ಫ್ಲೋರೆನ್ಸ್: ಇತ್ತ ಕೇರಳದಲ್ಲಿ ತಂದೆಯೊಬ್ಬ ರು.55 ಕೋಟಿ ವೆಚ್ಚ ಮಾಡಿ ಪುತ್ರಿಯ ವಿವಾಹ ಮಾಡಿದ್ದರೆ, ಅತ್ತ ಇಟಲಿಯ ಫ್ಲೋರೆನ್ಸ್ನಲ್ಲಿ ಭಾರತದ ಕೋಟ್ಯಧಿಪತಿ ಯೋಗೇಶ್ ಮೆಹ್ತಾ ಅವರು ತಮ್ಮ ಪುತ್ರ ರೋಹನ್ ಮೆಹ್ತಾರ ಮದುವೆಗೆಂದು ಬರೋಬ್ಬರಿ ರು.140 ಕೋಟಿ ಖರ್ಚು ಮಾಡಿದ್ದಾರೆ.
ದುಬೈನ ಪೆಟ್ರೋಕೆಮ್ ಸಾಮ್ರಾಜ್ಯದ ಸ್ಥಾಪಕರಾಗಿರುವ ಯೋಗೇಶ್ ಮೆಹ್ತಾ ಅವರು ಫ್ಲೋರೆನ್ಸ್ ನಲ್ಲಿ ತಮ್ಮ ಏಕೈಕ ಪುತ್ರ ರೋಹನ್ ಜತೆಗೆ ರೋಶನಿಯ ಅದ್ಧೂರಿ ವಿವಾಹ ಸಮಾರಂಭ ಏರ್ಪಡಿಸಿದ್ದಾರೆ. ವಿಶ್ವಾದ್ಯಂತಹ ಖ್ಯಾತನಾಮರು ಸೇರಿದಂತೆ 500 ಮಂದಿ ಅತಿಥಿಗಳನ್ನು ಈ ವೈಭವೋ ಪೇತ ಮದುವೆಗೆ ಆಹ್ವಾನಿಸಲಾಗಿದೆ.
ಆಲ್ ಸೈಂಟ್ಸ್ ಸ್ಕ್ವೇರ್ ನಲ್ಲಿ ವಿವಾಹ ನಡೆದಿದೆ. ಈ ಮದುವೆಗೆಂದು ಮೆಹ್ತಾ ಅವರು ರು.140.80 ಕೋಟಿ (14 ದಶಲಕ್ಷ ಪೌಂಡ್) ವೆಚ್ಚ ಮಾಡಿದ್ದಾರೆ. ಮೆಹ್ತಾ ಅವರು ಸುಮಾರು 623 ದಶಲಕ್ಷ ಡಾಲರ್ (ರು.4166 ಕೋಟಿ) ಆಸ್ತಿಯ ಒಡೆಯ.
ತಮ್ಮ 29ನೇ ವಯಸ್ಸಿನಲ್ಲಿ ಭಾರತದಿಂದ ಮಧ್ಯಪ್ರಾಚ್ಯಕ್ಕೆ ತೆರಳಿದ ಅವರು, 1995ರಲ್ಲಿ ಅಲ್ಲಿ ಪೆಟ್ರೋಕೆಮ್ ಕಂಪನಿ ಸ್ಥಾಪಿಸಿದರು. ಇದು ಮಧ್ಯಪ್ರಾಚ್ಯದಲ್ಲೇ ಅತಿದೊಡ್ಡ ಸ್ವತಂತ್ರ ಪೆಟ್ರೋಕೆಮಿಕಲ್ ವಿತರಕ ಕಂಪನಿಯಾಗಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.