ಭೋಪಾಲ್: ಗೋವಿನ ಮೂತ್ರದಿಂದ ಮನೆ ಒರೆಸುವುದು, ಅದರ ಸಗಣಿಯಿಂದ ಮನೆಯಂಗಳವನ್ನು ಸಾರಿಸುವುದು, ಸಗಣಿಯ ಉಂಡೆಯಿಂದ ಮೂರ್ತಿಯನ್ನು ನಿರ್ಮಿಸುವುದನ್ನು ನೀವು ಕೇಳಿರಬಹುದು. ಆದರೆ ಮಧ್ಯಪ್ರದೇಶದ ಗ್ರಾಮದಲ್ಲಿ ಪುಟ್ಟ ಮಕ್ಕಳನ್ನು ಸಗಣಿಯಲ್ಲಿ ಮುಳುಗೇಳಿಸುತ್ತಾರೆ. ವಿಚಿತ್ರ ಎನಿಸಿದರೂ ಇದು ಸತ್ಯ.
ಮಧ್ಯ ಪ್ರದೇಶದ ಬೇತುಲ್ ಎಂಬ ಗ್ರಾಮದಲ್ಲಿ ಈ ವಿಶಿಷ್ಟ ಆಚರಣೆಯನ್ನು ಮಾಡಲಾಗುತ್ತದೆ. ಪ್ರತಿ ವರ್ಷ ದೀಪಾವಳಿಯ ಮಾರನೇ ದಿನ ಊರಿನ ಜನರು ಹಸುವಿನ ಸಗಣಿಯನ್ನು ಸಂಗ್ರಹಿಸಿ ಅದನ್ನು ಒಂದೆಡೆ ಗುಡ್ಡೆ ಹಾಕುತ್ತಾರೆ. ಅದಕ್ಕೆ ಪೂಜೆ ಸಲ್ಲಿಸಿದ ನಂತರ ಎಲ್ಲರೂ ತಮ್ಮ ಮಕ್ಕಳನ್ನು ಸಗಣಿಯಲ್ಲಿ ಮುಳುಗಿಸುತ್ತಾರೆ. ಈ ಆಚರಣೆ ಬೆಳಗಿನಿಂದ ಸಂಜೆಯವೆರೆಗೆ ನಡೆಯುತ್ತದೆ. ಹಸುಗೂಸಿನಿಂದ ಹಿಡಿದು ಬಾಲಕರವರೆಗೆ ಊರಿನ ಪ್ರತಿಯೊಂದು ಮಗುವನ್ನೂ ಸಗಣಿಯಲ್ಲಿ ಮುಳುಗಿಸಲಾಗುತ್ತದೆ.
ಸಗಣಿಯಲ್ಲಿರುವ ಔಷಧೀಯ ಗುಣಗಳು ಮಕ್ಕಳನ್ನು ಖಾಯಿಲೆಗಳಿಂದ ದೂರವಿಡುತ್ತದೆ ಹೀಗಾಗಿ ನಾವು ಈ ಆಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡಿನ ಹಲವೆಡೆ ಬಲಿಪಾಡ್ಯಮಿಯ ದಿನ ಸಗಣಿಯನ್ನು ಎರಚಾಡುವ ವಿಶಿಷ್ಟ ಆಚರಣೆ ಪ್ರತಿ ವರ್ಷ ನಡೆಯುತ್ತದೆ.
