ಮುಂಬೈ, ಡಿ.1: ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯಿಂದ ಕುಟುಂಬ ಸಮೇತ ದೇಶ ತೊರೆಯಲು ಚಿಂತನೆ ನಡೆಸಿರುವುದಾಗಿ ಹೇಳಿಕೆ ನೀಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್ ನಟ ಅಮಿರ್ ಖಾನ್‌ಗೆ ಮತ್ತೋರ್ವ ನಟ ಶಾರುಖ್‌ಖಾನ್ ಬೆಂಬಲ ಸೂಚಿಸಿದ್ದಾರೆ.
ನಮಗೆ ರಾಷ್ಟ್ರ ಭಕ್ತಿ ಇದೆ ಎಂಬುದನ್ನು ಇನ್ನೊಬ್ಬರಿಗೆ ತೋರಿಸಬೇಕಾದ ಅಗತ್ಯವಿಲ್ಲ. ನಾವು ಮಾಡುವ ಉತ್ತಮ ಕೆಲಸಗಳೇ ನಮ್ಮನ್ನು ರಕ್ಷಣೆ ಮಾಡುತ್ತವೆ. ದೇಶಕ್ಕಾಗಿ ಒಳ್ಳೆಯ ಕೆಲಸ ಮಾಡುವುದೇ ರಾಷ್ಟ್ರ ಭಕ್ತಿ ಎಂದು ಶಾರುಖ್ ಖಾನ್ ತಿಳಿಸಿದ್ದಾರೆ.
ನಾನು ದೇಶಕ್ಕೆ ಒಳ್ಳೆಯದನ್ನು ಮಾಡಿದರೆ ದೇಶ ನನಗೆ ಒಳ್ಳೆಯದನ್ನೇ ಮಾಡುತ್ತದೆ. ರಾಷ್ಟ್ರಭಕ್ತಿಯನ್ನು ಎದೆ ಬಗೆದು ತೋರಿಸಲು ಸಾಧ್ಯವಿಲ್ಲ. ನಾನು ಭ್ರಷ್ಟನಾದರೆ ಜನತೆ ನನ್ನನ್ನು ತಿರಸ್ಕಾರ ಮಾಡುತ್ತಾರೆ. ಯಾವ ತಪ್ಪು ಮಾಡದಿದ್ದಾಗ ಏಕೆ ಹೆದರಬೇಕೆಂದು ಟ್ವಿಟರ್‌ನಲ್ಲಿ ಶಾರುಖ್ ಖಾನ್ ಪ್ರಶ್ನಿಸಿದ್ದಾರೆ.
ಅಮಿರ್‌ಖಾನ್ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಅವರು ಹೇಳಿರುವುದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇನೆ. ದೇಶ ತೊರೆಯುವುದಾಗಿ ಅವರು ಎಲ್ಲಿಯೂ ಹೇಳಿಲ್ಲ. ಈಗ ಎಲ್ಲವನ್ನೂ ಮೂಲಭೂತ ಕಲ್ಪನೆಯಲ್ಲೇ ನೋಡಲಾಗುತ್ತದೆ. ಯಾರಾದರೂ ತಪ್ಪಾಗಿ ಮಾಡಿದರೆ ದೇಶ ವಿರೋಧಿ ಎಂಬ ಹಣೆಪಟ್ಟಿಯನ್ನು ಕಟ್ಟಲಾಗುತ್ತದೆ. ಕಳೆದ 25 ವರ್ಷಗಳಿಂದ ಇಂತಹ ಅಹಿತಕರ ಘಟನೆಗಳು ನಡೆಯುತ್ತಲೇ ಇವೆ. ಮೂಲಭೂತ ವಾದದಿಂದ ಹೊರ ಬಂದಾಗ ಮಾತ್ರ ದೇಶದಲ್ಲಿ ಉಂಟಾಗುತ್ತದೆ ಎಂದು ಹೇಳಿದ್ದಾರೆ.
ಈಗಾಗಲೇ ಅಮಿರ್‌ಖಾನ್ ದೇಶ ತೊರೆಯುವುದಾಗಿ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ವಿವಾದ ಮುಗಿದಿರುವುದರಿಂದ ಇನ್ನಷ್ಟು ಮುಂದುವರೆಸುವ ಅಗತ್ಯವಿಲ್ಲ ಎಂದು ಶಾರುಖ್ ಖಾನ್ ವಿವಾದಕ್ಕೆ ಅಂತ್ಯ ಹಾಡಲು ಬಯಸಿದ್ದಾರೆ.
