
ಶೇಖರಿಸಿಟ್ಟ ಮಾಂಸ ಸೇವನೆಯಿಂದ ಕ್ಯಾನ್ಸರ್ ರೋಗ ಬರುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆಯ ಆರೋಗ್ಯ ಘಟಕ ಎಚ್ಚರಿಕೆ ನೀಡಿದೆ. ವಿಶ್ವ ಕ್ಯಾನ್ಸರ್ ದತ್ತಿ ಸಂಸ್ಥೆ ಈ ವಿಷಯವಾಗಿ ತೀವ್ರ ಕಳವಳ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯ ಅಧ್ಯಯನದಂತೆ ಸಂಸ್ಕರಿತ ಮಾಂಸದಲ್ಲಿ ಕ್ಯಾನ್ಸರ್ಕಾರಕ ಅಪಾಯಕಾರಿ ರಾಸಾಯನಿಕಗಳು ಕಂಡುಬಂದಿವೆ. ಸಿಗರೇಟ್, ಅಲ್ಕೋಹಾಲ್ ಮತ್ತು ಇತರ ಮಾದಕ ವಸ್ತುಗಳ ಸೇವನೆಯಿಂದ ಎದುರಾಗುವಷ್ಟೇ ಕ್ಯಾನ್ಸರ್ ಅಪಾಯಗಳು ಸಂಸ್ಕರಿತ ಮಾಂಸ ಸೇವನೆಯಿಂದ ಬರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಸುದೀರ್ಘ ಅಧ್ಯಯನದಿಂದ ಪತ್ತೆಯಾಗಿರುವ ಈ ಮಾಹಿತಿಯನ್ನು ವಿಶ್ವಸಂಸ್ಥೆ ಸೋಮವಾರ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಗಳಿವೆ. ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದು, ಸುದೀರ್ಘ ಕಾಲ ಶೇಖರಣೆ ಮಾಡುವ ಮಾಂಸದಲ್ಲಿ ಕ್ಯಾನ್ಸರ್ರೋಗಕ್ಕೆ ತುತ್ತಾಗುವ ಅಪಾಯಕಾರಿ ಅಂಶಗಳಿವೆ. ಇದನ್ನು ಜನರ ಜಾಗೃತಿಗಾಗಿ ಪ್ರಕಟಗೊಳಿಸುವುದು ವಿಶ್ವಸಂಸ್ಥೆಯ ಕರ್ತವ್ಯ ಎಂದಿದ್ದಾರೆ. ಆದರೆ ಇದನ್ನು ಖಾಸಗಿ ಮಾಂಸ ವಹಿವಾಟು ಕಂಪೆನಿಗಳು ತೀವ್ರವಾಗಿ ವಿರೋಧಿಸಿವೆ.
ಬಿಲಿಯನ್ ಡಾಲರ್ ಲೆಕ್ಕದಲ್ಲಿ ಮಾಂಸ ವ್ಯಾಪಾರ ನಡೆಯುತ್ತಿದ್ದು, ಸಂಸ್ಕರಿತ ಮಾಂಸದಲ್ಲಿ ಅಪಾಯಕಾರಿ ಅಂಶಗಳಿವೆ ಎಂಬ ಮಾಹಿತಿ ಬೆಳಕಿಗೆ ಬಂದರೆ ಉದ್ಯಮದ ಮೇಲೆ ಭಾರಿ ಹೊಡೆತ ಬೀಳುವ ಸಾಧ್ಯತೆ ಇದೆ. ವೈಜ್ಞಾನಿಕವಾಗಿ ಸಾಬೀತಾಗದ ಹೊರತು ದಿಢೀರ್ ಪ್ರಕಟಣೆ ನೀಡುವುದು ಸರಿಯಲ್ಲ ಎಂದು ಉದ್ಯಮ ವಲಯ ವಿರೋಧ ವ್ಯಕ್ತಪಡಿಸಿದೆ.