ಮಂಗಳೂರು,ನ.26 : ವಿಧಾನ ಸಭಾ ಚಳಿಗಾಲದ ಅಧಿವೇಶನ ಮತ್ತು ದಲಿತರ ಸಮಗ್ರ ಮೂಲಭೂತ ಹಕ್ಕುಗಳ ಜಾರಿಗೆ ಒತ್ತಾಯಿಸಿ ರಾಜ್ಯಾದಂತ ಏಕಕಾಲದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹವನ್ನು ನಡೆಸಿದರು. .
ಮೀಸಲಾತಿಯ ಇತಿಹಾಸವನ್ನು ನೋಡಿದಾಗ ಕಾಕಾ ಕಾಲೆಲ್ಕರ್ ವರದಿ, ಮಂಡಲ್ ವರದಿ, ಎಲ್.ಜಿ. ಹಾವನೂರು ವರದಿ, ಚಿನ್ನಪ್ಪ ರೆಡ್ಡಿ ವರದಿ, ಇದು ಯಾವುದನ್ನೂ ಕಾನೂನು ಅಭಿಪ್ರಾಯ ಪಡೆಯಲು ಯಾವುದೇ ಸರಕಾರ ಕಳುಹಿಸಿರುವುದನ್ನು ನೋಡಿಲ್ಲ. ಇಂದು ಪರಿಶಿಷ್ಟರೊಳಗಿನ ವರ್ಗೀಕರಣ ವಿಷಯದಲ್ಲಿ ತಾರತಮ್ಯ ಮಾಡಲಾಗುತ್ತಿದ್ದು, ಇದು ರಾಜಕೀಯ ಲಾಭಕ್ಕಾಗಿ ಪರಿಶಿಷ್ಟರನ್ನು ಒಡೆದು ಆಳುವ ಹುನ್ನಾರವಾಗಿದೆ ಎಂದು ದಲಿತ ಮುಖಂಡ ಶೇಖರ್ ಹೆಜಮಾಡಿ ಹೇಳಿದರು.
ನ್ಯಾಯಾವಾದಿ.ಎ.ಜೆ. ಸದಾಶಿವ ಆಯೋಗದಲ್ಲಿ ನೀಡಿರುವ ವರದಿಯಲ್ಲಿ ಸತ್ಯಾಂಶ ವಿದೆ. ಈ ವರದಿಯನ್ನು ರಾಜ್ಯ ಸರಕಾರವು ಅಂಗೀಕರಿಸಿ 2015ರ ಚಳಿಗಾಲದ ಅಧಿವೇಶನದಲ್ಲಿ ವರದಿ ಮಂಡಿಸಿ ಕೇಂದ್ರ ಸರಕಾರದ ಒಪ್ಪಿಗೆ ಪಡೆದುಕೊಳ್ಳುವಂತೆ ಒತ್ತಾಯಿಸಿದ ಅವರು, ಒಂದು ವೇಳೆ ಈ ಬೇಡಿಕೆಯು ಈಡೇರದಿದ್ದಲ್ಲಿ ಚಳಿಗಾಲದ ಅಧಿವೇಶನದುದ್ದಕ್ಕೂ ಉಗ್ರ ಪ್ರತಿಭಟನೆಯನ್ನು ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.
ದಲಿತ ಮುಖಂಡರಾದ ಎಂ.ವಿ. ಪದ್ಮನಾಭ, ಸುಂದರ್ ಉಳ್ಳಾಲ್, ಆರ್.ಟಿ. ಅಮೀನ್, ಆನಂದ್ ಪಾಂಗಳ್, ಶೇಖರ್ ಚಿಲಿಂಬಿ, ಲೋಕೇಶ್ ಚಿತ್ರಾಪು, ಸುರೇಶ್ ಕೆರೆಕಾಡು ಮತ್ತಿತರರು ಉಪಸ್ಥಿತರಿದ್ದರು.

