ಮಂಗಳೂರು, ಡಿ. 6: ಯುವತಿಯ ಮೇಲೆ ಅತ್ಯಾಚಾರ ಎಸಗಿ ಪ್ರಾಣ ಬೆದರಿಕೆ ಒಡ್ಡಿದ್ದ ಆರೋಪಿಗೆ ಮಂಗಳೂರಿನ 6ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 7 ವರ್ಷಗಳ ಕಠಿಣ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಮೂಡುಬಿದಿರೆಯ ಮಾರ್ಪಾಡಿ ನರಂಪಾಡಿಯ ನಿವಾಸಿ ಮಹೇಶ (26) ಶಿಕ್ಷೆಗೊಳಗಾದ ಯುವಕ. ಈತ ಮೂರು ವರ್ಷಗಳ ಹಿಂದೆ ತನ್ನದೇ ಊರಿನ ಪ್ರಥಮ ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಪುಸಲಾಯಿಸಿ ಅತ್ಯಾಚಾರಗೈದಿದ್ದ. ತನ್ನನ್ನು ಪ್ರವೀಣ ಎಂದು ಗುರುತಿಸಿಕೊಂಡಿದ್ದ ಈತ ಕೂಲಿ ಕಾರ್ಮಿಕನಾಗಿದ್ದರೂ ಸೈಟ್ ಎಂಜಿನಿಯರ್ ಎಂಬುದಾಗಿ ಸುಳ್ಳು ಹೇಳಿ ವಿದ್ಯಾರ್ಥಿನಿಯ ಸ್ನೇಹ ಬೆಳೆಸಿಕೊಂಡಿದ್ದ.
2013ರ ಜೂನ್ 3ರಂದು ಮಹೇಶ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಶೀಘ್ರದಲ್ಲೇ ವಾಪಾಸು ಕೊಡುವುದಾಗಿ ಹೇಳಿ ಆಕೆಯಿಂದ ಚಿನ್ನದ ನೆಕ್ಲೆಸ್‌ನ್ನು ಪಡೆದುಕೊಂಡಿದ್ದ. ಬಳಿಕ ಅದನ್ನು ಬ್ಯಾಂಕಿನಲ್ಲಿ ಅಡವಿಟ್ಟು ಹಣ ಪಡೆದಿದ್ದನು. ಇದಾದ ವಾರದ ನಂತರ ಈ ನೆಕ್ಲೆಸನ್ನು ಬ್ಯಾಂಕಿನಿಂದ ಬಿಡಿಸಿ ಮೂಡುಬಿದಿರೆಯ ಚಿನ್ನಾಭರಣ ಅಂಗಡಿಗೆ 25,000ರೂ. ಗಳಿಗೆ ಮಾರಾಟ ಮಾಡಿದ್ದನು.
ಕೆಲವು ದಿನಗಳ ಬಳಿಕ ಆಕೆಯಿಂದ ಚಿನ್ನದ ಕಿವಿಯೋಲೆ ಮತ್ತು ಉಂಗುರವನ್ನೂ ಪಡೆದು ಅದನ್ನು ಅಂಗಡಿಗೆ ಮಾರಾಟ ಮಾಡಿ ವಿದ್ಯಾರ್ಥಿನಿಗೆ ವಂಚಿಸಿದ್ದ.
ಅಲ್ಲದೆ ಜೂ.16 ರಂದು ಆಕೆಯನ್ನು ತನ್ನ ಸ್ಕೂಟರ್‌ನಲ್ಲಿ ಕುಳ್ಳಿರಿಸಿ ಹಳೆಯ ಬೀಡಿ ಬ್ರಾಂಚ್‌ಗೆ ಕರೆದೊಯ್ದು ಅಲ್ಲಿ ಅತ್ಯಾಚಾರ ಎಸಗಿದ್ದನು. ಬಳಿಕ ಆತ ಈ ವಿಷಯವನ್ನು ಮನೆ ಮಂದಿಗೆ ತಿಳಿಸಿದರೆ ಕೊಲೆ ಮಾಡುವ ಬೆದರಿಕೆ ಒಡ್ಡಿದ್ದನು. ಈ ಕುರಿತಂತೆ ನೊಂದ ವಿದ್ಯಾರ್ಥಿನಿ ಮೂಡುಬಿದ್ರೆ ಠಾಣೆಗೆ ದೂರು ನೀಡಿದ್ದಳು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿ ಕೊಂಡ 6ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಡಿ.ಟಿ.ಪುಟ್ಟರಂಗಸ್ವಾಮಿ ಅವರು ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಹೇಳಿ ಅಪರಾಧಿ ಶಿಕ್ಷೆಗೆ ಅರ್ಹ ಎಂದು ಡಿ. 3 ರಂದು ತೀರ್ಪು ನೀಡಿದ್ದರು. ಶನಿವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದಾರೆ.
ಆರೋಪಿ ಮಹೇಶನಿಗೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಅನ್ವಯ 7 ವರ್ಷ ಕಠಿಣ ಸಜೆ ಮತ್ತು 10,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಮತ್ತೆ 3 ತಿಂಗಳ ಸಾದಾ ಶಿಕ್ಷೆ, ಐಪಿಸಿ ಸೆಕ್ಷನ್ 420 (ಮೋಸ, ವಂಚನೆ) ಅನ್ವಯ 3 ವರ್ಷಗಳ ಕಠಿಣ ಸಜೆ ಮತ್ತು 3000 ರೂ. ದಂಡ ಹಾಗೂ ದಂಡ ಪಾವತಿಸಲು ತಪ್ಪಿದರೆ ಮತ್ತೆ 1 ತಿಂಗಳ ಸಾದಾ ಸಜೆ, ಐಪಿಸಿ ಸೆಕ್ಷನ್ 506 (ಕೊಲೆ ಬೆದರಿಕೆ) ಅನ್ವಯ 6 ತಿಂಗಳ ಸಾದಾ ಸಜೆಯನ್ನು ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ದಂಡದ ಮೊತ್ತದಲ್ಲಿ 10,000 ರೂ. ಗಳನ್ನು ಸಂತ್ರಸ್ತ ವಿದ್ಯಾರ್ಥಿನಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಧೀಶರು ಆದೇಶ ನೀಡಿದರು.