಗೆ ಅಪಮಾನ ಮಾಡುವ ಝಾಕಿರ್ ನಾಯ್ಕ್ ರ ಕಾರ್ಯಕ್ರಮವನ್ನು ರದ್ದುಗೊಳಿಸಬೇಕು. ಹಿಂದು ಧರ್ಮ, ದೇವರನ್ನು ಹೀಯಾಳಿಸಿ ಭಾಷಣ ಮಾಡುವ ಮೂಲಕ ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿರುವ ಜಾಕಿರ್ ನಾಯ್ಕಗೆ ಜಿಲ್ಲೆಯಲ್ಲಿ ಯಾವೂದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
2012ರಲ್ಲಿ ಶ್ರೀಮಹಾಗಣೇಶ ದೇವರನ್ನು ಅಪಮಾನ ಮಾಡಿರುವ ಝಾಕಿರ್ ನಾಯ್ಕ್, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದರು. ಈ ಬಗ್ಗೆ ಹಲವು ಠಾಣೆಗಳಲ್ಲಿ ಪ್ರಕರಣಗಳೂ ದಾಖಲಾಗಿದ್ದವು. ಆದರೆ ಇದೀಗ ಜಿಲ್ಲಾಡಳಿತ ಜ.2ರಂದು ಜಿಲ್ಲೆಗೆ ಇವರನ್ನು ಬರಮಾಡಿಕೊಳ್ಳುತ್ತಿದೆ. ಹಾಗಾಗಿ ಜಿಲ್ಲಾಡಳಿತ ತಕ್ಷಣ ತನ್ನ ಕ್ರಮದಿಂದ ಹಿಂದೆ ಸರಿದು ಝಾಕೀರ್ ನಾಯ್ಕ್ ರ ಕಾರ್ಯಕ್ರಮವನ್ನು ರದ್ದು ಪಡಿಸಬೇಕು.

ಹಿಂದೂ ಧರ್ಮದ ದೇವರುಗಳನ್ನು ಹೀಯಾಳಿಸುತ್ತಾ, ಮುಸ್ಲಿಂ ಧರ್ಮ ಶ್ರೇಷ್ಠ ಎಂದು ಹೇಳಿಕೆ ನೀಡುತ್ತಿರುವ ಝಾಕಿರ್ ನಾಯ್ಕ್ ಒಬ್ಬ ಸ್ವಯಂ ಘೋಷಿತ ಮತಪ್ರಚಾರಕ. ಈ ಮೂಲಕ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಡಾ. ಜಾಕಿರ್ ನಾಯ್ಕಗೆ ಮಂಗಳೂರು ಪ್ರವೇಶಿಸಲು ಜಿಲ್ಲಾಡಳಿತ ಯಾವೂದೇ ಕಾರಣಕ್ಕೂ ಅವಕಾಶ ಕೊಡಬಾರದು ಎಂದು ಅವರು ಒತ್ತಾಯಿಸಿದರು.
ಝಾಕಿರ್ ನಾಯ್ಕ್ ರಿಗೆ ಲಷ್ಕರ್-ಎ-ತೋಯ್ಬಾ ಭಯೋತ್ಪಾದಕ ರಹಿಲ್ ಅಹ್ಮದ್ ಜೊತೆ ಸಂಬಂಧವಿದೆ ಎಂದು ಪೊಲೀಸ್ ತನಿಖೆಯಿಂದ ದೃಡಪಟ್ಟಿದೆ. ಮುಂಬೈ ಆಕ್ರಮಣದ ರೂವಾರಿ ಪಾಕಿಸ್ತಾನದ ಹಫೀಝ್ ಸಯಿದ್ ಜೊತೆ ಸಂಬಂಧವಿದೆಯಲ್ಲದೇ ಹಲವಾರು ಭಯೋತ್ಪದಕ ಸಂಘಟನೆಯೊಂದಿಗೆ ಸಂಬಂಧವಿರುವ ಝಾಕೀರ್ ನಾಯ್ಕ್ ರನ್ನು ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರೇ ಸ್ವಾಗತಿಸಿರುವುದು ಖಂಡನಿಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಝಾಕಿರ್ ನಾಯ್ಕ್ ರನ್ನು ಕರೆತರಲು ಕರ್ನಾಟಕ ಸರಕಾರ ಸಂಪೂರ್ಣ ಸಹಕಾರವನ್ನು ನೀಡಿದೆ. ದೇಶ ವಿರೋಧಿ ಮತಪ್ರಚಾರಕ ಝಾಕಿರ್ ನಾಯ್ಕ್ ರನ್ನು ರಾಜ್ಯಸರಕಾರ ಹಾಗೂ ಜಿಲ್ಲಾಡಳಿತವೇ ಸ್ವಾಗತಿಸುತ್ತಿದ್ದು, ಈ ಕ್ರಮವನ್ನು ತೀವ್ರವಾಗಿ ವಿರೋಧಿಸುವುದಾಗಿ ಅವರು ತಿಳಿಸಿದರು.
ಕೋಮು ಪ್ರಚೋದಿತ ಹೇಳಿಕೆಗಳನ್ನು ನೀಡುವ ಝಾಕೀರ್ ನಾಯ್ಕ್ ರನ್ನು ಜಿಲ್ಲೆಗೆ ಕರೆಯುವುದರಿಂದ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಉಂಟಾಗುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಝಾಕೀರ್ ನಾಯ್ಕ್ ಕಾರ್ಯಕ್ರಮವನ್ನು ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖರಾದ ಧರ್ಮೇಂದ್ರ, ವಿಜಯ್ ಕುಮಾರ್ ಸಹಿತ ಹಲವು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.