ಬೆಂಗಳೂರು, ನ.20: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಬಿಡುಗಡೆಯಾಗಿದ್ದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಶುಕ್ರವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರಘುನಾಥ ರಾವ್ ಮಲ್ಕಾಪೂರೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ಬಿಡುಗಡೆಯಾಗಿರುವ ಹಣದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಬೇಕಾಗಿತ್ತು. ಆದರೆ, ಅಧಿಕಾರಿಗಳು ಈ ಮಾಹಿತಿ ಯನ್ನು ಯಾರ ಗಮನಕ್ಕೂ ತರದೆ, 3 ಸಾವಿರ ಕೋಟಿ ರೂ.ವನ್ನು ವಿವಿಧ ಬ್ಯಾಂಕ್‌ಗಳಲ್ಲಿ ಜಮಾ ಮಾಡಿ ಇಲಾಖೆಗೆ ವಂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಗ್ರಾಮೀಣಾಭಿವೃದ್ಧಿ ಸಚಿವರು ಸದನ ಸಮಿತಿಯೊಂದನ್ನು ರಚಿಸಿ, ಈ ಅವ್ಯವಹಾ ರದಲ್ಲಿರುವವರ ವಿರುದ್ಧ ಕ್ರಮ ಜರಗಿಸಿ ಎಂದು ಒತ್ತಾಯಿಸಿದರು. ಆಗ ಎಚ್.ಕೆ.ಪಾಟೀಲ್‌ರು ಈ ಸಂಬಂಧ ಈಗಾಗಲೇ ಶಿವರುದ್ರಪ್ಪ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದು, ಆ ಸಮಿತಿ ವರದಿಯನ್ನು ನೀಡಿದ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಅಲ್ಲದೆ, ಬ್ಯಾಂಕ್ ಅಧಿಕಾರಿಗಳಿಗೆ ಪತ್ರವನ್ನು ಬರೆದು, ಖಾತೆಗಳು ಯಾರ ಹೆಸರಿನಲ್ಲಿವೆ ಎಂಬುದರ ಬಗ್ಗೆ ವಿವರಣೆಯನ್ನೂ ನೀಡುವಂತೆ ಕೇಳಿದ್ದೇವೆ ಎಂದರು.