ಉಡುಪಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಕೆ. ಜಯ ಪ್ರಕಾಶ್ ಹೆಗ್ಡೆ ಅವರ ವಿರುದ್ಧ ಪಕ್ಷ ಶಿಸ್ತು ಕ್ರಮದ ನಿರ್ಣಯ ತೆಗೆದುಕೊಳ್ಳಬಹುದು ಎಂದು ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಜಾ ಪ್ರಭುತ್ವದಲ್ಲಿ ಎಲ್ಲರಿಗೂ ಸ್ಪರ್ಧಿಸುವ ಹಕ್ಕಿದೆ. ಆದ್ದರಿಂದ ಜಯಪ್ರಕಾಶ ಹೆಗ್ಡೆ ಸ್ಪರ್ಧಿಸಿರಬಹುದು. ಆದರೆ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಸ್ಪರ್ಧಿಸುವುದು ಪಕ್ಷದ ಸಂವಿಧಾನಕ್ಕೆ ವಿರೋಧ. ಅವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಕಾಂಗ್ರೆಸ್ ಶಿಫಾರಸು ಮಾಡಬಹುದು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ಪ್ರತಾಪಚಂದ್ರ ಶೆಟ್ಟಿಯವರ ಗೆಲುವು ನಿಶ್ಚಿತವಾಗಿದ್ದು ಕಾಂಗ್ರೆಸ್ ಬೆಂಬಲಿತ ಚುನಾಯಿತ ಸದಸ್ಯರು ಹಾಗೂ ಸ್ವಂತಂತ್ರ ಸದಸ್ಯರನ್ನು ವಿಶ್ವಾಸಕೆ ತೆಗೆದುಕೊಂಡು ಅದನ್ನು ಮತವಾಗಿ ಪರಿವರ್ತಿಸಿ ಕಾಂಗ್ರೆಸ್ ಗೆಲ್ಲಲು ಕೆಲಸ ಮಾಡಬೇಕಿದೆ ಎಂದರು.
ಕೇಂದ್ರ ಸರಕಾರ-ಬೇತಾಳ ನ್ಯಾಶನಲ್ ಹೆರಾಲ್ಡ್ ಪತ್ರಿಕೆಗೆ ದೊಡ್ಡ ಇತಿಹಾಸ ವಿದೆ. ಸ್ವಾತಂತ್ರ್ಯ ಸಂಗ್ರಾಮದ ವೇಳೆ ನೆಹರೂ ಅವರಿಂದ ಆರಂಭವಾದ ಪತ್ರಿಕೆಯಾಗಿದೆ. ನ್ಯಾಶನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ದೋಷಾರೋಪಣೆ ಕೇಳಿಬಂದಾಗ ಅಧಿಕಾರಿಯೊಬ್ಬರಿಂದ ತನಿಖೆ ನಡೆಸಿ ದೋಷಮುಕ್ತವಾಗಿತ್ತು. ಆದರೆ ಈಗ ಆ ಅಧಿಕಾರಿ ವರ್ಗಾವಣೆ ಮಾಡಲಾಗಿದೆ. ಇದು ರಾಜಕೀಯ ಪ್ರೇರಿತವಾಗಿದೆ, ಕೇಂದ್ರ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಹೇಳಿದರು.
ಶಿಸ್ತು ಕ್ರಮ ಗ್ಯಾರೆಂಟಿ: ಸೊರಕೆ
ಪಕ್ಷದ ಶಿಸ್ತು ಉಲ್ಲಂಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಕೆಪಿಸಿಸಿ ಅಧ್ಯಕ್ಷರು ತಿಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ. ಯಾರೂ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ಸಚಿವ ವಿನಯಕುಮಾರ ಸೊರಕೆ ಹೇಳಿದರು.