ಮೈಸೂರು, ಅ. 23: ವಿಶ್ವ ವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿ ತನ್ನ ಹಿಂದಿನ ವೈಭವ, ಸಡಗರ, ಸಂಭ್ರಮದಿಂದ ನಡೆದಿದೆ. ನಾಡಿನ ವೈಭವದ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸುವ ಈ ಜಂಬೂ ಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಧ್ಯಾಹ್ನ ಮೈಸೂರು ಅರಮನೆಯ ಬಲರಾಮ ದ್ವಾರದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದ ನಂದಿ ಧ್ವಜಕ್ಕೆ ಧನುರ್ ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು.
ನಾಡದೇವತೆ ಚಾಮುಂಡೇಶ್ವರಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಲಾಂಕೃತ ಗಜಪಡೆಗಳು ಜಂಬೂ ಸವಾರಿಯಲ್ಲಿ ಗಾಂಭೀರ್ಯವಾದ ನಡೆ ಇಟ್ಟವು.
ಮೂರನೇ ಬಾರಿ ಅರ್ಜುನ
ಈ ಬಾರಿಯ ಅಂಬಾರಿಯನ್ನು ಆನೆ ಅರ್ಜುನ 3ನೇ ಬಾರಿ ಹೊತ್ತಿದ್ದು, ಗಜ ಗಾಂಭೀರ್ಯದಿಂದ ಮೆರವಣಿಗೆಯಲ್ಲಿ ಸಾಗುವ ಮೂಲಕ ಆನೆ ಅರ್ಜನ ಎಲ್ಲರ ಮನ ಸೂರೆಗೊಂಡಿತು.
ಇದಾದ ನಂತರ ಅಂಬಾ ವಿಲಾಸ ಅರಮನೆಯ ಆವರಣದಲ್ಲಿ ಸಲ್ಲಿಸುವ ಶುಭ ಮಕರ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ಇರಿಸಿದ್ದ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಪುಷ್ಪಾರ್ಚನೆ ಮಾಡಿದರು.
ಮೈಸೂರಿನ ನೂತನ ಯುವರಾಜರಾಗಿರುವ ಯದುವೀರ್ ಒಡೆಯರ್ ರವರಿಗೆ ಇದು ಪ್ರಥಮ ಜಂಬೂ ಸವಾರಿಯಾಗಿದ್ದು, ಸಡಗರ ಸಂಭ್ರಮದಿಂದ ಅವರು ಈ ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದರು.
65ಕ್ಕೂ ಹೆಚ್ಚು ಕಲಾ ಪ್ರಕಾರ
ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಈ ಜಂಬೂಸವಾರಿಯಲ್ಲಿ 65ಕ್ಕೂ ಹೆಚ್ಚು ನಾನಾ ಪ್ರಕಾರದ ತಂಡ ಕಲಾ ಪ್ರದರ್ಶನ ನೀಡುವ ಮೂಲಕ ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಿದರು.
ನಾಡಿದ ಇತಿಹಾಸ, ಪರಂಪರೆಯನ್ನು ಪ್ರಚುರಪಡಿಸುವ ವಿವಿಧ ಇಲಾಖೆಗಳ 23 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು. ಸರ್ಕಾರದ ಕಾರ್ಯಕ್ರಮಗಳನ್ನು ಬಿಂಬಿಸುವ ಸಾಕ್ಷ್ಯಚಿತ್ರಗಳನ್ನು ವಿವಿಧ ಇಲಾಖೆಗಳು ಸಿದ್ಧಪಡಿಸಿದ್ದು, ಆರೋಗ್ಯ ಇಲಾಖೆಯಿಂದ ಇಂದ್ರ ಧನುಷ್ ಅಭಿಯಾನದ ಸಾಕ್ಷ್ಯ ಚಿತ್ರ, ಇಂಧನ ಇಲಾಖೆಯಿಂದ ವಿದ್ಯುತ್ ಉಳಿತಾಯ ಸ್ತಬ್ಧ ಚಿತ್ರ, ಅರಣ್ಯ ಇಲಾಖೆಯಿಂದ ಅರಣ್ಯ ಸಂರಕ್ಷಣೆಯ ಕುರಿತಾದ ಸ್ತಬ್ಧ ಚಿತ್ರ, ವಾರ್ತಾ ಇಲಾಖೆಯ ಬಸವಣ್ಣನವರ ಅನುಭವ ಮಂಟಪದ ಸ್ತಬ್ಧ ಚಿತ್ರ, ಕಾವೇರಿ ನೀರಾವರಿ ನಿಗಮದ ಜಲ ಉಳಿತಾಯದ ಸ್ತಬ್ಧ ಚಿತ್ರ, ಶಿಕ್ಷಣ ಇಲಾಖೆಯ ಶಿಕ್ಷಣ ಜಾಗೃತಿಯ ಸ್ತಬ್ಧ ಚಿತ್ರ, ಕೃಷಿ ಇಲಾಖೆಯಿಂದ ಸಮಗ್ರ ಕೃಷಿ ಪದ್ಧತಿಯಿಂದ ಬದುಕು ಉತ್ತಮವಾಗುವುದು ಎಂದು ಬಿಂಬಿಸುವ ಸ್ತಬ್ಧ ಚಿತ್ರ, ನೀರು ಮತ್ತು ಮಣ್ಣಿನ ಸಂರಕ್ಷಣೆಯ ಸ್ತಬ್ಧ ಚಿತ್ರಗಳು ಗಮನ ಸೆಳೆದವು.
ಜನಸಾಗರ
ವೈಭವದ ಜಂಬೂ ಸವಾರಿಯನ್ನು ಕಣ್ತುಂಬಿಕೊಳ್ಳಲು ಮೆರವಣಿಗೆ ಸಾಗಿದ ಉದ್ದಕ್ಕೂ ಜನಸಾಗರವೇ ನೆರೆದಿತ್ತು.
ಅರಮನೆ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ವಿದೇಶಿಗರು ಜಂಬೂ ಸವಾರಿಯ ವೈಭವವನ್ನು ಅಚ್ಚರಿಯ ಕಣ್‌ಗಳಿಂದ ವೀಕ್ಷಿಸಿದರು.
ಜಂಬೂ ಸವಾರಿಯ ಹಿನ್ನಲೆಯಲ್ಲಿ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, ಅರಮನೆ ಆವರಣದಲ್ಲಿ ಸರ್ಪಗಾವಲು ಹಾಕಲಾಗಿತ್ತು.
ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಸಿಸಿಟಿವಿಯನ್ನು ಹಾಕಲಾಗಿದ್ದು , ಸುಮಾರು 7 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.
ಈ ಜಂಬೂ ಸವಾರಿಯಲ್ಲಿ ಮೈಸೂರು ಮೇಯರ್ ಆರ್. ಲಿಂಗಪ್ಪ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಇವರುಗಳು ಕುದುರೆ ಸವಾರಿ ಮಾಡಿದ್ದು ಎಲ್ಲರ ಗಮನ ಸೆಳೆಯಿತು.









