ರಾಷ್ಟ್ರೀಯ

ತಮಿಳುನಾಡು, ಪುದುಚೇರಿಯಲ್ಲಿ ಮತ್ತೆ ಮುಂದುವರೆದ ವರುಣನ ಆರ್ಭಟ

Pinterest LinkedIn Tumblr

paduಚೆನ್ನೈ, ಡಿ.5-ನಿನ್ನೆ ಸ್ವಲ್ಪ ಬಿಡುವು ಕೊಟ್ಟಿದ್ದ ವರುಣ, ಇಂದು ಬೆಳಗ್ಗೆ ತನ್ನ ಆರ್ಭಟ ಆರಂಭಿಸಿದ್ದು, ತಮಿಳುನಾಡಿನ ಹಲವೆಡೆ ಮತ್ತೆ ಎಲ್ಲವೂ ಅಸ್ತವ್ಯಸ್ತವಾಗಿದೆ. ತಂಬರಂ ಸೇರಿದಂತೆ ಚೆನ್ನೈಯ ಹಲವೆಡೆ, ತಿರುವಣ್ಣಾಮಲೈ, ನಾಗಪಟ್ಟಣಂ, ಕಡಲೂರುಗಳಲ್ಲಿ ಇಂದು ಬೆಳಗ್ಗೆ ಮಳೆರಾಯ ತನ್ನ ರುದ್ರನರ್ತನವನ್ನು ಮತ್ತೆ ಪ್ರಾರಂಭಿಸಿದ್ದಾನೆ. ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವ ಸೇನಾ ಪಡೆಗಳಿಗೆ ಮತ್ತೆ ಅಡ್ಡಿ ಎದುರಾಗಿದೆ. ಅಲ್ಲಲ್ಲಿ ವಿದ್ಯುತ್ ಸಂಪರ್ಕ, ದೂರವಾಣಿ ಸಂಪರ್ಕ ಸಾಧಿಸುವಲ್ಲಿ ಸಫಲವಾಗಿದ್ದರೂ ಇಂದು ಮತ್ತೆ ಆರಂಭವಾದ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಮುರಿದುಬಿದ್ದು, ಎಲ್ಲ ಸಂಪರ್ಕಗಳೂ ಕಡಿತಗೊಂಡಿವೆ. ಪುದುಚೇರಿ ವರದಿ: ಪುದುಚೇರಿಯಲ್ಲಿ ನಿನ್ನೆ ರಾತ್ರಿಯಿಂದ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು, ಪರಿಹಾರ ಕಾರ್ಯಾಚರಣೆಗೆ ತೀವ್ರ ಅಡಚಣೆಯಾಗಿದೆ.

ಪುದುಚೇರಿಯಲ್ಲೂ ಕೂಡ ನಿನ್ನೆ ಮಳೆ ನಿಂತಿದ್ದರಿಂದ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿತ್ತು. ಆದರೆ ರಾತ್ರಿ ಮಳೆ ಸುರಿಯಲಾರಂಭಿಸಿದಾಗ ಮತ್ತೆ ಜನ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕಳೆದ 24 ತಾಸುಗಳಲ್ಲಿ ಅಂದರೆ ಬೆಳಗ್ಗೆ 8.30ರ ವೇಳೆಗೆದ 9.1 ಸೆ.ಮೀ ಮಳೆ ಸುರಿದಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಪುದುಚೇರಿಯಲ್ಲಿ ಒಟ್ಟಾರೆ 60 ಸೆಂ.ಮೀ.ಗೂ ಹೆಚ್ಚಿನ ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಪುದುಚೇರಿ ಹಾಗೂ ತಮಿಳುನಾಡುಗಳಲ್ಲಿ ಸರ್ಕಾರದ ಜತೆ ಅನೇಕ ಸಂಘ-ಸಂಸ್ಥೆಗಳು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ.

>> ಹಲವೆಡೆ ಸಹಜ ಸ್ಥಿತಿ
ಚೆನ್ನೈ, ಡಿ.5-ವರುಣನ ರುದ್ರ ನರ್ತನಕ್ಕೆ ಉಂಟಾದ ಜಲಪ್ರಳಯದಿಂದ ತತ್ತರಿಸಿರುವ ಚೆನ್ನೈ ಮಹಾನಗರದಲ್ಲಿ ಹಲವೆಡೆ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.  ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಕೆಲವು ವಿಮಾನಗಳ ಹಾರಾಟ ಆರಂಭಿಸಲಾಗಿದೆ. ಏರ್‌ಫೋರ್ಟ್ ನಿರ್ದೇಶಕ ದೀಪಕ್ ಶಾಸ್ತ್ರಿ ಅವರ ತಂಡ ಪರಿಶೀಲನೆ ನಡೆಸಿ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಿದ್ದಾರೆ.
ಚೆನ್ನೈ ನಗರದ ಹಲವೆಡೆ ನೀರಿನ ಪ್ರಮಾಣ ಇಳಿಮುಖವಾಗಿದ್ದರೂ ನಗರ ಹೊರವಲಯದ ಪ್ರದೇಶಗಳಲ್ಲಿ ಪ್ರವಾಹ ಎಂದಿನಂತೆ ಮುಂದುವರೆದಿದೆ. ಪರಿಹಾರ ಕಾರ್ಯ ಭರದಿಂದ ಸಾಗಿದೆ. ಕುಡಿಯುವ ನೀರು ಮತ್ತು ಹಾಲು ಸರಬರಾಜು ಮಾಡಲು 14 ಪ್ರತ್ಯೇಕ ಹಾಲಿನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಹಲವೆಡೆ ಸಾರಿಗೆ ಬಸ್‌ಗಳು ರಸ್ತೆಗಿಳಿದಿವೆ. ಕಳೆದ ಒಂದು ವಾರದಿಂದ ಕಗ್ಗತ್ತಲಾಗಿದ್ದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಪುನರಾರಂಭವಾಗಿದೆ. ಪೆಟ್ರೋಲ್, ಡೀಸೆಲ್ ಪೂರೈಕೆಗೆ ಸರ್ಕಾರದಿಂದ ವ್ಯವಸ್ಥೆ ಕಲ್ಪಿಸಲಾಗಿದೆ. ಡಿ.6 ರಿಂದ ಬ್ಯಾಂಕ್‌ಗಳನ್ನು ಪುನರಾರಂಭ ಮಾಡಲು ನಿರ್ಧರಿಸಲಾಗಿದೆ.  ಈ ನಡುವೆ ಮತ್ತೆ ಮಳೆ ಆರಂಭವಾಗಿದ್ದು, ಇಲ್ಲಿನ ನಿವಾಸಿಗಳಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

Write A Comment