ನವದೆಹಲಿ: ಕಲ್ಲಿದ್ದಲು, 2ಜಿ ಸ್ಪೆಕ್ಟ್ರಂ ಹಗರಣವನ್ನು ಕಂಡ ದೇಶಕ್ಕೆ ಈಗ ಮತ್ತೊಂದು ಹಗರಣದ ಆಘಾತ. 2ಜಿ, ಕಲ್ಲಿದ್ದಲಿಗೆ ಸಮನಾದ ಅಕ್ಕಿ ಹಗರಣವೊಂದರ ಬಗ್ಗೆ ಮಹಾಲೇಖಪಾಲ (ಸಿಎಜಿ) ವರದಿಯಲ್ಲಿ ಬಹಿರಂಗಪಡಿಸಲಾಗಿದೆ.
ದೇಶಾದ್ಯಂತ ಇರುವ ಅಕ್ಕಿ ಗಿರಣಿ ಮಾಲೀಕರು ಪಡಿತರ ವ್ಯವಸ್ಥೆಯ ಅಕ್ಕಿಯ ಸಂಸ್ಕರಣೆಯ ಬಳಿಕ ಉಳಿದ ಬತ್ತದ ಉಪ ಉತ್ಪನ್ನಗಳನ್ನು ಮಾರಾಟ ಮಾಡಿ ಕೋಟ್ಯಂತರ ರುಪಾಯಿ ಸಂಗ್ರಹಿಸುತ್ತಿರುವ ವಿವರ ಹೊರಬಿದ್ದಿದೆ ಎಂದು `ದಿ ವೈರ್’ ವರದಿ ಮಾಡಿದೆ.
ಅದರಂತೆ, ಈ ಹಗರಣದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ವರ್ಷಕ್ಕೆ ರು.10 ಸಾವಿರ ಕೋಟಿ ನಷ್ಟವಾಗುತ್ತಿದೆ. ಮಿಲ್ಲರ್ಗಳಲ್ಲಿ ಬಹುತೇಕ ಮಂದಿ ರಾಜಕೀಯ ವ್ಯಕ್ತಿಗಳು ಅಥವಾ ರಾಜಕೀಯ ಸಂಪರ್ಕ ಹೊಂದಿರುವವರಾಗಿದ್ದು, ಇದು 10 ವರ್ಷಗಳಿಗಿಂತಲೂ ಹೆಚ್ಚು ಕಾಲ ನಡೆಯುತ್ತಿರುವ ಹಗರಣವಾಗಿದೆ. ಹೀಗಾಗಿ ಈವರೆಗೆ ದೇಶಕ್ಕೆ ರು.1 ಲಕ್ಷ ಕೋಟಿಗೂ ಅಧಿಕ ನಷ್ಟವಾಗಿದೆ. ಈ ಅಕ್ಕಿ ಹಗರಣದ ಮಾಹಿತಿಯನ್ನು ಒಳಗೊಂಡ ಸಿಎಜಿ ವರದಿಯು ಇದೇ ಅಧಿವೇಶನದಲ್ಲಿ ಮಂಡನೆಯಾಗಲಿದೆ.
ಉಪ-ಉತ್ಪನ್ನಗಳೆಂದರೇನು?: ಪಡಿತರ ವ್ಯವಸ್ಥೆ ಯಲ್ಲಿ ವಿತರಿಸುವ ಬತ್ತದ ಸಂಸ್ಕರಣೆಯನ್ನು ಅಕ್ಕಿ ಗಿರಣಿಗಳು ಮಾಡುತ್ತವೆ. ಈ ಪ್ರಕ್ರಿಯೆಯಲ್ಲಿ ಉಳಿ ಯುವ ಬತ್ತದ ತವುಡು, ಹೊಟ್ಟು, ಬ್ರೋಕನ್ ರೈಸ್ (ಒಡಕಲು ಅಕ್ಕಿ) ಮತ್ತಿತರವುಗಳು ಉಪ-ಉತ್ಪನ್ನಗಳಾಗಿವೆ.
ಸಂಸ್ಕರಿಸಿದ ಅಕ್ಕಿಯನ್ನು ಮಾತ್ರ ವಾಪಸ್ ನೀಡುವ ಗಿರಣಿ ಮಾಲೀಕರು, ಉಪ-ಉತ್ಪನ್ನಗಳನ್ನು ತಾವೇ ಮಾರಾಟ ಮಾಡಿ ಕೋಟಿಗಟ್ಟಲೆ ಸಂಪಾದಿಸುತ್ತಾರೆ. ಈ ಉತ್ಪನ್ನಗಳ ಬಗ್ಗೆ ಸರ್ಕಾರ ತೋರಿರುವ ನಿರ್ಲಕ್ಷ್ಯದಿಂದ ದೇಶ ಸಾವಿರಾರು ಕೋಟಿ ನಷ್ಟ ಅನುಭವಿಸಿದೆ. ಒಡಿಶಾ ಮೂಲದ ಮಾಹಿತಿದಾರ ಗೌರಿಶಂಕರ್ ಜೈನ್ ಎಂಬವರು 5 ವರ್ಷ ನಡೆಸಿದ ಮಾಹಿತಿ ಸಂಗ್ರಹದಿಂದ ಹಗರಣ ಬೆಳಕಿಗೆ ಬಂದಿದೆ.
ಸಿಎಜಿ ವರದಿಯಲ್ಲೇನಿದೆ?
-ಬಹುಕೋಟಿ ರುಪಾಯಿಯ ಅಕ್ಕಿ ಹಗರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದೋಷಪೂರಿತ ನೀತಿಗಳೇ ಕಾರಣ
-ಬತ್ತದ ಉಪ ಉತ್ಪನ್ನಗಳ ಮೇಲಿನ ಸಂಪೂರ್ಣ ಹಕ್ಕನ್ನು ಗಿರಣಿ ಮಾಲೀಕರಿಗೆ ಒದಗಿಸಿರುವುದು ಸರ್ಕಾರಗಳು ಮಾಡಿದ ತಪ್ಪು
-ಸರ್ಕಾರದ ಸ್ವತ್ತಾಗಬೇಕಿದ್ದ ಬತ್ತದ ಉಪ ಉತ್ಪನ್ನಗಳನ್ನು ಯಾವುದೇ ಪರಿಹಾರ ಮೊತ್ತವಿಲ್ಲದೇ ಸರ್ಕಾರಗಳು ಗಿರಣಿ ಮಾಲೀಕರಿಗೆ ಒಪ್ಪಿಸಿದ್ದೇಕೆ?
-ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ಸಿಂಗ್ ಹಾಗೂ ನರೇಂದ್ರ ಮೋದಿ ಸರ್ಕಾರಗಳ ಮಿಲ್ಲಿಂಗ್ ನೀತಿಯಿಂದಾಗಿ ದೇಶವು ಭಾರಿ ಮೊತ್ತದ ನಷ್ಟ ಅನುಭವಿಸಬೇಕಾಗಿದೆ
