ರಾಷ್ಟ್ರೀಯ

ಬುರ್ಖಾ ಧರಿಸಿ ಪಾಲಿಕೆಗೆ ನುಗ್ಗಿ ಚಿತ್ತೂರ್ ಮೇಯರ್ ಹತ್ಯೆ : ಹಂತಕರು ಬೆಂಗಳೂರಿನವರು..?

Pinterest LinkedIn Tumblr

meyarಚಿತ್ತೂರು, ನ.17- ಹಾಡಹಗಲೇ ಮಹಾನಗರ ಪಾಲಿಕೆ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು, ಮೇಯರ್‌ರನ್ನೇ ಬರ್ಭರವಾಗಿ ಹತ್ಯೆ ಮಾಡಿರುವ ಭೀಕರ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಇಂದು ಬೆಳಗ್ಗೆ ನಡೆದಿದೆ. ಪಾಲಿಕೆ ಮೇಯರ್ ಕಠಾರಿ ಅನುರಾಧಾ ಹಾಗೂ ಅವರ ಪತಿ ಮೋಹನ್ ಮೇಲೆ ಬುರ್ಖಾ ಧರಿಸಿದ್ದ ಮೂವರು ಈ ದಾಳಿ ಮಾಡಿದ್ದಾರೆ. ಇದ್ದಕ್ಕಿದ್ದಂತೆ ಕಚೇರಿಗೆ ನುಗ್ಗಿದ ಮೂವರು, ಮೇಯರ್ ಹಾಗೂ ಅವರ ಪತಿಯ ಮೇಲೆ ಮೊದಲು ಚಾಕುವಿನಿಂದ ಹಲ್ಲೆ ನಡೆಸಿ ನಂತರ ಗುಂಡು ಹಾರಿಸಿದ್ದಾರೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಮೇಯರ್ ಹಾಗೂ ಅವರ ಪತಿಯನ್ನು ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ಮೇಯರ್ ಕಠಾರಿ ಅನುರಾಧಾ ಕೊನೆಯುಸಿರೆಳೆದಿದ್ದಾರೆ. ಪತಿ ಹೋಹನ್ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಕೀಯ ವೈಷಮ್ಯದಿಂದ ಈ ಹತ್ಯೆ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಹಂತಕರು ಬೆಂಗಳೂರಿನವರು ಎಂದು ತಿಳಿದುಬಂದಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ  ಹಾಕಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದ ದಿಗ್ಭ್ರಮೆಗೊಂಡ ಪಾಲಿಕೆ ಸದಸ್ಯರು, ಸಿಬ್ಬಂದಿ ಗಾಯಾಳುಗಳನ್ನು ತಮಿಳುನಾಡಿನ ವೆಲ್ಲೂರು ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಬಳಲಿದ್ದ ಮೇಯರ್ ಅನುರಾಧಾ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಪತಿ ಮೋಹನ್ ಪತಿಸ್ಥಿತಿ ಚಿಂತಾಜನಕವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಂತಕರ ಪತ್ತೆಗೆ ಕಾರ್ಯ ಪ್ರವೃತ್ತರಾಗಿದ್ದಾರೆ.

ಮೇಯರ್ ಅನುರಾಧಾ ಹಾಗೂ ಅವರ ಪತಿ ಮೋಹನ್ ಅವರು ಆಡಳಿತಾರೂಢ ತೆಲಗುದೇಶಂ ಪಕ್ಷಕ್ಕೆ ಸೇರಿದವರಾಗಿದ್ದು, ಇವರ ರಾಜಕೀಯ ವಿರೋಧಿಗಳು ಈ ಕೃತ್ಯದ ಹಿಂದೆ ಇರಬಹುದು ಎಂದು ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ ಮೇಯರ್ ಪತಿ ಮೋಹನ್ ಅವರು ಈ ಹಿಂದೆ ತೆಲಗುದೇಶಂ ಪಕ್ಷದ ನಾಯಕ ಮತ್ತು ಚಿತ್ತೂರು ಮಾಜಿ ಎಂಎಲ್‌ಎ ಸಿ.ಕೆ.ಬಾಬು ಅವರ ವಿರುದ್ಧದ ಕೊಲೆ ಪ್ರಯತ್ನದ ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ. ಇದರ ಜೊತೆ ಮೇಯರ್ ಅನುರಾಧಾ ಹಾಗೂ ಅವರ ಕುಟುಂಬದವರ ನಡುವೆ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ವೈಮನಸ್ಯವಿದ್ದು, ಇದೂ ಕೂಡ ಈ ಘಟನೆಗೆ ಒಂದು ಕಾರಣವಾಗಿರಬಹುದು ಎಂದು ಹೇಳಲಾಗಿದೆ. ಘಟನೆಯ ಬೆನ್ನಲ್ಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Write A Comment