ಮಂಗಳೂರು: ಮೂಡಬಿದಿರೆಯಲ್ಲಿ ಇತ್ತೀಚಿಗೆ ನಡೆದ ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಕೊಲೆ ಸೇರಿದಂತೆ ಹಂಡೇಲುನಲ್ಲಿ ಅಶೋಕ್ ಪೂಜಾರಿ, ಯೋಗೀಶ್ ಅಚಾರ್ಯ, ಪೆರ್ಮುದೆಯಲ್ಲಿ ಹಿಂದೂ ಯುವಕನ ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳ ತನಿಖೆಯನ್ನು ಮುಖ್ಯಮಂತ್ರಿಗಳು ಸಿಬಿಐಗೆ ವಹಿಸಿಕೊಡಬೇಕು. ಈ ಎಲ್ಲಾ ಪ್ರಕರಣಗಳಲ್ಲಿ ನಿರ್ಲಕ್ಷ್ಯ ಹಾಗೂ ಸಂಶಯಾಸ್ಪದ ಧೋರಣೆ ವಹಿಸುತ್ತಾ ಬಂದಿರುವ ಸಚಿವ ಅಭಯಚಂದ್ರ ಜೈನ್ ರಾಜೀನಾಮೆ ನೀಡಬೇಕು ಎಂದು ದ.ಕ. ಜಿಲ್ಲಾ ಉಪಾಧ್ಯಕ್ಷ ಉಮಾನಾಥ ಕೋಟ್ಯಾನ್ ಆಗ್ರಹಿಸಿದ್ದಾರೆ.
ಮಂಗಳವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಸಮಯದಿಂದ ಹಿಂದೂ ಸಂಘಟನೆಗಳ ನಾಯಕರ ಮತ್ತು ಕಾರ್ಯಕರ್ತರ ಮೇಲೆ ನಿರಂತರ ನಡೆಯುತ್ತಿರುವ ಹಲ್ಲೆ ಮತ್ತು ಕೊಲೆಗಳ ಬಗ್ಗೆ ರಾಜ್ಯ ಸರಕಾರ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಚಕಾರವೆತ್ತದೆ ಇರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ. ಪೋಲಿಸ್ ಆಯುಕ್ತರು, ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕ ಅಭಯಚಂದ್ರ ಜೈನ್ ಅವರು ಕೊಲೆಯಾದ ಪ್ರಶಾಂತನ ಮನೆಗೆ ತೆರಳಿ ತಂದೆ, ತಾಯಿಗೆ ಸಾಂತ್ವಾನದ ಮಾತು ಹೇಳಿಲ್ಲ ಎಂದರು.
ಪ್ರಶಾಂತ್ ಕೊಲೆಗೂ ದಾವೂದ್ ಇಬ್ರಾಹಿಂ ಮತ್ತು ಐಎಸ್ಐಗೆ ನಂಟಿರುವ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದೆ. ಮಂಗಳೂರಿನಲ್ಲಿ ಪಾಕಿಸ್ತಾನದ ಐಎಸ್ಐನ ಸ್ಲಿàಪರ್ ಸೆಲ್ ಕಾರ್ಯ ನಿರ್ವಹಿಸುತ್ತಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವರದಿ ಹೇಳಿದೆ. ಇತ್ತೀಚಿನ ದಿನಗಳಲ್ಲಿ ಮಂಗಳೂರಿನಲ್ಲಿ ನಡೆದ ಘಟನೆಗಳು ಪಾಕಿಸ್ತಾನದ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವುದು ಇದಕ್ಕೆ ಪುಷ್ಠಿ ನೀಡುತ್ತದೆ ಎಂದರು.
ಬೆದರಿಕೆ ಕರೆ : ದಿಕ್ಕು ತಪ್ಪಿಸುವ ಯತ್ನ
ಅಭಯಚಂದ್ರ ಜೈನ್ ಅವರಿಗೆ ಅಂತಾರಾಷ್ಟ್ರೀಯ ಬೆದರಿಕೆ ಕರೆ ಬಂದಿರುವುದು ತನಿಖೆಯ ದಿಕ್ಕು ತಪ್ಪಿಸುವ ಯತ್ನ. ವಿದೇಶದಿಂದ ಈ ಬೆದರಿಕೆ ಕರೆ ಬಂದಿರುವುದರಿಂದ ಸಿಬಿಐಗೆ ನೀಡಿ ಇಂಟರ್ಪೋಲ್ ಮೂಲಕ ತನಿಖೆ ನಡೆಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಉತ್ತರ ಪ್ರದೇಶದ ದಾದ್ರಿಯಲ್ಲಿ ನಡೆದ ಘಟನೆಗೆ 45 ಲಕ್ಷ ರೂ. ಪರಿಹಾರ ನೀಡಿದಂತೆ ಇಲ್ಲಿಯೂ ಕನಿಷ್ಠ 25 ಲಕ್ಷ ರೂ. ಪರಿಹಾರ ನೀಡಬೇಕು. ತೀವ್ರ ಹಲ್ಲೆಗೊಳಗಾಗಿ ಒಂದು ಕೈ ಕಳೆದುಕೊಂಡಿರುವ ಅಶೋಕ್ ಪೂಜಾರಿ ಅವರ ಚಿಕಿತ್ಸೆಗೆ ಖರ್ಚಾಗಿರುವ ಸುಮಾರು 3 ಲಕ್ಷ ರೂಪಾಯಿಯನ್ನು ರಾಜ್ಯ ಸರಕಾರ ಭರಿಸಬೇಕು., ಸರಕಾರಿ ಉದ್ಯೋಗ ನೀಡಿ ಹೆಚ್ಚಿನ ಪರಿಹಾರ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಬಿಜೆಪಿ ಮೂಡಬಿದಿರೆ ಮಂಡಲ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಮುಖಂಡರಾದ, ಕಿಶೋರ್ ರೈ ಕಸ್ತೂರಿ ಪಂಜ, ರಘುರಾಮ್, ರವಿಶಂಕರ್ ಮಿಜಾರ್ ಮೊದಲಾದವರು ಉಪಸ್ಥಿತರಿದ್ದರು.




