ಮೈಸೂರು, ಅ.23: ಮೈಸೂರು ಸಂಸ್ಥಾನದ ಸಾಂಸ್ಕೃತಿಕ ವೈವಿಧ್ಯತೆಯ ಮುಂದೆ ಸರಳತೆ ಮಂಕಾಯಿತು. ರಾಜ್ಯದಲ್ಲಿ ಬರಗಾಲವಿದ್ದರೂ ಜನರ ಉತ್ಸಾಹಕ್ಕೆ ಬರವಿರಲಿಲ್ಲ. ದಸರೆಗೆ ಆರ್ಥಿಕ ಮುಗ್ಗಟ್ಟು ಎದುರಾದರೂ ಪ್ರವಾಸಿಗರ ಆನಂದಕ್ಕೆ ಮಿತಿಯಿರಲಿಲ್ಲ. ಒಂಬತ್ತು ದಿನಗಳ ನವರಾತ್ರಿಯ ದಶಮಿಯಂದು ಆಚರಿಸಲಾದ ಸರಳ, ಸಾಂಪ್ರದಾಯಿಕ ವಿಜಯದಶಮಿ ಮೆರವಣಿಗೆಗೆ ಸಾಂಸ್ಕೃತಿಕ ನಗರಿ ಸಾಕ್ಷಿಯಾಯಿತು.
ಹೌದು ! ದಸರೆ ಎಂದರೆ ಹಾಗೆ. ಸರಳವಾಗಿರಲಿ, ಅದ್ದೂರಿ ಯಾಗಿರಲಿ ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಗೆ ಮಾತ್ರ ಎಂದಿಗೂ ಬಡತನವಿಲ್ಲ ಎಂಬುವುದನ್ನು ಮೈಸೂರಿನ ಜನತೆ ಸಾಬೀತು ಪಡಿಸಿದರು. ಇಂದಿಲ್ಲಿ ಜರಗಿದ ಜಂಬೂಸವಾರಿಗೆ ಜನಸಾಗರವೇ ಹರಿದುಬಂದಿದ್ದು, ಅತ್ಯಂತ ಸರಳತೆಯಲ್ಲೂ ವೈವಿಧ್ಯತೆಯ ವಿಜಯ ದಶಮಿ ಮೆರವಣಿಗೆ ಜರಗಿತು.
ಮಧ್ಯಾಹ್ನ 12:05ಕ್ಕೆ ಸಲ್ಲುವ ಧನುರ್ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಮನೆಯ ಬಲರಾಮ ದ್ವಾರದ ಬಳಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಅವರಿಗೆ ಹಸಿರು ವರ್ಣದ ಮೈಸೂರು ಪೇಟ, ಶಲ್ಯ ಹೊದಿಸಿ ನಂದಿ ಪೂಜೆಗೆ ಆಹ್ವಾನಿಸಲಾಯಿತು. ಇದಕ್ಕೂ ಮುನ್ನ ತಮ್ಮ ಸಚಿವ ಸಹದ್ಯೋಗಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಐರಾವತ ಬಸ್ನಲ್ಲಿ ಅರಮನೆ ಆವರಣದಲ್ಲಿ ಬಂದಿಳಿದರು.
ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್, ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಉಮಾಶ್ರೀ, ಸಹಕಾರ ಸಚಿವ ಎಚ್.ಎಸ್.ಮಹಾದೇವಪ್ರಸಾದ್, ಲೋಕೋಪಯೋಗಿ ಸಚಿವ ಎಚ್. ಸಿ.ಮಹಾದೇವಪ್ಪ, ಮೇಯರ್ ಲಿಂಗಪ್ಪ, ಸಂಸದರಾದ ಆರ್.ಧ್ರುವ ನಾರಾಯಣ, ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಸಿ.ಶಿಖಾ ಮೊದಲಾದವರು ಉಪಸ್ಥಿತರಿದ್ದರು. ಅನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆದ ಜೀಪ್ನಲ್ಲಿ ಅರಮನೆಯ ಪ್ರಾಂಗಣಕ್ಕೆ ಆಗಮಿಸಿದರು. ಅತ್ತ ಗಣ್ಯರು ತಮ್ಮ ಸ್ಥಾನವನ್ನು ಅಲಂಕರಿಸುತ್ತಿದ್ದಂತೆಯೇ ವಿಜಯದಶಮಿ ಮೆರವಣಿಗೆ ಯ ಸಾಲಿನಲ್ಲಿ ಮೊದಲಿಗನಾಗಿ ದಸರಾ ಗಜಪಡೆಯ ಹಿರಿಯಣ್ಣ ಬಲರಾಮ ಆಗಮಿಸಿತು. ಈ ಬಾರಿ ನಿಶಾನೆ ಆನೆಯಾಗಿ ಕರ್ತವ್ಯ ನಿರ್ವಹಿಸಿದ ಬಲರಾಮನೊಂದಿಗೆ, ನಿಶಾನೆ ಆನೆಯಾಗಿ ಅಭಿಮನ್ಯು, ಪಟ್ಟದ ಆನೆಯಾಗಿ ವಿಕ್ರಂ ಮುಂಚೂಣಿಯಲ್ಲಿದ್ದವು. ವೀರಗಾಸೆ ನೃತ್ಯ ಜಂಬೂಸವಾರಿ ಆರಂಭದ ಸೂಚನೆ ನೀಡಿತು. ಅದಾದ ನಂತರ ಒಂದರ ಹಿಂದೆ ಒಂದು ಸ್ತಬ್ದ ಚಿತ್ರಗಳು, ಇದರ ನಡುವೆ, ಜಾನಪದ ಕಲಾ ತಂಡಗಳು ಗಣ್ಯರ ವೇದಿಕೆಯಿಂದ ಸಾಗಿ ಅರಮನೆಯ ಹೊರಾಂಗಣಕ್ಕೆ ಬರಲಾರಂಭಿಸಿದವು. ಸರಕಾರದ ವಿವಿಧ ಇಲಾಖೆಗಳ 23 ಸ್ತಬ್ದಚಿತ್ರ ಮತ್ತು 40ಕ್ಕೂ ಹೆಚ್ಚು ಜಾನಪದ ಕಲಾತಂಡ ಮೆರವಣಿಗೆಗೆ ಮೆರಗು ನೀಡಿದವು. ಹೊರ ರಾಜ್ಯಗಳಿಂದಲೂ ಜಾನಪದ ತಂಡಗಳು ಆಗಮಿಸಿದ್ದು ವಿಶೇಷ.
ಮಧ್ಯಾಹ್ನ 3:05ರ ಸುಮಾರಿಗೆ ಎಲ್ಲರ ನಿರೀಕ್ಷೆಯ ಚಿನ್ನದ ಅಂಬಾರಿ ಹೊತ್ತ ಅರ್ಜುನನ ಆಗಮನವಾಯಿತು. ಮೈಮೇಲೆ ಚಿತ್ತಾಕರ್ಷಕ ಚಿತ್ತಾರಗಳನ್ನು ಬಿಡಿಸಿದ್ದ ಅರ್ಜುನನಿಗೆ ಕೆಂಪು ಬಣ್ಣದ ರೇಷ್ಮೆ ವಸ್ತ್ರದಿಂದ ಅಲಂಕರಿಸಲಾಗಿತ್ತು. 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಗಣ್ಯರ ವೇದಿಕೆಯೆಡೆಗೆ ಹೆಜ್ಜೆ ಇಟ್ಟ ಅರ್ಜುನ ಅತ್ಯಂತ ಸಂಯಮದಿಂದ ನಡೆದುಕೊಂಡ. ಈತನೊಂದಿಗೆ ಸರಳ, ಚೈತ್ರಾ ಹೆಜ್ಜೆ ಹಾಕಿದವು. ಅರಮನೆ ಮುಂಭಾಗ ನಿರ್ಮಿಸಿದ್ದ ಎತ್ತರದ ವೇದಿಕೆಯನ್ನೇರಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ನಾಡದೇವಿ, ಯದುವಂಶದ ಕುಲದೇವತೆ ಶ್ರೀ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ದರು. ಇದೇ ಕಾಲಕ್ಕೆ 21 ಸುತ್ತು ಕುಶಾಲತೋಪು ಸಿಡಿಯಿತು. ಕರ್ನಾಟಕ ಪೊಲೀಸ್ ಬ್ಯಾಂಡ್ನಿಂದ ರಾಷ್ಟ್ರಗೀತೆ ಮೊಳಗಿತು. ವಿಶೇಷವೆಂದರೆ, ಅರ್ಜುನನ ಮಾವುತನಿಗೆ ಆನೆಯನ್ನು ಹತ್ತಿರಕ್ಕೆ ತರಲು ಸೂಚನೆ ನೀಡಿದ ಸಿಎಂ ಸಿದ್ದರಾಮಯ್ಯ, ಚಿನ್ನದ ಅಂಬಾರಿ ಯನ್ನು ಮುಟ್ಟಿ ನಮಸ್ಕರಿಸಿದರು.
ಯದುವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮುಖ್ಯಮಂತ್ರಿಯೊಂದಿಗೆ ಆಗಮಿಸಿ ಅರಮನೆ ಮತ್ತು ಸರಕಾರದ ನಡುವೆ ಇರುವ ಸಾಮರಸ್ಯಕ್ಕೆ ಕೊಂಡಿಯಾದರು. ಈ ಐತಿಹಾಸಿಕ ಕ್ಷಣವನ್ನು ಸಹಸ್ರ ಮಂದಿ ಕಣ್ತುಂಬಿಕೊಂಡರು.
ಜನರಿಗೆ ಬರವಿಲ್ಲ, ಆನಂದಕೆ್ಕ ಮಿತಿಯಿಲ್ಲ
ಮೈಸೂರು,ಅ.23: ರಾಜ್ಯದಲ್ಲಿ ತಲೆದೋರಿರುವ ಬರಗಾಲದ ಹಿನ್ನೆಲೆಯಲ್ಲಿ ಸರಕಾರ ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಿ ಸಿದರೂ, ಜಂಬೂಸವಾರಿಗೆ ಆಗಮಿಸಿದ ಜನರಿಗೆ ಬರವಿರಲಿಲ್ಲ. ಅವರ ಆನಂದಕ್ಕೆ ಮಿತಿ ಇರಲಿಲ್ಲ. ಎಲ್ಲವನ್ನೂ ಮರೆತು ಮೈಸೂರು ಕಡೆಗೆ ಮುಖ ಮಾಡಿದ ಜನತೆ ವಿಜಯದಶಮಿ ಮೆರವಣಿಗೆಯನ್ನು ವೀಕ್ಷಿಸಿದರು. ಸುಮಾರು 4 ಲಕ್ಷ ಕ್ಕೂ ಹೆಚ್ಚು ಮಂದಿ ದಸರಾ ಜಂಬೂಸವಾರಿ ವೀಕ್ಷಿಸಿದರು. ಮಧ್ಯಾಹ್ನ 12ಕ್ಕೆ ಜಂಬೂಸವಾರಿ ಆರಂಭಗೊಳ್ಳುತ್ತಿದ್ದರಿಂದ ಬೆಳಗ್ಗೆ 8 ಗಂಟೆಯಿಂದಲೇ ಸಾರ್ವಜನಿಕರು ಮೆರವಣಿಗೆ ಸಾಗುವ ರಾಜಮಾರ್ಗದ ಇಕ್ಕೆಲೆಗಳಲ್ಲಿ ಸ್ಥಳ ಕಾಯ್ದಿರಿಸಿಕೊಂಡು ಬಿಸಿಲಿನ ತಾಪವನ್ನೂ ಲೆಕ್ಕಿಸದ ಕಾದು ಕುಳಿತಿದ್ದರು. ಅರಮನೆಯ ಆವರಣದೊಳಗೆ ವಿವಿಐಪಿ, ವಿಐಪಿ, ವಿಶೇಷ ಆಹ್ವಾನಿಗರಿಗೆ ಸ್ಥಳಾವಕಾಶ ಮಾಡಲಾಗಿತ್ತು. ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಅರಮನೆ ಆವರಣದಲ್ಲಿ ಕುಳಿತು ಜಂಬೂಸವಾರಿ ವೀಕ್ಷಿಸಿದರು. ಇನ್ನು ಸಾಮಾನ್ಯ ಜನರು ಅರಮನೆಯ ಜಯಚಾಮರಾಜೇಂದ್ರ ವೃತ್ತದಿಂದ ಹಿಡಿದು ಬನ್ನಿಮಂಪಟದವರೆಗೂ ಸುಮಾರು 3.7 ಕಿ.ಮೀ ದೂರದವರೆಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನೆರೆದು ವಿಜಯದಶಮಿ ಮೆರವಣಿಗೆ ವೀಕ್ಷಿಸಿದರು. ರಸ್ತೆ ಬದಿ ಮಾತ್ರವಲ್ಲದೆ, ಎತ್ತರದ ಕಟ್ಟಡ, ಜಾಹೀರಾತು ಫಲಕ, ವಿದ್ಯುತ್ ಕಂಬ, ಮರಗಳನ್ನು ಏರಿದ ಜನರು ಚಿನ್ನದ ಅಂಬಾರಿಯ ದರ್ಶನವಾಗುವವರೆಗೂ ಜಾಗದಿಂದ ಅಲುಗಾಡಲಿಲ್ಲ. ಕೆ.ಆರ್.ವೃತ್ತದ ವಿಶೇಶ್ವರಯ್ಯ ಕಟ್ಟಡ, ನ್ಯೂ ಸಯ್ಯೆಜಿ ರಾವ್ ರಸ್ತೆಯ ವಾಣಿಜ್ಯ ಕಟ್ಟಡ, ಕೆ.ಆರ್.ಆಸ್ಪತ್ರೆ ವೃತ್ತದಲ್ಲಿ ಲೈಬ್ರರಿ, ಆಯುರ್ವೇದ ಆಸ್ಪತ್ರೆ ಕಟ್ಡಡಗಳಲ್ಲಿ ಜನ ಸ್ತೋಮವೇ ನೆರೆದಿತ್ತು. ಬಂಬೂ ಬಝಾರ್, ಹೈವೇ ವೃತ್ತದಲ್ಲಿ ಸಾವಿರಾರು ಮಂದಿ ಸ್ಥಳೀಯರು ಕುಳಿತು ದಸರಾ ವೀಕ್ಷಿಸಿದರು.
