ಹೊಸದಿಲ್ಲಿ, ಅ.23: ನಾಯಿಗೆ ಕಲ್ಲೊಂದನ್ನು ಎಸೆದರೆ ಸರಕಾರವನ್ನು ಹೊಣೆ ಮಾಡಲಾಗದು ಎಂಬ ಹೇಳಿಕೆ ನೀಡುವ ಮೂಲಕ ಕೇಂದ್ರದ ಸಹಾಯಕ ಸಚಿವ ವಿ.ಕೆ.ಸಿಂಗ್ ಬಿಜೆಪಿಯ ವಿವಾದಿತ ಹೇಳಿಕೆಗಳ ಪರಂಪರೆಯನ್ನು ಮುಂದುವರಿಸಿದ್ದಾರೆ.
ಫರೀದಾಬಾದ್‌ನಲ್ಲಿ ಇಬ್ಬರು ದಲಿತ ಮಕ್ಕಳನ್ನು ಬೆಂಕಿ ಹಚ್ಚಿಕೊಂದ ಪ್ರಕರಣದ ಹಿನ್ನೆಲೆಯಲ್ಲಿ ಅವರು ನೀಡಿರುವ ಈ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ವಿಪಕ್ಷಗಳು ಸಿಂಗ್‌ರ ಹೇಳಿಕೆಯನ್ನು ಟೀಕಿಸಿವೆ.
ಮೊದಲು ಸಿಂಗ್ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದರಾದರೂ ಸಂಜೆಯ ವೇಳೆಗೆ ಅವರು ಅದಕ್ಕಾಗಿ ಕ್ಷಮೆ ಯಾಚಿಸಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಮಾತನಾಡಿದ ಬಳಿಕ ಸಿಂಗರ ಸಂಪೂರ್ಣ ಕ್ಷಮಾಯಾಚನೆ ಹೇಳಿಕೆ ಹೊರ ಬಿದ್ದಿದೆ.
ಕೆಲವರು ಎರಡೂ ವಿಷಯಗಳನ್ನು ಮಿಶ್ರ ಮಾಡಿದ ಕಾರಣ ಈ ವಿವಾದ ಉಂಟಾಗಿದೆ. ಹಾಗಿದ್ದರೂ, ಯಾರದಾದರೂ ಭಾವನೆಗಳಿಗೆ ನೋವುಂಟಾಗಿದ್ದರೆ ತಾನು ಅದಕ್ಕಾಗಿ ಕ್ಷಮೆ ಯಾಚಿಸುತ್ತಿದ್ದೇನೆಂದು ಸ್ಪಷ್ಟಪಡಿಸುತ್ತಿದ್ದೇನೆ. ಕೆಲ ವರು ಅಸ್ತಿತ್ವದಲ್ಲೇ ಇರದ ಸಂಪೂರ್ಣ ಭಿನ್ನ ಚಿತ್ರವನ್ನು ಸೃಷ್ಟಿಸಿದ್ದಾರೆ ಯಾರನ್ನೂ ನೋಯಿಸುವ ಉದ್ದೇಶ ತನಗಿರಲಿಲ್ಲ.
ಕೆಲವರ ಕಾಲ್ಪನಿಕ ಜೋಡಣೆಯಿಂದ ಯಾರದಾದರೂ ಭಾವನೆಗಳಿಗೆ ನೋವಾಗಿದ್ದರೆ ನಾನು ಹೃತ್ಪೂರ್ವಕ ಕ್ಷಮೆ ಯೋಚಿಸುತ್ತಿದ್ದೇನೆ ಎಂದು ಥಾಯ್ಲೆಂಡ್‌ಗೆ ಹೋಗುವ ಮೊದಲು ಸಿಂಗ್ ಎಎಸ್‌ಐಗೆ ತಿಳಿಸಿದರು.
