ಬಂಟ್ವಾಳ, ನ.16: ಒಂದೆಡೆ ಮುಂಜಾನೆಯ ಹಕ್ಕಿಗಳ ಇಂಪಾದ ಚಿಲಿಪಿಲಿಯ ಕಲರವ… ಮಂಜು ಮುಸುಕಿದ ತಂಗಾಳಿಯೊಂದಿಗೆ ಚುಮು ಚುಮು ಚಳಿ… ಇನ್ನೊಂದೆಡೆ ಜೀವನದಿ ನೇತ್ರಾವತಿ ವೈಯಾರದಿಂದ ಹರಿಯುವ ಝುಳು ಝುಳು ನಿನಾದ… ಮಗದೊಂದೆಡೆ ಭಜನೆಯ ಗಾನ ಲಹರಿ… ಇವುಗಳ ಮಧ್ಯೆ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವರ ವಿಶ್ವ ರೂಪ ದರ್ಶನ ನೆರದ ಭಕ್ತ ಜನರ ಕಣ್ಮನ ಸೆಳೆಯಿತು.
ಇಂದು ಪ್ರಾತಃ ಕಾಲ ನಾಲ್ಕರ ಬ್ರಾಹ್ಮೀ ಮೂರ್ತದಲ್ಲಿ ಲೋಕಕಲ್ಯಾಣಕ್ಕಾಗಿ ಬಂಟ್ವಾಳ ಶ್ರಿ ತಿರುಮಲ ವೆಂಕಟರಮಣ ಸ್ವಾಮೀ ದೇವಾಲಯದಲ್ಲಿ 14ನೇ ವರ್ಷದ ವಿಶ್ವರೂಪ ದರ್ಶನಕ್ಕೆ ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನೆರೆದ ಸಮಸ್ತ ಭಕ್ತರು ದೇವಳದ ಒಳಾಂಗಣ, ಹೊರಾಂಗಣದಲ್ಲಿ ಜೋಡಿಸಲಾದ ಹಣತೆಯನ್ನು ಏಕಕಾಲದಲ್ಲಿ ಬೆಳಗಿಸಿ ಕೃತಾರ್ಥರಾದರು. ದೇವಳದ ಪ್ರವೇಶದ್ವಾರದಲ್ಲಿ ಸಾಲು ಹಣತೆಯೊಂದಿಗೆ ಪುಷ್ಪಾಲಂಕೃತಗೊಂಡ ಓಂಕಾರ, ಶಿವಲಿಂಗ ಹಣತೆಯಿಂದಲೇ ರಚಿಸಲಾದ ಶಂಕ, ಚಕ್ರ, ಗದಾ, ಪದ್ಮ ನೋಡುಗರ ಕಣ್ಣಿಗೆ ಮುದ ನೀಡಿದವು.
ದೇವಳದ ಒಳಾಂಗಣ, ಶ್ರೀ ದೇವರ ಗರ್ಭ ಗುಡಿ ಹಾಗೂ ಮಲ್ಲಿಗೆ ಪ್ರಿಯ ಶ್ರೀ ತಿರುಮಲ ವೆಂಕಟರಮಣ ದೇವರನ್ನು ಹೂವಿನಿಂದ ವಿಶೇಷಾಲಂಕಾರಗೊಳಿಸಲಾಗಿತ್ತು. ಸಿಡಿಮದ್ದು ಪ್ರದರ್ಶನ ಏರ್ಪಡಿಸಲಾಗಿತ್ತು. ಕಾಕಾಡಾರತಿ, ಜಾಗರ ಪೂಜೆಯ ಬಳಿಕ ಸಮಸ್ತ ಭಜಕರಿಗೂ ಶ್ರೀ ದೇವರ ದರ್ಶನಕ್ಕಾಗಿ ಅವಕಾಶ ಕಲ್ಪಿಸಲಾಯಿತು. ಸಾವಿರಾರು ಹಣತೆಯನ್ನು ದೇವಳದ ಒಳಾಂಗಣ, ಹೊರಾಂಗಣದಲ್ಲಿ ಆಕರ್ಷಕವಾಗಿ ಜೋಡಿಸಲಾಗಿತ್ತು. ಮುಂಜಾನೆಯಿಂದಲೇ ಮಕ್ಕಳು, ವೃದ್ಧರು, ಹೆಂಗಳೆಯರು ಸೇರಿದಂತೆ ಊರ ಪರಊರಿನಿಂದ ಭಗವದ್ಭಕ್ತರು ನೂರಾರು ಸಂಖ್ಯೆಯಲ್ಲಿ 7 ಗಂಟೆಯವರೆಗೂ ಆಗಮಿಸಿ ಶ್ರೀದೇವರ ವಿಶ್ವರೂಪದರ್ಶನ ಪಡೆದರು.
ಇದೇ ವೇಳೆ ಮೈಸೂರಿನ ರಾಜೇಶ್ ಪಡಿಯಾರ್ ಹಾಗೂ ಶ್ರೀರಾಮಾಂಜನೇಯ ಬಾಲ ಭಜನಾ ಮಂಡಳಿಯ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸಹಿತ ಹಲವಾರು ಗಣ್ಯರು ಮುಂಜಾನೆಯೇ ಆಗಮಿಸಿ ದೀಪದ ಬೆಳಕಿನಲ್ಲಿ ದೇವರ ದರ್ಶನ ಪಡೆದರು. ದೇವಳದ ಆಡಳಿತ ಮೊಕ್ತೇಸರ, ಮೊಕ್ತೇಸರರುಗಳು, ಸೇವಾದಾರರು ಮತ್ತಿತರರು ಉಪಸ್ಥಿತರಿದ್ದರು.