ವಿಶೇಷವೆಂದರೆ ಈ ಬಾರಿ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಸರಕಾರ ಸರಳ ದಸರೆ ಎಂದು ಘೋಷಿಸಿ, ಸ್ಥಳೀಯ ಮಟ್ಟದಲ್ಲಿ ದಸರಾ ಆಚರಿಸಿದರೂ, ಮೈಸೂರು ಅರಮನೆ, ಚಿನ್ನದ ಅಂಬಾರಿ ನೋಡಲು ಜನರು ಹಿಂದೆ ಬೀಳಲಿಲ್ಲ.
ಸರಳವಾಗಿದ್ದರೂ ಸಂಪ್ರದಾಯಕ್ಕೆ ಧಕ್ಕೆ ಇಲ್ಲ: ಮುಖ್ಯಮಂತ್ರಿ
ಮೈಸೂರು,ಅ.23: ಈ ಬಾರಿ ದಸರೆಯ ಮೇಲೆ ಬರಗಾಲ, ರೈತರ ಆತ್ಮಹತ್ಯೆಯ ಕಪ್ಪುಚುಕ್ಕೆ ಬಿದ್ದರೂ, ಜನರ ಸಹಕಾರ, ಬೆಂಬಲ ದೊಂದಿಗೆ ಅಚ್ಚುಕಟ್ಟಾದ ಸರಳ ದಸರೆಯನ್ನು ಆಚರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ದಸರಾ ವಿಜಯದಶಮಿ ಮೆರವಣಿಗೆಯನ್ನು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಿ ನಾಡಿಗೆ ಸಂದೇಶ ನೀಡಿದ ಸಿಎಂ, ರಾಜ್ಯಕ್ಕೆ ಕವಿದ ಬರ, ರೈತರ ಸಂಕಷ್ಟ ನೀಗಿ, ಹಿಂಗಾರಿನಲ್ಲಿ ಉತ್ತಮ ಮಳೆಯಾಗಿ ರೈತರು ಸಂತಸ, ಸಂಭ್ರಮದಿಂದ ಬದುಕು ವಂತಾಗಲಿ ಎಂದು ಆಶಿಸಿದರು. ರಾಜ್ಯದಲ್ಲಿ ಬರ ಮತ್ತು ರೈತರ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸರಳ ದಸರಾ ಆಚರಿಸಲಾಗಿದೆ. ರೈತರಲ್ಲಿ ಆತ್ಮಸ್ಥೈರ್ಯ, ಧೈರ್ಯ ತುಂಬಲು ದಸರಾ ಉತ್ಸವವನ್ನು ಸಾಮಾನ್ಯ ರೈತನಿಂದಲೇ ಉದ್ಘಾಟಿಸಿ ಇತಿಹಾಸ ನಿರ್ಮಿಸಿದ್ದೇವೆ. ಅನೇಕ ಸಂಭ್ರಮದ ಕಾರ್ಯಕ್ರಮಗಳನ್ನು ಕಡಿಗತೊಳಿಸಲಾಗಿತ್ತು. ಯುವ ದಸರಾ, ಆಹಾರ ಮೇಳ, ಯುವ ಸಂಭ್ರಮದಂತಹ ಕಾರ್ಯಕ್ರಮವನ್ನು ರದ್ದುಪಡಿಸಿದರೂ, ಸಂಪ್ರದಾಯಕ್ಕೆ ಧಕ್ಕೆ ಬಾರದಂತೆ ಅಚ್ಚುಕಟ್ಟಾಗಿ ದಸರೆಯನ್ನು ಆಚರಿಸಿದ್ದೇವೆ ಎಂದರು. ಮುಂಗಾರು ಕೈಕೊಟ್ಟಿದೆ. ಹಿಂಗಾರಿನಲ್ಲಿ ಸ್ವಲ್ಪ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಮಳೆಯಾಗಿ ಕೆರೆ ಕಟ್ಟೆಗಳು ತುಂಬಬೇಕು. ರೈತ ಸಮೃದ್ಧಿಯಾಗಬೇಕು. ನಾಡಿನ ಜನತೆ ಸುಖ, ಶಾಂತಿ, ನೆಮ್ಮದಿಯಿಂದ ಬಾಳುವಂತಾಗಬೇಕು. ಈಗಾಗಲೇ ರೈತರ ಸಂಕಷ್ಟಕ್ಕೆ ಸರಕಾರ ಅಗತ್ಯ ಕ್ರಮಕೈಗೊಂಡಿದೆ. ರೈತರ ಸಾಲದ ಮೇಲಿನ ಸುಸ್ತಿ ಬಡ್ಡಿ ಮನ್ನಾ ಮಾಡಿದ್ದೇವೆ. ಅಲ್ಪಾವಧಿ ಸಾಲಗಳನ್ನು ಮಧ್ಯಮಾವಧಿ, ಮಧ್ಯಮಾವಧಿ ಸಾಲವನ್ನು ದೀರ್ಘಾವಧಿ ಸಾಲಗಳನ್ನಾಗಿ ಪರಿವರ್ತಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಎಪ್ರಿಲ್ 1ರಿಂದ ಜಾರಿಗೆ ಬರುವಂತೆ ಪರಿಹಾರವನ್ನು 2 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಇತಿಹಾಸ, ಸಾಧನೆ ಸಾರಿದ ಮೂಕ ಚಿತ್ರಗಳು!
ಮೈಸೂರು, ಅ.23: ಇಲ್ಲಿನ ಸ್ತಬ್ಧಚಿತ್ರಗಳಿಗೆ ಜೀವವಿರಲಿಲ್ಲ. ಆದರೆ ಈ ನಿರ್ಜೀವ ಚಿತ್ರಗಳು ಮೈಸೂರಿನ ಗತವೈಭವ ಮತ್ತು ಸರಕಾರದ ಸಾಧನೆಗಳನ್ನು ಸಾರಿ ಸಾರಿ ಹೇಳಿದವು. ಒಂದಕ್ಕಿಂತ ಒಂದು ವಿಭಿನ್ನವಾಗಿದ್ದ ದಸರಾ ಜಂಬೂಸವಾರಿಯ ಸ್ತಬ್ಧಚಿತ್ರಗಳು ಪ್ರವಾಸಿಗರ ಗಮನ ಸೆಳೆಯಿತು. ವಿಶ್ವ ವಿಖ್ಯಾತ ದಸರಾ ಉತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರಿ ಸ್ಥಳೀಯ ಇಲಾ ಖೆಗಳ ಸ್ತಬ್ಧಚಿತ್ರಗಳು ಸರಕಾರದ ಸಾಧನೆಯನ್ನು ಬಿಂಬಿಸುವ ಪ್ರಚಾರದ ವೇದಿಕೆಗಳಾಗಿದ್ದು ಮಾತ್ರವಲ್ಲದೆ, ಮೈಸೂರಿನ ಪರಂಪರೆಗೆ ಹಿಡಿದ ಕನ್ನಡಿಯಾಗಿದ್ದವು. ಜಂಬೂಸವಾರಿಯಲ್ಲೂ ರೈತನಿಗೇ ಆದ್ಯತೆ ನೀಡಲಾಗಿತ್ತು. ಮೆರವಣಿಗೆಯ ಮೊದಲ ಸಾಲಿನಲ್ಲಿ ಕೃಷಿ ಇಲಾಖೆಯ ಸ್ತಬ್ಧಚಿತ್ರ ಗಮನ ಸೆಳೆಯಿತು. ರೈತ ಭಾಗ್ಯದ ಕಾರ್ಯಕ್ರಮಗಳು, ರೈತನಲ್ಲಿ ಆತ್ಮಸ್ಥೈರ್ಯ ತುಂಬುವ ಘೋಷವಾಕ್ಯಗಳು ರಾರಾಜಿಸಿದವು.
