ಮುಂಬೈ: ದಕ್ಷಿಣ ಮುಂಬೈನ ಪಾಕ್ಮೋಡಿಯಾ ಸ್ಟ್ರೀಟ್ ಬಡಾವಣೆಯಲ್ಲಿರುವ ಭೂಗತ ದೊರೆ ದಾವೂದ್ ಇಬ್ರಾಹಿಂ ಆಸ್ತಿ ಹರಾಜಿನಲ್ಲಿ ಬಿಡ್ ಸಲ್ಲಿಸಿದ ಮಾಜಿ ಪತ್ರಕರ್ತ ಎಸ್.ಬಾಲಕೃಷ್ಣಗೆ, ದಾವೂದ್ ಬಂಟ ಛೋಟಾ ಶಕೀಲ್ ಬೆದರಿಕೆ ಕರೆ ಮಾಡಿದ ಘಟನೆ ವರದಿಯಾಗಿದೆ.
ದಾವೂದ್ ಬಂಟ ಛೋಟಾ ಶಕೀಲ್ ನನ್ನ ಮೊಬೈಲ್ಗೆ ಎಸ್ಎಂಎಸ್ ಮಾಡಿ, ನೀನು ಹರಾಜಿನಲ್ಲಿ ಬಾಗವಹಿಸುತ್ತಿದ್ದೀಯಾ. ಏನಾಗಿದೆ ನಿನಗೆ. ಚೆನ್ನಾಗಿದ್ದಿ ತಾನೇ. ಹರಾಜಿನಿಂದ ದೂರವಾಗು ಎನ್ನುವ ಬೆದರಿಕೆಯೊಡ್ಡಿದ್ದಾನೆ ಎಂದು ಬಾಲಕೃಷ್ಣ ತಿಳಿಸಿದ್ದಾರೆ.
ಮಕ್ಕಳ ಯೋಗಕ್ಷೇಮ ಮತ್ತು ಮಹಿಳಾ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ದೇಶ ಸೇವಾ ಸಮಿತಿ ಎನ್ಜಿಓ ಪರವಾಗಿ ಹರಾಜಿನಲ್ಲಿ ಬಿಡ್ ಸಲ್ಲಿಸಿದ್ದೆ. ಶ್ರೇಷ್ಠ ದೇಶಭಕ್ತ ಅಶಾಫಾಖುಲ್ಲಾ ಖಾನ್ ಹೆಸರಲ್ಲಿ ಸಂಸ್ಥೆ ನಡೆಸುತ್ತಿದ್ದೇವೆ. ನಮಗೆ ಅವರೇ ಮಾದರಿ. ದಾವುದ್ ಮಾದರಿಯಲ್ಲ. ಪಾಕಿಸ್ತಾನದಲ್ಲಿ ಕುಳಿತ ವ್ಯಕ್ತಿ ನಮ್ಮ ದೇಶದಲ್ಲಿ ಯಾವ ರೀತಿ ಇರಬೇಕು ಎಂದು ಸಲಹೆ ನೀಡಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ಛೋಟಾ ಶಕೀಲ್ನಿಂದ ಬಂದ ಎಸ್ಎಂಎಸ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಇಲ್ಲಿಯವರೆಗೆ ಪೊಲೀಸರಿಗೆ ದೂರು ನೀಡಿಲ್ಲ. ಹರಾಜಿನಲ್ಲಿರುವ ಆಸ್ತಿಯ ಮೌಲ್ಯ 1.18 ಕೋಟಿ ರೂಪಾಯಿಗಳಾಗಿದ್ದು ಹಣವನ್ನು ಹೊಂದಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಕೋಲಬಾದ ಹೋಟೆಲ್ ಡಿಪ್ಲಾಮ್ಯಾಟ್ನಲ್ಲಿ ಡಿಸೆಂಬರ್ 9 ರಂದು ದಾವೂದ್ ಇಬ್ರಾಹಿಂ ಆಸ್ತಿಯ ಹರಾಜು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರ ಸರಕಾರ ವಶಪಡಿಸಿಕೊಂಡ ದಾವೂದ್ ಇಬ್ರಾಹಿಂನ ಏಳು ಆಸ್ತಿಗಳನ್ನು ಸರಕಾರ ಹರಾಜಿಗೆ ಇಟ್ಟಿದೆ ಎಂದು ಮಾಜಿ ಪತ್ರಕರ್ತ ಬಾಲಕೃಷ್ಣನ್ ತಿಳಿಸಿದ್ದಾರೆ.