ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು, ಅ.23 : ಬಿಜೈ ಕಾಪಿಕಾಡ್ ಪೆಟ್ರೋಲ್ ಬಂಕ್ ಮುಂಭಾಗ ಅನೆಗುಂಡಿ ಕ್ರಾಸ್ ಬಳಿ ಕಾರು ಮತ್ತು ಬೈಕ್ ಮಧ್ಯೆ ನಡೆದ ಅಪಘಾತದಲ್ಲಿ ಬೈಕ್ ಸವಾರರಿಬ್ಬರೂ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆ ಸೇರಿದ ಘಟನೆ ಗುರುವಾರ ಮಧ್ಯೆ ರಾತ್ರಿ 12 ಗಂಟೆಯ ಸುಮಾರಿಗೆ ನಡೆದಿದೆ. ಅಪಘಾತದಲ್ಲಿ ಬೈಕಿನಲ್ಲಿದ್ದ ಇಬ್ಬರು ಯುವಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣ ನಗರದ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಲ್ಲಿ ಗಾಯಗೊಂಡವರನ್ನು ಬೈಕ್ ಸವಾರ ಬೆಳ್ತಂಗಡಿ ನಿವಾಸಿ ಪ್ರಫುಲ್ ಶೆಟ್ಟಿ ( 23) ಹಾಗೂ ಸಹಸವಾರ ಬಿಜೈ ನಿವಾಸಿ ಸೌರವ್ ಶೆಟ್ಟಿ (20) ಎಂದು ಗುರುತಿಸಲಾಗಿದೆ. ಪ್ರಫುಲ್ ಶೆಟ್ಟಿ ಕಾಲಿಗೆ ಗಂಭೀರ ಗಾಯಗಳಾಗಿದ್ದು, ತೀವ್ರ ನಿಗಾಘಟಕದಲ್ಲಿ ಇರಿಸಲಾಗಿದೆ. ಇಂದು ಸಂಜೆ ಶಸ್ತ್ರ ಚಿಕಿತ್ಸೆ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಸೌರವ್ ಶೆಟ್ಟಿ ಕಾಲಿಗೂ ಗಂಭೀರ ಗಾಯಗಳಾಗಿದ್ದು, ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿರುವ ಸೌರವ್ ಶೆಟ್ಟಿಯನ್ನು ವಾರ್ಡ್ಗೆ ಶಿಪ್ಟ್ ಮಾಡಲಾಗಿದೆ.
ಬಿಜೈ ಅನೆಗುಂಡಿ ನಿವಾಸಿ ದಿನೇಶ್ ಎಂಬವರು ಎಂದಿನಂತೆ ಕಾಪಿಕಾಡ್ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ ತಮ್ಮ ಮಾರುತಿ 800 ಕಾರಿನಲ್ಲಿ ಅನೆಗುಂಡಿಯ ತಮ್ಮ ನಿವಾಸಕ್ಕೆ ತೆರಳಲು ಅನತಿ ದೂರದಲ್ಲಿರುವ ರಸ್ತೆಯನ್ನು ಕ್ರಾಸ್ ಮಾಡುತ್ತಿದ್ದಾಗ ಕುಂಟಿಕಾನ್ ಕಡೆಯಿಂದ ವೇಗವಾಗಿ ಬಂದ ಇತ್ತೀಚಿನ ನವೀನ ಮಾದರಿಯ ರೋಯಲ್ ಎನ್ಫಿಲ್ಡ್ ಬುಲೆಟ್ ಬೈಕ್ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಹೊಡೆದ ರಭಸಕ್ಕೆ ಬೈಕ್ ಮೂರು ಪಲ್ಟಿ ಹೊಡೆದು ಅಲ್ಲೆ ಸಮೀಪದ ಹೊಂಡಕ್ಕೆ ಬಿದ್ದಿದೆ. ಅಪಘಾತದ ರಭಸಕ್ಕೆ ಕಾರು ಮತ್ತು ಬೈಕ್ ಸಂಪೂರ್ಣ ಜಖಾಂಗೊಂಡಿದ್ದು, ಕಾರು ಚಾಲಕ ಅಪಾಯದಿಂದ ಪರಾರಿಯಾಗಿದ್ದಾರೆ. ಪಶ್ಚಿಮ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.























