ನಾಗ್ಪುರ್: ಬಿಹಾರ್ ಚುನಾವಣೆಯಲ್ಲಿ ಬಿಜೆಪಿ 53 ಕ್ಷೇತ್ರಗಳಲ್ಲಿ ಜಯಗಳಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಗೆ ಸಲ್ಲಬೇಕು ಎಂದು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.
ಪ್ರಧಾನಿ ಮೋದಿ ಬಿಹಾರ್ ರಾಜ್ಯಕ್ಕೆ ಘೋಷಿಸಿದ ವಿಶೇಷ ಪ್ಯಾಕೇಜ್ ಚುನಾವಣೆ ಗಿಮಿಕ್ಕು ಎನ್ನುವುದನ್ನು ಬಿಹಾರ್ ಮತದಾರರು ಅರ್ಥೈಸಿಕೊಂಡಿದ್ದಾರೆ ಎಂದರು.
ಬಿಹಾರ್ನಲ್ಲಿ 53 ಸ್ಥಾನ ಗೆಲ್ಲಲು ಪ್ರಧಾನಿ ಮೋದಿ ಪ್ರಭಾವವೇ ಕಾರಣ. ಇದರಲ್ಲಿ ಯಾವುದೇ ರೀತಿಯ ಅನುಮಾನ ಬೇಡ ಎಂದು ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿಯವರ ಆಕ್ರಮಣಕಾರಿ ಭಾಷಣಗಳಿಂದಾಗಿ ಬಿಜೆಪಿ 53 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ ಎಂದು ಸಿನ್ಹಾ ಲೇವಡಿ ಮಾಡಿದ್ದಾರೆ.
ಬಿಹಾರ್ನಲ್ಲಿರುವ ರಾಜಕೀಯ ನಾಯಕರು ಪ್ರಧಾನಿ ಮೋದಿಯವರನ್ನು ಕತ್ತಲಲ್ಲಿಟ್ಟಿದ್ದಾರೆ. ಪಾಟ್ನಾ ಲೋಕಸಭೆ ಕ್ಷೇತ್ರದ ಜನತೆ ಲಕ್ಷ ಲಕ್ಷ ಮತಗಳ ಅಂತರದಿಂದ ನನ್ನನ್ನು ಆರಿಸಿ ಕಳುಹಿಸಿದ್ದಾರೆ. ಆದರೆ, ನನ್ನನ್ನು ಚುನಾವಣೆ ಪ್ರಚಾರದಿಂದ ದೂರವಿಡಲಾಯಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಮತದಾರರು ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿದರು ಎಂದು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ವಾಗ್ದಾಳಿ ನಡೆಸಿದ್ದಾರೆ.