ತಾನು ಪ್ರತಿನಿಧಿಸುತ್ತಿರುವ ಗಾಝಿಯಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಸಿಂಗ್ ಈ ವಿವಾದಿತ ಹೇಳಿಕೆ ನೀಡಿದ್ದಾರೆ. ಅ.19-20ರ ನಡುವಿನ ರಾತ್ರಿ ಫರೀದಾಬಾದ್‌ನಲ್ಲಿ ಇಬ್ಬರು ದಲಿತ ಮಕ್ಕಳನ್ನು ಸಜೀವ ದಹನ ಮಾಡಿದ ಪ್ರಕರಣವನ್ನು ಉಲ್ಲೇಖಿಸುತ್ತ ಸಿಂಗ್, ಇದೊಂದು ವೈಯಕ್ತಿಕ ದ್ವೇಷದ ಪ್ರಕರಣವಾಗಿದೆ. ಇದರಲ್ಲೇನಾದರೂ ಆಡಳಿತಾತ್ಮಕ ಲೋಪವಾಗಿದೆಯೇ ಎಂಬುದನ್ನು ನೋಡುವುದು ಅಗತ್ಯಎಂದಿದ್ದರು. ಬಳಿಕ ಮಾತು ಮುಂದುವರಿಸಿದ ಅವರು, ಪ್ರತಿಯೊಂದಕ್ಕೂ- ಒಬ್ಬ ಒಂದು ನಾಯಿಗೆ ಕಲ್ಲು ಬಿಸಾಡಿದರೂ ಅದಕ್ಕೆ ಸರಕಾರ ಹೊಣೆ ಎನ್ನಲಾಗುತ್ತಿದೆ. ಅದು ಸರಿಯಲ್ಲ ಎಂದಿದ್ದರು.
ಸಿಂಗ್‌ರ ವಿರುದ್ಧ ಪರಿಶಿಷ್ಟ ಜಾತಿಗಳ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯನ್ವಯ ಕ್ರಿಮಿನಲ್ ಪ್ರಕರಣ ಹೂಡಬೇಕೆಂದು ಎವಿಪಿ ಆಗ್ರಹಿಸಿದೆ. ವಿಪಕ್ಷಗಳು ಸಿಂಗರ ಹೇಳಿಕೆಯನ್ನು 2014ರ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ‘ನಾಯಿ ಮರಿಯ’ ಹೇಳಿಕೆಗೆ ಸಮೀಕರಿಸಿವೆ. ಮೋದಿ ಮುಸ್ಲಿಮರ ವಿರುದ್ಧ ಈ ಹೇಳಿಕೆ ನೀಡಿದ್ದರೆಂದು ವಿಪಕ್ಷಗಳು ಆರೋಪಿಸಿದ್ದವು.
ಹರ್ಯಾಣದಲ್ಲಿ ದುರಂತಮಯ ದಲಿತ ಹತ್ಯೆಯ ಸಂಬಂಧ ಕೇಂದ್ರ ಸಚಿವರ ಸಹಿತ ಕೆಲವು ಬಿಜೆಪಿ ನಾಯಕರು ನೀಡಿರುವ ಅಸಂಬದ್ಧ ಹೇಳಿಕೆಗಳು ಆಘಾತಕಾರಿಯೆಂದು ನಿತೀಶ್ ಟ್ವೀಟಿಸಿದ್ದಾರೆ.
ಮೋದಿಯವರ ಸಚಿವರು ತುಚ್ಫ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ದೇಶದಲ್ಲಿ ಏನಾಗುತ್ತಿದೆ? ನಾಲಗೆಗೆ ಎಲುಬಿಲ್ಲವೆಂಬುದು ಎಲ್ಲರಿಗೂ ಗೊತ್ತು. ಆದರೆ, ಮೋದಿಯವರ ಸಚಿವರು ತುಚ್ಛ ಹೇಳಿಕೆಗಳ ಮೂಲಕ ದೇಶದ ಬೆನ್ನೆಲುಬನ್ನೇ ಮುರಿಯುತ್ತಿದ್ದಾರೆಂದು ಲಾಲು ಸಹ ಟ್ವೀಟ್ ಮಾಡಿದ್ದಾರೆ.
ಇತರ ವಿಪಕ್ಷ ನಾಯಕರೂ ಈ ಹೇಳಿಕೆಗಾಗಿ ಸಿಂಗ್‌ರ ವಿರುದ್ಧ ಹರಿ ಹಾಯ್ದಿದ್ದಾರೆ. ನಾಯಿಯ ಉಪಮೆಯು ‘ಅಸಂಬದ್ಧ ಮತ್ತು ರೇಜಿಗೆ ಹುಟ್ಟಿಸುವಂತಹದು’ ಎಂದು ಕ್ರಾಂಗ್ರೆಸ್ ನಾಯಕ ಮನೀಶ್ ತಿವಾರಿ ಹೇಳಿದ್ದಾರೆ.
ಸಿಂಗ್‌ರನ್ನು ಉಚ್ಚಾಟಿಸಬೇಕು ಹಾಗೂ ಅವರ ಪರವಾಗಿ ಪ್ರಧಾನಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿರುವ ಕಾಂಗ್ರೆಸ್ ವಕ್ತಾರ ರಣದೀಪ ಸುರ್ಜೋವಾಲಾ, ಪರಿಶಿಷ್ಟ ಜಾತಿಗಳ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯನ್ವಯ ಸಚಿವನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದಿದ್ದಾರೆ.
ರಾಷ್ಟ್ರೀಯ