ಕನ್ನಡ ವಾರ್ತೆಗಳು

ದ.ಕ.ಜಿಲ್ಲೆಯಾದ್ಯಂತ ಪ್ರಕ್ಷುಬ್ಧ ಪರಿಸ್ಥಿತಿ : 144 ಸೆಕ್ಷನ್ ಜಾರಿ | ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ | ಪೊಲೀಸರಿಂದ ಹೈಆಲರ್ಟ್

Pinterest LinkedIn Tumblr

Mangaluru_Bund_1

ಮಂಗಳೂರು: ಬಂಟ್ವಾಳ ತಾಲೂಕಿನ ಮಣಿಯಾಲ ಬಳಿಯ ಜಕ್ರಿಬೆಟ್ಟುವಿನಲ್ಲಿ ನಡೆದ ಹರೀಶ್ ಹತ್ಯೆ ಖಂಡಿಸಿ ಬಿಜೆಪಿ ಹಾಗೂ ವಿವಿಧ ಹಿಂದೂ ಸಂಘಟನೆಗಳು ಜಿಲ್ಲಾದ್ಯಂತ ಇಂದು ಬಂದ್‌ಗೆ ಕರೆ ನೀಡಿವೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಠಿಯಿಂದ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಬಿಜೆಪಿ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳು ಈ ಬಂದ್‌ಗೆ ಕರೆ ನೀಡಲಾಗಿದೆ ಎಂದು ತಿಳಿಸಿವೆ.

ನಿಷೇಧಾಜ್ಞೆ ಜಾರಿ : ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ : ಹೈಆಲರ್ಟ್

ಬಂಟ್ವಾಳ ತಾಲೂಕಿನಲ್ಲಿ ನಡೆದ ಹರೀಶ್ ಪೂಜಾರಿ ಹತ್ಯೆಯಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಂದು ನಿಷೇಧಾಜ್ಞೆ (144 ಸೆಕ್ಷನ್) ಜಾರಿಗೊಳಿಸಲಾಗಿದೆ. ಹಾಗೇ ಹಿಂದೂಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದು, ಜಿಲ್ಲಾದ್ಯಂತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಬೂದಿ ಮೂಚ್ಚಿದ ಕೆಂಡದಂತ್ತಿರುವ ಎಲ್ಲಾ ಪ್ರದೇಶಗಳಲ್ಲೂ ಪೊಲೀಸರು ಹೈಆಲರ್ಟ್ ಆಗಿದ್ದಾರೆ.

ಇಂದು ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಎಲ್ಲ ಸಭೆ-ಸಮಾರಂಭಗಳನ್ನು ರದ್ದುಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ತಿಳಿಸಿದ್ದಾರೆ.

ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಬಗ್ಗೆ ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರ ಜೊತೆ ಮಾತುಕತೆ ನಡೆಸಿದ್ದಾರೆ. ಇಂದು ಜಿಲ್ಲೆಗೆ ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಪಡೆ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

Mangaluru_Bund_2 Mangaluru_Bund_3 Mangaluru_Bund_4 Mangaluru_Bund_5

ಪ್ರತಿಭಟನೆ ರದ್ದು : ಬಂದ್ ಕರೆ

ಟಿಪ್ಪು ಜಯಂತಿ ವಿರೋಧಿಸಿ ಹಾಗೂ ಮಡಿಕೇರಿಯಲ್ಲಿ ಟಿಪ್ಪು ಜಯಂತಿಯ ದಿನ ನಡೆದ ಗಲಭೆ ಸಂದರ್ಭ ವಿ.ಎಚ್.ಮುಖಂಡ ಕುಟ್ಟಪ್ಪ ಎಂಬವರು ಸಾವಿಗೀಡಾದ ಹಿನ್ನೆಲೆಯಲ್ಲಿ ಘಟನೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ಶುಕ್ರವಾರ ಜಿಲ್ಲೆಯಾದ್ಯಂತ ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸುವುದಾಗಿ ಕರೆ ನೀಡಿತ್ತು.

ಆದರೆ ಬಂಟ್ವಾಳ ತಾಲೂಕಿನ ಮಣಿಯಾಲ ಬಳಿಯ ಜಕ್ರಿಬೆಟ್ಟುವಿನಲ್ಲಿ ನಿನ್ನೆ ರಾತ್ರಿ ನಡೆದ ಹರೀಶ್ ಹತ್ಯೆ ಹಿನ್ನೆಲೆಯಲ್ಲಿ ಇಂದು ಹಿಂದೂ ಸಂಘಟನೆಗಳು ಜಿಲ್ಲಾದ್ಯಂತ ಬಂದ್‌ಗೆ ಕರೆ ನೀಡಿತ್ತು. ಹಾಲಿನ ವಾಹನ, ಅಂಬ್ಯುಲೆನ್ಸ್ ಮುಂತಾದ ಅಗತ್ಯ ಸೇವೆಗಳ ವಾಹನಗಳಿಗೆ ಬಂದ್‌ನಿಂದ ರಿಯಾಯಿತಿ ನೀಡಲಾಗಿದೆ.

ತಡ ರಾತ್ರಿ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಜಿಲ್ಲೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಇದರಿಂದ ಈ ಬಗ್ಗೆ ಮಾಹಿತಿ ಇಲ್ಲದೆ ಶುಕ್ರಾವಾರ ಮುಂಜಾನೆ ಮನೆಯಿಂದ ಹೊರಗೆ ಬಂದ ಸಾರ್ವಜನಿಕರು ಪರದಾಡುವಂತಾಯಿತು.

ಜಿಲ್ಲೆಯಾದ್ಯಂತ ಪ್ರಕ್ಷುಬ್ಧ ಪರಿಸ್ಥಿತಿ

ಬಂಟ್ವಾಳ ತಾಲೂಕಿನ ಮಣಿಯಾಲ ಬಳಿಯ ಜಕ್ರಿಬೆಟ್ಟುವಿನಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಯುವಕರಿಬ್ಬರಿಗೆ ಚೂರಿ ಇರಿದಿದ್ದು, ಹರೀಶ್ ಎಂಬಾತ ಮೃತಪಟ್ಟ ಘಟನೆ ನಿನ್ನೆ ನಡೆದಿತ್ತು. ಜೊತೆಗೆ ಮಡಿಕೇರಿ ಗಲಭೆಗೆ ಸಂಬಂಧಿಸಿದಂತೆ ಎಸ್‍ಡಿಪಿಐ ಸಂಘಟನೆ ಬಂಟ್ವಾಳ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆಸಿದ ಪ್ರತಿಭಟನಾ ಸಭೆಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ.

Write A Comment