ಮಂಗಳೂರು, ನ.05: ಎತ್ತಿನಹೊಳೆ ಯೋಜನೆ ವಿರುದ್ಧದ ಒಂದು ಹಂತದ ಹೋರಾಟ ಮುಗಿದಿದ್ದು, ಕರಾವಳಿಗೆ ಮಾರಕವಾದ ಈ ಯೋಜನೆ ನಿಲ್ಲಿಸದಂತೆ ನ.25ರಂದು ಕೇಂದ್ರಕ್ಕೆ ನಿಯೋಗ ಕೊಂಡೊಯ್ಯುವ ಮೂಲಕ ಯೋಜನೆಗೆ ಪರಿಸರ ಅನುಮತಿ ನೀಡದಂತೆ ಮನವಿ ಮಾಡಲಾಗುವುದು ಎಂದು ಸಂಸದ ನಳಿನ್‌ಕುಮಾರ್ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ ಅನುಷ್ಠಾನವಾಗಬೇಕಾದರೆ ಪರಿಸರ ಇಲಾಖೆಯ ಅನುಮತಿಯೂ ಅಗತ್ಯ. ಆದುದರಿಂದ ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್ ಮತ್ತು ಉಮಾಭಾರತಿಯವರನ್ನು ಭೇಟಿಯಾಗಿ ಪರಿಸರ ಅನುಮತಿ ನೀಡದಂತೆ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಕರಾವಳಿಯಲ್ಲಿ 25 ದಿನಗಳಲ್ಲಿ 7 ಕೊಲೆ ನಡೆದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಆದರೆ ಇಲ್ಲಿನ ನಾಲ್ಕು ಮಂದಿ ಸಚಿವರು ವೌನವಹಿಸಿದ್ದಾರೆ ಎಂದು ಟೀಕಿಸಿದರು. ಜೈಲಿನೊಳಗೆ ಆಯುಧದಿಂದ ಕೊಲೆ ನಡೆಯು ತ್ತಿರುವುದು ರಾಜ್ಯದಲ್ಲಿ ಇದೇ ಮೊದಲು. ಇಂತಹ ಭಯಭೀತ ವಾತಾವರಣ ಸೃಷ್ಟಿಯಾಗಿದ್ದರೂ ಗೃಹಸಚಿವರು ಜಿಲ್ಲೆಗೆ ಭೇಟಿ ನೀಡಿ ಸಭೆ ನಡೆಸಿಲ್ಲ. ಯಾವ ಕ್ರಮವನ್ನೂ ಕೈಗೊಂಡಿಲ್ಲ. ರಾಜ್ಯ ಸರಕಾರ ಜನತೆಯನ್ನು ಭಯದಲ್ಲಿರಿಸಿದೆ ಎಂದು ಸಂಸದ ನಳಿನ್ ದೂರಿದರು.
ಕಸ್ತೂರಿ ರಂಗನ್ ವರದಿ ಹಿನ್ನೆಲೆಯಲ್ಲಿ ಆಕ್ಷೇಪಣೆ ಸಲ್ಲಿಸಲು ನ.4 ಕೊನೆಯ ದಿನವಾಗಿದ್ದರೂ ರಾಜ್ಯ ಸರಕಾರ ಯಾವುದೇ ಆಕ್ಷೇಪಣೆ ಸಲ್ಲಿಸದೆ ನಿರ್ಲಕ್ಷ್ಯ ವಹಿಸಿದೆ. ಗ್ರಾಮಗಳಲ್ಲಿ ಸಭೆ ನಡೆಸಿಲ್ಲ. ಯಾವುದೇ ಚರ್ಚೆಗಳು ನಡೆದಿಲ್ಲ. ಸರ್ವೇ ನಡೆಸಿ ವರದಿಯನ್ನು ಕೂಡ ಕೇಂದ್ರ ಸರಕಾರಕ್ಕೆ ಸಲ್ಲಿಸಿಲ್ಲ ಎಂದು ನಳಿನ್ ಆರೋಪಿಸಿದರು.
ಗಾಂಜಾ, ಮರಳು ಮಾಫಿಯಾ ಜಿಲ್ಲೆಯಲ್ಲಿ ಹೆಚ್ಚಾಗಿದೆ. ರಾಜ್ಯ ಸರಕಾರದಿಂದ ಯಾವುದೇ ಜನಪರ ಕಾರ್ಯಕ್ರಮಗಳಾಗುತ್ತಿಲ್ಲ. ರಾಜ್ಯ ಸರಕಾರ ಪೂರ್ಣ ವೈಲ್ಯ ಕಂಡಿದೆ. ಈ ಹಿನ್ನೆಲೆಯಲ್ಲಿ ನ.9ರಂದು ಮಂಗಳೂರಿನ ಪುರಭವನದ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಬಳಿ ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸದ ನಳಿನ್ ತಿಳಿಸಿದರು.
ರಾಜ್ಯ ಸರಕಾರದ ವೈಲ್ಯವನ್ನು ಜನತೆಯ ಮುಂದೆ ತೆರೆದಿಡುವ ದೃಷ್ಟಿಯಿಂದ ನ.13ರಿಂದ 22ರವರೆಗೆ ಜಿಲ್ಲೆಯಲ್ಲಿ ಜನಸಂಕಲ್ಪ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ನಿರಂತರ 10 ದಿನಗಳ ಕಾಲ ವಿವಿಧೆಡೆ ಸಭೆ ನಡೆಸಲಾಗುವುದು. ನ.13ರಂದು ಸುಬ್ರಹ್ಮಣ್ಯದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಕಟೀಲುವರೆಗೆ ಈ ಯಾತ್ರೆ ಸಾಗಿ ಬಳಿಕ ಸಮಾರೋಪಗೊಳ್ಳಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್, ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಉಪಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮುಖಂಡರಾದ ಮೋನಪ್ಪ ಭಂಡಾರಿ, ಸಂಜೀವ ಮಠಂದೂರು, ಉಮಾನಾಥ ಕೋಟ್ಯಾನ್, ದೇವದಾಸ್ ಶೆಟ್ಟಿ, ಜಯರಾಮ ಶೆಟ್ಟಿ, ದಿವಾಕರ ಸಾಮನಿ, ಬೃಜೇಶ್ ಚೌಟ ಉಪಸ್ಥಿತರಿದ್ದರು.



