ಬೆಂಗಳೂರು, ಡಿ.3-ದೇಶದೆಲ್ಲೆಡೆ ಅಪಘಾತ ಗಳು ಮಿತಿ ಮೀರುತ್ತಿದ್ದು, ಅಪಘಾತವಾದ ಕೂಡಲೇ ಸಹಾಯ ಸಿಗದೆ ಎಷ್ಟೋ ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವಘಡ ಸಂಭವಿಸಿದ ಕೂಡಲೇ ಸಂಬಂಧಿಕರಿಗೆ ವಿಷಯ ತಿಳಿಸುವಂತಹ ನೂತನ ಆಪ್‌ವೊಂದನ್ನು ಐ ಟ್ರೇನ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಶೋಧನೆ ಮಾಡಿದೆ. ಪತ್ರಿಕಾಗೋಷ್ಠಿಯಲ್ಲಿ ಕಂಪೆನಿಯ ಮುಖ್ಯಸ್ಥ ಮಲ್ಲೇಶ್‌ರೆಡ್ಡಿ ಮಾತನಾಡಿ, ದೇಶದಲ್ಲಿ ಪ್ರತಿವರ್ಷ ಒಂದೂವರೆ ಲಕ್ಷ ಅಪಘಾತಗಳು ಸಂಭವಿಸುತ್ತವೆ. ಪ್ರತಿದಿನ 400ಕ್ಕೂ ಹೆಚ್ಚು ಮಂದಿ ಮೃತಪಡುತ್ತಾರೆ. ಎಷ್ಟೋ ವೇಳೆ ಅಪಘಾತವಾದ ಕೂಡಲೇ ಯಾರೂ ಸ್ಪಂದಿಸದ ಕಾರಣ ಸಾವು-ನೋವು ಹೆಚ್ಚಾಗುತ್ತದೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ನಮ್ಮ ಕಂಪೆನಿ ದೇಶೀಯ ತಂತ್ರಜ್ಞಾನ ಬಳಸಿಕೊಂಡು ಹೊಸ ಆಪ್ ಸಂಶೋಧನೆ ಮಾಡಿದೆ. ಈ ಆಪ್‌ಗೆ ಮೈ ಸ್ಮಾರ್ಟ್ ಗಾಡಿ ಎಂದು ಹೆಸರಿಸಲಾಗಿದ್ದು, ಇದನ್ನು ಅಳವಡಿಸಿಕೊಂಡರೆ ಅಂಥವರು ಅಪಘಾತ ಅಥವಾ ತೊಂದರೆಗೊಳಗಾದರೆ ತಕ್ಷಣ ಅವರ ಸಂಬಂಧಿಕರಿಗೆ ಮೊಬೈಲ್ ಮೂಲಕ ಮೆಸೇಜ್ ಹೋಗುತ್ತದೆ ಎಂದು ಹೇಳಿದರು.ಯಾರು ಎಲ್ಲೇ ಅಪಘಾತಕ್ಕೊಳಗಾದರೂ ಅಂಥವರ ಬಗ್ಗೆ ಮೆಸೇಜ್ ಸಿಗಲಿದೆ.
ಮೈಸ್ಮಾರ್ಟ್ ಗಾಡಿ ಆಪ್ ಅಳವಡಿಸಿಕೊಂಡು ಅಟೋಮ್ಯಾಟಿಕ್ ಟ್ರಾಷ್ ಡಿಟೆಕ್ಟರ್ ಸಾಧನ ಅಳವಡಿಸಿಕೊಂಡು ದೂರವಾಣಿ ಸಂಖ್ಯೆಯನ್ನು ನೋಂದಣಿ ಮಾಡಿಸಿ ಸಂಬಂಧಿಕರ ಸಂಖ್ಯೆಗಳನ್ನು ನೀಡಬೇಕು. ಆಗ ನೋಂದಣಿ ಮಾಡಿಸಿದ ವ್ಯಕ್ತಿ ಅಪಘಾತಕ್ಕೊಳಗಾದರೆ ಅಥವಾ ತೊಂದರೆಗೆ ಸಿಲುಕಿದರೆ ತಕ್ಷಣ ಅವರ ಸಂಬಂಧಿಕರಿಗೆ ಮೆಸೇಜ್ ತಲುಪುತ್ತದೆ. ಇದರಿಂದ ರಕ್ಷಣೆ ಅಥವಾ ಪರಿಹಾರದಂತಹ ಕಾರ್ಯ ಸಿಗಲು ಸುಲಭವಾಗುತ್ತದೆ ಎಂದು ವಿವರಿಸಿದರು.