ಪಾಟ್ನಾ, ನ.12: ಬಿಹಾರದ ಸಂಸದ ಭೋಲಾ ಸಿಂಗ್, ರಾಜ್ಯ ವಿಧಾನ ಸಭೆಯ ಚುನಾವಣೆಯಲ್ಲಿ ಪಕ್ಷದ ದಯನೀಯ ಸೋಲಿಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಶಾ ಈ ಸೋಲಿಗೆ ವಿವರಣೆ ನೀಡಬೇಕು ಅಥವಾ ಹುದ್ದೆಯಿಂದ ಕೆಳಗಿಳಿಯಬೇಕೆಂದು ಅವರು ಆಗ್ರಹಿಸಿದ್ದಾರೆ.
ಎಲ್ಲ ನಿರ್ಧಾರಗಳನ್ನು ಕೈಗೊಂಡ ಉನ್ನತ ನಾಯಕತ್ವವೇ ಸೋಲಿನ ಹೊಣೆ ಹೊರಬೇಕೆಂದು ಬೆಗುಸರಾಯಿಯ ಸಂಸದ ಸಿಂಗ್, ಎನ್‌ಡಿಟಿವಿಗೆ ನೀಡಿರುವ ವಿಶೇಷ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಅವರು ಪಕ್ಷಕ್ಕೆ ಸೋಲಿನ ಕಾರಣವನ್ನು ವಿವರಿಸಬೇಕು. ಅದು ಅಂಗೀಕೃತವಾಗದಿದಲ್ಲಿ ಅವರು ರಾಜೀನಾಮೆ ನೀಡಬೇಕೆಂದು 76ರ ಹರೆಯದ ಬಿಜೆಪಿ ನಾಯಕ ಕಿಡಿಗಾರಿದ್ದಾರೆ.
ಈ ವರ್ಷಾಂತ್ಯದಲ್ಲಿ ಎರಡನೆ ಬಾರಿಗೆ ಬಿಜೆಪಿ ಅಧ್ಯಕ್ಷ ಹುದ್ದೆಗೇರುವ ಹವಣಿಕೆಯಲ್ಲಿ ಶಾ ಇದ್ದಾರೆ.
ಯಾರವನು ಅಮಿತ್ ಶಾ? ತಾವು ತಮ್ಮೆಲ್ಲ ಅಧಿಕಾರವನ್ನು ಅವರಿಗೆ ನೀಡಿದುದರಿಂದಾಗಿ ಶಾ ಹಾಗೂ ಪ್ರಧಾನಿ ಇದ್ದಾರೆಂದು ಅವರು ವಾಗ್ದಾಳಿ ನಡೆಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಪ್ರಧಾನಿ ಹಾಗೂ ಇತರ ಬಿಜೆಪಿ ನಾಯಕರ ವಿರುದ್ಧ ಹರಿ ಹಾಯ್ದ್ದಿದ್ದ ಸಿಂಗ್, ಬಿಹಾರದಲ್ಲಿ ಪ್ರಚಾರದ ವೇಳೆ ಅವರು ಕಂಡು ಕೇಳರಿಯದ ಟೀಕೆಗಳನ್ನು ಮಾಡಿದ್ದಾರೆಂದು ಆರೋಪಿಸಿದ್ದರು.
ಬಿಜೆಪಿಗಿಡೀ ಕ್ಯಾನ್ಸರ್ ಹಬ್ಬಿದೆ. ಅದನ್ನು ಸಂಪೂರ್ಣ ನಿವಾರಿಸಬೇಕು ಎಂದವರು ದನಿಗೂಡಿಸಿದ್ದರು.
ಬಿಹಾರದ ಸೋಲಿಗಾಗಿ ಸಿಂಗ್ ಹಲವು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಆದರೆ, ಚುನಾವಣೆಯ ಹೊಸ್ತಿಲಲ್ಲಿ, ಜಾತಿ ಮೀಸಲಾತಿಯ ಕುರಿತು ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ನೀಡಿದ್ದ ಹೇಳಿಕೆಯನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ.
ಆರೆಸ್ಸೆಸ್ ವರಿಷ್ಠನ ಹೇಳಿಕೆಯನ್ನು ಯಾವುದೇ ದುಷ್ಪರಿಣಾಮವಾಗಿಲ್ಲವೆನ್ನುವುದು ತಪ್ಪು. ಅದು ಬಿಜೆಪಿಯ ಭವಿಷ್ಯಕ್ಕೆ ಆಲಿಕಲ್ಲಿನ ಮಳೆಯಾಯಿತೆಂದು ಸಿಂಗ್ ಅಭಿಪ್ರಾಯಿಸಿದ್ದಾರೆ.
ಪ್ರಧಾನಿಯನ್ನೂ ಬಿಡದ ಅವರು, ಬಿಹಾರ ಚುನಾವಣಾ ಪ್ರಚಾರದಲ್ಲಿ ಅವರು ಸ್ಥಳೀಯ ನಾಯಕನ ಮಟ್ಟಕ್ಕೆ ಇಳಿದರು. ಮೋದಿ, ಲಾಲು ಹಾಗೂ ಅವರ ಪುತ್ರಿಯ ವಿರುದ್ಧ ವಾಗ್ದಾಳಿ ನಡೆಸಿದರು. ನಿತೀಶ್‌ರ ಡಿಎಸ್‌ಎಯ ಬಗ್ಗೆಯೂ ಮಾತನಾಡಿದರು. ಅಂತಹ ಹೇಳಿಕೆಗಳನ್ನು ನೀಡುವ ಅಗತ್ಯ ಪ್ರಧಾನಿಗೇನಿತ್ತು? ಪಾಕಿಸ್ತಾನದ ಕುರಿತ ಅಮಿತ್ ಶಾರ ಟೀಕೆಯೂ ಭಾರೀ ಹಾನಿಯನ್ನುಂಟು ಮಾಡಿತೆಂದು ಭೋಲಾಸಿಂಗ್ ಹೇಳಿದ್ದಾರೆ.
ಸಿಂಗ್‌ರ ಹೇಳಿಕೆಯ ಬಳಿಕ ಎಲ್.ಕೆ.ಅಡ್ವಾಣಿ, ಎಂ.ಎಂ.ಜೋಶಿ ಹಾಗೂ ಅರುನ್ ಶೌರಿ ಸಹಿತ ಹಿರಿಯ ಬಿಜೆಪಿ ನಾಯಕರ ಜಂಟಿ ಹೇಳಿಕೆಯೊಂದು ಹೊರಬಿದ್ದಿದೆ. ಪಕ್ಷವು ಬೆರಳೆಣಿಕೆಯ ಜನರ ಕೈಯಲ್ಲಿ ಬಂದಿಯಾಗಿದೆ. ಅದರ ಏಕಾಭಿಪ್ರಾಯದ ಗುಣ ನಾಶವಾಗಿದೆ ಎಂದು ಅದರಲ್ಲಿ ಹೇಳಲಾಗಿದೆ. ತಾನು ಈ ಹೇಳಿಕೆಯನ್ನು ಸಂಪೂರ್ಣ ಒಪ್ಪುವೆನೆಂದು ಭೋಲಾಸಿಂಗ್ ತಿಳಿಸಿದ್ದಾರೆ.
ರಾಷ್ಟ್ರೀಯ