ಉಡುಪಿ: ಹೇರಿಗೆ ನೋವಿನಲ್ಲಿ 108 ಆಂಬುಲೆನ್ಸ್ ಮೂಲಕ ಸಾಗುತ್ತಿರುವಾಗಲೇ ಆಂಬುಲೆನ್ಸ್ ಒಳಗೆ ಮಹಿಳೆಯೋರ್ವರು ಮಗುವನ್ನು ಹೆತ್ತ ಘಟನೆ ಉಡುಪಿಯ ಬ್ರಹ್ಮಾವರ ಸಮೀಪದ ಎಸ್.ಎಂ.ಎಸ್. ಕಾಲೇಜಿನ ಮುಂಭಾಗದಲ್ಲಿ ನಡೇದಿದೆ.
ಬ್ರಹ್ಮಾವರ ನೀಲಾವರ ಸಮೀಪದ ನಿವಾಸಿ ಸಂಜನಾ (21) 108 ಆಂಬುಲೆನ್ಸ್ ಒಳಗೆ ಗಂಡು ಮಗುವನ್ನು ಹೆತ್ತ ಮಹಿಳೆ.
ಗೋಪಾಲ ಎನ್ನುವವರ ಪತ್ನಿ ಸಂಜನಾ ಅವರಿಗೆ ಶುಕ್ರವಾರ ಬೆಳಿಗ್ಗೆ ಹೇರಿಗೆ ನೋವು ಕಾಣಿಸಿಕೊಂಡಿದ್ದು ಕೂಡಲೇ ಬ್ರಹ್ಮಾವರ 108 ಆಂಬುಲೆನ್ಸಿಗೆ ಕರೆ ಮಾಡಿ ಉಡುಪಿಯ ಹೇರಿಗೆ ಆಸ್ಪತ್ರೆಯತ್ತ ಕರೆದೊಯ್ಯುವ ಮಾರ್ಗಮಧ್ಯೆ ಬ್ರಹ್ಮಾವರ ಎಸ್.ಎಂ,ಎಸ್, ಕಾಲೇಜಿನ ಎದುರು ಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಜನ ಗಂಡು ಮಗುವಿಗೆ ಜನ್ಮನೀಡಿದ್ದಾರೆ.
108 ಒಳಗಿದ್ದ ಪತಿ ಗೋಪಾಲ ಹಾಗೂ ಗೋಪಾಲ ಅವರ ತಾಯಿ ಸಂಜನಾ ಅವರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದರು. ಆಂಬುಲೆನ್ಸ್ ಸ್ಟಾಪ್ ನರ್ಸ್ (ವೈದ್ಯಕೀಯ ಸಿಬ್ಬಂದಿ) ಚಂದ್ರಶೇಖರ್ ಪ್ರಥಮ ಚಿಕಿತ್ಸೆ ನೀಡಿ, ಮಗುವನ್ನು ಸುರಕ್ಷಿತವಾಗಿರಿಸಿ, ಬಾಣಂತಿ ಮಹಿಳೆಗೆ ಬೇಕಾಗಿರುವ ಔಷದೋಪಚಾರ ನೀಡಿದ್ದಾರೆ. 108 ವಾಹನ ಚಾಲಕ ಮಲ್ಲಪ್ಪ ಹಾಗೂ ಸ್ಟಾಪ್ ನರ್ಸ್ ಸಮಯ ಪ್ರಜ್ನೆಯಿಂದ ಮಹಿಳೆ ಹಾಗೂ ಮಗುವನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಿದ್ದು ಇಬ್ಬರು ಆರೋಗ್ಯವಾಗಿದ್ದಾರೆ.