ಕರ್ನಾಟಕ

ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 15 ಸ್ಥಾನ: ಯಡಿಯೂರಪ್ಪ

Pinterest LinkedIn Tumblr

 yaddi

ಬೆಂಗಳೂರು, ಡಿ. 12: ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 15 ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಸಂಸದ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ಜತೆ ಗುರುತಿಸಿಕೊಂಡಿರುವವರು ದೊಡ್ಡ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಹಾಗಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಅವರು ಸುದ್ದಿಗಾರರಿಗೆ ಹೇಳಿದರು.

ಪಕ್ಷ ಸಂಘಟನೆಯಲ್ಲಿ ಈಗಾಗಲೇ ಸಕ್ರೀಯವಾಗಿ ತೊ‌ಡಗಿಸಿಕೊಂಡಿದ್ದೇನೆ. ಹುದ್ದೆಗಳನ್ನು ಕಾಯುತ್ತಾ ಕೂರುವ ಜಾಯಮಾನ ತಮ್ಮದಲ್ಲ. ಪರಿಷತ್ ಚುನಾವಣೆಯಲ್ಲಿ ಎಲ್ಲಾ ನಾಯಕರು ಒಟ್ಟಾಗಿ ರಾಜ್ಯಾದ್ಯಂತ ಚುನಾವಣಾ ಪ್ರಚಾರ ನಡೆಸುತ್ತೇವೆ ಎಂದು ಅವರು ಹೇಳಿದರು.

ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯ ಚುನಾವಣಾ ಪ್ರಚಾರ ಬೆಳಗಾವಿಯಿಂದ ಆರಂಭವಾಗಲಿದೆ. ಬೆಳಗಾವಿಯಿಂದ ಸ್ಪರ್ಧಿಸಿರುವ ಮಹಾಂತೇಶ ಕವತಗಿ ಮಠ ಗೆಲ್ಲಲಿದ್ದಾರೆ ಎಂದು ಅವರು ಭವಿಷ್ಯ ನುಡಿದರು.

ಸರ್ಕಾರದ ವಿರುದ್ಧ ವಾಗ್ದಾಳಿ
ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದ್ದರೂ ಬರ ಕಾಮಗಾರಿಗಳು ಎಲ್ಲೂ ನಡೆದಿಲ್ಲ ಎಂದು ಅವರು ಟೀಕಿಸಿದರು.
ಕೇಂದ್ರ ಸರ್ಕಾರ 1500 ಕೋಟಿ ರೂ.ಗಳನ್ನು ಬರ ಪರಿಹಾರ ಕಾಮಗಾಳಿಗೆ ನೀಡಿದ್ದರೂ ರಾಜ್ಯ ಸರ್ಕಾರ ಮಾತ್ರ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿಲ್ಲ. ಜಿಲ್ಲಾಧಿಕಾರಿಗಳ ಬಳಿ ಹಣ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರದ ಹಣಕಾಸು ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಪರಿಸ್ಥಿತಿ ನಿಭಾಯಿಸಲು ಮುಖ್ಯಮಂತ್ರಿ ಸಿದ್ದರಾಯಮಯ್ಯ ವಿಫಲರಾಗಿದ್ದರೆ ಎಂದು ಆರೋಪಿಸಿದರು.

ಜವಾಬ್ದಾರಿ ಹೊರಲು ಸಿದ್ಧ
ಪಕ್ಷ ಬಯಸಿದರೆ ರಾಜ್ಯಾಧ್ಯಕ್ಷರ ಜವಾಬ್ದಾರಿ ಹೊರಲು ಸಿದ್ಧನಿದ್ದೇನೆ. ಪಕ್ಷ ನೀಡುವ ಜವಾಬ್ದಾರಿಯನ್ನು ಅತ್ಯಂತ ಬದ್ಧತೆಯಿಂದ ನಿರ್ವಹಿಸುತ್ತೇನೆ ಎಂದು ಅವರು ಹೇಳಿದರು.

ಈಗಾಗಲೇ ಪಕ್ಷ ಸಂಘಟನೆಯಲ್ಲಿ ಸಕ್ರೀಯನಾಗಿದ್ದೇನೆ. ಅಧ್ಯಕ್ಷ ಪದವಿ ನೀಡಿದರೆ ಪಕ್ಷವನ್ನು ಹೆಚ್ಚು ಎತ್ತರಕ್ಕೆ ಕೊಂಡೊಯ್ಯಲು ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿ, ಅಂತಿಮವಾಗಿ ವರಿಷ್ಠರ ತೀರ್ಮಾನಕ್ಕೆ ಬದ್ಧ ಎಂದರು.

Write A Comment