ಕಾಸರಗೋಡು, ಡಿ.7: ಜಿಲ್ಲೆಯ ಹಲವೆಡೆ ಶನಿವಾರ ರಾತ್ರಿಯಿಂದ ಕಿಡಿಗೇಡಿಗಳು ಬಸ್ ಮತ್ತು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ. ಬಹುತೇಕ ಪ್ರದೇಶಗಳಲ್ಲ್ಲಿ ರವಿವಾರ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಕೆಲ ಪ್ರದೇಶಗಳಲ್ಲಿ ರವಿವಾರ ಬೆಳಗ್ಗಿನಿಂದ ಖಾಸಗಿ ಬಸ್ಗಳು ರಸ್ತೆಗಿಳಿದರೂ 10ಗಂಟೆ ಸುಮಾರಿಗೆ ಸಂಚಾರ ಸ್ಥಗಿತಗೊಳಿಸಿದವು. ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ ಎಂಬ ಕಾರಣಕ್ಕೆ ಬಸ್ಗಳು ಏಕಾಏಕಿ ಸಂಚಾರ ಸ್ಥಗಿತಗೊಳಿಸಿದೆ ಎನ್ನಲಾಗಿದೆ. ಇದರಿಂದ ಬೆಳಗ್ಗೆ ಪೇಟೆಗೆ ತಲುಪಿದ ಪ್ರಯಾಣಿಕರು ಬಸ್ಸುಗಳಿಲ್ಲದೆ ಪರದಾಡುವಂತಹ ಸ್ಥಿತಿ ಉಂಟಾಗಿತ್ತು.
ಆದರೆ ಕಾಸರಗೋಡು-ಮಂಗಳೂರು ನಡುವೆ ಕೆಎಸ್ಸಾರ್ಟಿಸಿ ಬಸ್ಸುಗಳು ಎಂದಿನಂತೆ ಸಂಚರಿಸುತ್ತಿದ್ದವು. ಮಂಜೇಶ್ವರ, ಉಪ್ಪಳದಲ್ಲಿ ಶನಿವಾರ ರಾತ್ರಿ ಕೇರಳ ಸಾರಿಗೆ ಸಂಸ್ಥೆ ಬಸ್ಗಳ ಮೇಲೆ ಹಾಗೂ ಒಂದು ಖಾಸಗಿ ಬಸ್ಗೂ ಕಲ್ಲುತೂರಾಟ ನಡೆಸಲಾಗಿದೆ.
ಘಟನೆಯಿಂದ ಚಾಲಕ ಅಭಿಕುಮಾರ್(42)ಗಾಯಗೊಂಡಿದ್ದಾರೆ. ಗೋವಾದಿಂದ ಕೇರಳದ ಆಲಪುಝಕ್ಕೆ ಮೀನು ಹೇರಿಕೊಂಡು ತೆರಳುತ್ತಿದ್ದ ಲಾರಿಗೆ ಕಲ್ಲೆಸೆಯಲಾಗಿದ್ದು, ಚಾಲಕ ಬಾಬು (50),ಕ್ಲೀನರ್ ಶಿಬು (36) ಗಾಯಗೊಂಡಿದ್ದಾರೆ. ಕಾಸರಗೋಡು ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಟಯರ್ಗೆಬೆಂಕಿ ಹಚ್ಚಿ ಸಂಚಾರಕ್ಕೆ ತಡೆಯೊಡ್ಡಿದ ಘಟನೆಯೂ ನಡೆದಿದೆ.
ಸ್ಥಳಕ್ಕಾಗಮಿಸಿದ ಪೊಲೀಸರು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಖಾಸಗಿ ಬಸ್ಗಳು ತಮ್ಮ ಸೇವೆಯನ್ನು ಏಕಾಏಕಿ ನಿಲುಗಡೆೆಗೊಳಿಸಿದ್ದ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಕಾಸರಗೋಡು ಮಂಗಳೂರು ರಸ್ತೆಯಲ್ಲಿ ಸಂಚರಿಸುವ ಕೆಎಸ್ಸಾರ್ಟಿಸಿ ಬಸ್ಗಳಿಗೆ ಪೊಲೀಸ್ ಬೆಂಗಾವಲು ಕಲ್ಪಿಸಲಾಗಿತ್ತು.
ಉಪ್ಪಳ-ಬಾಯಾರು ರಸ್ತೆಯಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.ಬಂದ್ಯೋಡು-ಪೆರ್ಮುದೆ ರಸ್ತೆಯಲ್ಲಿ ಕೆಲವೇ ಬಸ್ಸುಗಳು ಸಂಚಾರ ನಡೆಸಿದವು. ಬದಿಯಡ್ಕ ಠಾಣಾ ವ್ಯಾಪ್ತಿಯ ಮಾನ್ಯದಲ್ಲಿ ಆರಾಧನಾ ಕೇಂದ್ರದ ಮೇಲೆ ಟಯರ್ಗೆ ಬೆಂಕಿ ಹಚ್ಚಿ ಎಸೆದ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.