ನಗರಪಾಲಿಕೆಯ ‘ಭಾರತದಲ್ಲಿ ಸ್ವಚ್ಛತಾ ನಗರಗಳಲ್ಲಿ ಮೈಸೂರು ನಂ.1’ ಸ್ತಬ್ಧಚಿತ್ರ ಮೈಸೂರಿನ ಸಾಧನೆಯನ್ನು ಸಾರುವುದರ ಜೊತೆಗೆ ಕಸ ವಿಲೇವಾರಿ, ಜನ ಜಾಗೃತಿ ಮೂಡಿಸಿತು. ಕಂದಾಯ ಇಲಾಖೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಒಳಗೊಂಡ ಸ್ತಬ್ಧಚಿತ್ರ ಸರಕಾರದ ಕಾರ್ಯಕ್ರಮಗಳನ್ನು ಬಿಂಬಿಸಿದರೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ನಿಂದ ರಚಿಸಲಾಗಿದ್ದ ಸ್ತಬ್ಧಚಿತ್ರ ರೈತರ ಸಾಲ ಸೌಲಭ್ಯಗಳ ಮೇಲೆ ಬೆಳಕು ಚೆಲ್ಲಿತು.
ಅರಣ್ಯ ಇಲಾಖೆಯ ‘ಅರಣ್ಯ ರಕ್ಷಣೆ’ ಸ್ತಬ್ಧಚಿತ್ರ, ವಾರ್ತಾ ಇಲಾಖೆಯ ‘ಗಾಂಧಿ ಕಂಡ ಕನಸ್ಸು-ಕರ್ನಾಟಕದಲ್ಲಿ ನನಸು’ ಸ್ತಬ್ಧಚಿತ್ರ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಒಳಗೊಂಡ ಸ್ತಬ್ಧಚಿತ್ರ ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳನ್ನು ಸಾರಿತು. ಸರಕಾರದ 23ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ಒಂದಕ್ಕಿಂತ ಒಂದು ವಿಶಿಷ್ಟವಾಗಿದ್ದವು.
ಈ ನಡುವೆ, ಸ್ತಬ್ಧಚಿತ್ರಗಳ ನಡುವೆ ಸುಮಾರು 50ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು ಪ್ರೇಕ್ಷಕರ ಗಮನ ಸೆಳೆಯಿತು. ಸುಮಾರು 18 ಅಡಿ ಎತ್ತರ ಮರಗಾಲನ್ನು ಕಟ್ಟಿಕೊಂಡು ರಾವಣನ ಅವತಾರದಲ್ಲಿ ಬಂದ ವ್ಯಕ್ತಿ ಜಂಬೂ ಸವಾರಿಯ ಹೈ-ಲೈಟ್. ಅಲ್ಲದೆ, ವೀರಗಾಸೆ, ಹುಲಿ ವೇಷ, ಗೊರವರ ನೃತ್ಯ, ಕೊಡಗಿನ ಸುಗ್ಗಿ ನೃತ್ಯ, ಪಟಾದ ಕುಣಿತ, ಪೂಜಾ ಕುಣಿತ, ಕಂಸಾಳೆ ನೃತ್ಯ, ಡೋಲು ಕುಣಿತ, ಯಕ್ಷಗಾನ ತಂಡದ ಜೊತೆಗೆ ಮಹಾರಾಷ್ಟ್ರ, ಮಧ್ಯಪ್ರದೇಶ , ತಮಿಳುನಾಡಿನಿಂದಲೂ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು. ಇದರೊಂದಿಗೆ ಪಿರಂಗಿ ಗಾಡಿ, ಸಾರೋಟು ಸಂಗೀತ ವಾದ್ಯ, ಪೊಲೀಸ್ ಪಥ ಸಂಚಲನ ಅಶ್ವರೋಹಿ ಪಡೆ, ಮೇಯರ್ ಆರ್.ಲಿಂಗಪ್ಪ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಅವರ ಕುದುರೆ ಸವಾರಿ ಆಕರ್ಷಕವಾಗಿತ್ತು. ಒಟ್ಟಾರೆ, ಜಂಬೂಸವಾರಿಯ ಸ್ತಬ್ಧಚಿತ್ರಗಳು ಮೈಸೂರಿನ ಪರಂಪರೆ ಮತ್ತು ಸರಕಾರದ ಸಾಧನೆಯನ್ನು ಸಾರಿದವು.